ಹಾಸನ: ಕುಡುಗೋಲಿನಿಂದ ಹಲ್ಲೆ, ಪತ್ನಿ ಸತ್ತಿದ್ದಾಳೆಂದು ತಿಳಿದು ಪತಿ ಆತ್ಮಹತ್ಯೆಗೆ ಶರಣು
ಪತಿರಾಯನೋರ್ವ ಕುಡುಗೋಲಿನಿಂದ ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ಹೆಂಡ್ತಿ ಸತ್ತಿದ್ದಾಳೆಂದು ಭಾವಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ, (ಜನವರಿ 09): ಪತ್ನಿ ಮೃತಪಟ್ಟಿದ್ದಾಳೆಂದು ತಿಳಿದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿಟ್ಟಗೊಂಡನಹಳ್ಳಿಯಲ್ಲಿ ನಡೆದಿದೆ. ಪ್ರಶಾಂತ್(32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪತ್ನಿ ಬಿಂದುಳನ್ನು ಕೊಲೆ ಮಾಡಬೇಕೆಂದೆ ಪ್ರಶಾಂತ್, ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಪತ್ನಿ ಸತ್ತಿದ್ದಾಳೆಂದು ತಿಳಿದು ಪ್ರಶಾಂತ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದ್ರೆ, ಹಲ್ಲೆಗೊಳಗಾದ ಪತ್ನಿ ಬಿಂದು ಇನ್ನೂ ಜೀವಂತವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗೌರಿಕೊಪ್ಪಲು ಗ್ರಾಮದ ನಿವಾಸಿಯಾಗಿರುವ ಪ್ರಶಾಂತ್, 2 ವರ್ಷಗಳ ಹಿಂದೆ ಬಿಟ್ಟಗೊಂಡನಹಳ್ಳಿಯ ಬಿಂದು ಜೊತೆ ವಿವಾಹವಾಗಿದ್ದ. ಬಳಿಕ ಕೌಟುಂಬಿಕ ಕಲಹದಿಂದಾಗಿ ಬಿಂದು ತವರು ಮನೆ ಸೇರಿದ್ದಳು. ಇದರಿಂದ ಕೋಪಗೊಂಡಿದ್ದ ಪ್ರಶಾಂತ್, ಬಿಂದು ಇದ್ದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಬಿಂದು ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ್ದರಿಂದ ಬಿಂದು ಮೃತಪಟ್ಟಿದ್ದಾಳೆಂದು ಭಾವಿಸಿ ಆಕೆ ಮನೆಯಲ್ಲೇ ಪ್ರಶಾಂತ್ ನೇಣಿಗೆ ಶರಣಾಗಿದ್ದಾನೆ. ಆದ್ರೆ, ಹಲ್ಲೆಯಿಂದ ಗಂಭೀರ ಗಾಯಗೊಂಡ ಬಿಂದು ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊಳೆನರಸೀಪುರ ನಗರ ಪೊಲೀಸರು ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:17 pm, Tue, 9 January 24