Happy Birthday CNR Rao: ವಿಜ್ಞಾನಿ ಸಿಎನ್ಆರ್ ರಾವ್ಗೆ ಇಂದು 86ನೇ ಜನುಮ ದಿನ, ವಿಜ್ಞಾನದೆಡೆಗೆ ಅದೇ ಕೌತುಕ-ಮುಗ್ಧತೆ!
Bharat Ratna CNR Rao: ಆರೇಳು ದಶಕಗಳಿಂದ ರಸಾಯನಶಾಸ್ತ್ರದಲ್ಲಿ ಒಂದಿಲ್ಲೊಂದು ಪ್ರಯೋಗಗಳಲ್ಲಿ ತೊಡಗಿರುವ ಪ್ರತಿಷ್ಠಿತ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪುರಸ್ಕೃತ ಸಿಎನ್ಆರ್ ರಾವ್ ಇಂದಿಗೂ ಯಾವುದಾದರೂ ಸಂಶೋಧನೆ ಮಾಡಿದರೆ ಅದಾಗತಾನೆ ಪ್ರಯೋಗಾಲಯಕ್ಕೆ ಎಂಟ್ರಿ ಕೊಟ್ಟ ಕಾಲೇಜು ವಿದ್ಯಾರ್ಥಿಯಂತೆ ಸಂಭ್ರಮಿಸುತ್ತಾರೆ.
ಬೆಂಗಳೂರು: ನಮ್ಮ ನಡುವಿನ ಸುಪ್ರಸಿದ್ಧ ವಿಜ್ಞಾನಿ ಸಿಎನ್ಆರ್ ರಾವ್ ಅವರಿಗೆ ಇಂದು 86ನೇ ಜನುಮ ದಿನ… ಇಂದಿಗೂ ವಿಜ್ಞಾನದೆಡೆಗೆ ಅದೇ ಮುಗ್ಧತೆ ಕಾಪಾಡಿಕೊಂಡು ಲವಲವಿಕೆಯಿಂದ ಇರುವ ಭಾರತ ರತ್ನ ಪುರಸ್ಕಾರಕ್ಕೆ ಭಾಜನವಾಗಿ ಹಿಮಾಲಯದೆತ್ತರದ ವ್ಯಕ್ತಿತ್ವ ರೂಪಿಸಿಕೊಂಡಿರುವ ಚಿಂತಾಮಣಿ ನಾಗೇಶ ರಾಮಚಂದ್ರರಾವ್ (C. N. R. Rao) ಅವರಿಗೆ ಪ್ರೀತಿಯ ಹ್ಯಾಪಿ ಬರ್ಥ್ಡೆ!
ಪ್ರಪಂಚದಾದ್ಯಂತ ಇರುವ 83 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿರುವ ಸಿಎನ್ಆರ್ ರಾವ್ ರಾಜಧಾನಿ ಬೆಂಗಳೂರಿನಿಂದ 80 ಕಿಮಿ ದೂರದ ಚಿಂತಾಮಣಿ ಪಟ್ಟಣದವರು. ಆರೇಳು ದಶಕಗಳಿಂದ ರಸಾಯನಶಾಸ್ತ್ರದಲ್ಲಿ ಒಂದಿಲ್ಲೊಂದು ಪ್ರಯೋಗಗಳಲ್ಲಿ ತೊಡಗಿರುವ ಪ್ರತಿಷ್ಠಿತ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪುರಸ್ಕೃತ ಸಿಎನ್ಆರ್ ರಾವ್ ಇಂದಿಗೂ ಯಾವುದಾದರೂ ಸಂಶೋಧನೆ ಮಾಡಿದರೆ ಅದಾಗತಾನೆ ಪ್ರಯೋಗಾಲಯಕ್ಕೆ ಎಂಟ್ರಿ ಕೊಟ್ಟ ಕಾಲೇಜು ವಿದ್ಯಾರ್ಥಿಯಂತೆ ಸಂಭ್ರಮಿಸುತ್ತಾರೆ.
1770 ಸಂಶೋಧನಾ ಪ್ರಕಟಣೆಗಳು, 50ಕ್ಕೂ ಹಚ್ಚು ವಿಜ್ಞಾನ ಪುಸ್ತಕಗಳನ್ನು ಬರೆದಿರುವ ಪದ್ಮವಿಭೂಷಣ ಪುರಸ್ಕೃತ ಹೆಮ್ಮೆಯ ಕನ್ನಡಿಗ ಸಿಎನ್ಆರ್ ರಾವ್ ತಮ್ಮ 17ನೇ ವಯಸ್ಸಿನಲ್ಲಿ ಮೈಸೂರಿನಲ್ಲಿ BSc ಪದವಿ ಪಡೆದು, ದೇಶದ ಪ್ರತಿಷ್ಠಿತ ಮಹಾ ವಿಶ್ವವಿದ್ಯಾಲಯವಾದ, ಭಾರತ ರತ್ನ ಬನಾರಸ್ ವಿಶ್ವ ವಿದ್ಯಾಯದಲ್ಲಿ MSc ಪದವಿ ಗಳಿಸಿದ್ದಾರೆ. ಒಂದೇ ಉಸುರಿನಲ್ಲಿ ವಿಜ್ಞಾನದಲ್ಲಿ ಪದವಿಗಳನ್ನು ಬಾಚಿಕೊಳ್ಳುತ್ತಾ ಸಾಗಿದ ಸಿಎನ್ಆರ್ ಸರ್, ಅಮೆರಿಕದ ಪುರಾತನ ಯೂನಿವರ್ಸಿಗಳಲ್ಲಿ ಒಂದಾದ Purdue Universityಯಲ್ಲಿ PhD ಗಳಿಸಿದರು!
1934ರ ಜೂನ್ 30ರಂದು ಜನಿಸಿದ ಸಿಎನ್ಆರ್ ರಾವ್ ಅವರು ಇಂದಿಗೂ ದೇಶಕ್ಕಾಗಿ ಏನಾದರೂ ಮಹತ್ತರ ಕೊಡುಗೆ ನೀಡಬೇಕು ಎಂದು ತುಡಿಯುವ ಯುವ ಮನಸುಳ್ಳವರು. ಪಿಎಚ್ಡಿ ಪಡೆದು ಅಮೆರಿಕದಿಂದ ವಾಪಸಾದ ಸಿಎನ್ಆರ್ ರಾವ್ ಅವರಿಗೆ ಆಗ 24 ವರ್ಷ. ಅಷ್ಟು ಚಿಕ್ಕ ವಯಸ್ಸಿಗೇ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (Indian Institute of Science) ಲೆಕ್ಚರರ್ ಆಗಿ ಸೇರಿಕೊಂಡವರು. ನಾನು ಬಸವನಗುಡಿಯಲ್ಲಿದ್ದೆ. ನಾನೂ ‘ಎಪಿಎಸ್ ಪ್ರಾಡಕ್ಟ್’ (Acharya Patashala high school) ಎಂದು ಸಿಎನ್ಆರ್ ರಾವ್ ಅದೊಮ್ಮೆ ಸಂದರ್ಶನದಲ್ಲಿ ಹೆಮ್ಮೆಯಿಂದ ಮೆಲುಕು ಹಾಕಿದ್ದರು.
ಈ ಮಧ್ಯೆ ಇಡೀ ಪ್ರಪಂಚ ಸುತ್ತಿಬಂದು ಇದೀಗ ಐಐಎಸ್ಇ ಸಮೀಪದಲ್ಲೇ ವಿಶ್ರಾಂತ ಜೀವನ ನಡೆಸುತ್ತಿದ್ದಾರಾದರೂ ಇಂದಿಗೂ ಪುಸ್ತಕಗಳ ಮಧ್ಯೆಯೇ ಶಿಸ್ತಾಗಿ ಕುಳಿತು ಅಧ್ಯಯನ ನಿರತರು. ಇವರ ಪತ್ನಿ ಇಂದುಮತಿ (Indumati Rao) ಸಹ ಇವರಷ್ಟೇ ಚಟುವಟಿಕೆಯಿಂದ ಸಕ್ರಿಯರಾಗಿದ್ದಾರೆ. ಅವರೂ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳು ಸಂಜಯ್ ಮತ್ತು ಸುಚಿತ್ರ (Sanjay and Suchitra).
ಎರಡು ಬಾರಿ ಪ್ರಧಾನ ಮಂತ್ರಿಗಳಿಗೆ ವೈಜ್ಞಾನಿಕ ಸಲಹೆಗಾರರಾಗಿದ್ದರು. ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವೈಜ್ಞಾನಿಕ ಸಲಹೆಗಾರರಾಗಿ ಕರ್ನಾಟಕಕ್ಕೆ ಸೇವೆ ಸಲ್ಲಿಸಿದ್ದಾರೆ. ಇದುವರೆಗೂ ಮೂವರು ವಿಜ್ಞಾನಿಗಳು ಮಾತ್ರವೇ ಭಾರತ ರತ್ನ ಪುರಸ್ಕೃತರು. ಮೊದಲನೆಯವರು ಸರ್ ಸಿವಿ ರಾಮನ್(C.V. Raman) ನಂತರ ಎಪಿಜೆ ಅಬ್ದುಲ್ ಕಲಾಂ (A. P. J. Abdul Kalam). ಮೂರನೆಯವರು ಸಿಎನ್ಆರ್ ರಾವ್. HBD Bharat Ratna CNR Rao Sir…
Published On - 11:19 am, Wed, 30 June 21