ಹಾಸನ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; ಮುಖ್ಯ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ, ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ಮಾಡಿದ ಹಿನ್ನಲೆ ಆ ಊರಿನ ಗ್ರಾಮಸ್ಥರೆಲ್ಲರೂ ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ.
ಹಾಸನ, ಸೆ.01: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕನಿಗೆ (Head Master) ಗ್ರಾಮಸ್ಥರೆಲ್ಲರೂ ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಮುಖ್ಯ ಶಿಕ್ಷಕ ಮಂಜುನಾಥ್, ಏಳನೇ ತರಗತಿ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ತೋರಿದ್ದರಂತೆ. ಹೀಗಾಗಿ ವಿದ್ಯಾರ್ಥಿನಿಯರು ಪೋಷಕರ ಬಳಿ ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಪೋಷಕರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಿಗೆ ದೂರು ನೀಡಿದ್ದು, ಅವರು ಈ ಕುರಿತು ಬಿಇಒ ಬಳಿ ಹೇಳಿದ್ದಾರೆ.
ಮುಖ್ಯ ಶಿಕ್ಷಕನಿಗೆ ಗೂಸಾ
ಇನ್ನು ಘಟನೆ ಬಗ್ಗೆ ವಿಚಾರಿಸಲು ಇಂದು (ಸೆ.01) ಶಾಲೆಗೆ ಬರುವುದಾಗಿ ಬಿಇಒ ಹೇಳಿದ್ದಾರೆ. ಆದರೆ, ಬರುವುದು ತಡವಾದ ಹಿನ್ನೆಲೆ ಮುಖ್ಯ ಶಿಕ್ಷಕನಿಗೆ ಗ್ರಾಮಸ್ಥರೆಲ್ಲರೂ ಸೇರಿ ಗೂಸಾ ಕೊಟ್ಟಿದ್ದಾರೆ. ವಿಷಯ ತಿಳಿದು ಗ್ರಾಮದ ಶಾಲೆಗೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಯ ಬಾಗಿಲು ಹಾಕಿಕೊಂಡು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು ಕಚೇರಿಯ ಬಾಗಿಲನ್ನು ಒಡೆದು ಧ್ವಂಸಗೊಳಿಸಿ, ಬಿಇಒ ಎದುರೇ ಶಿಕ್ಷಕನಿಗೆ ಮತ್ತೆ ಥಳಿಸಿ ಹೊರ ಎಳೆದುಕೊಂಡು ಬಂದಿದ್ದಾರೆ.
ಮುಖ್ಯ ಶಿಕ್ಷಕನನ್ನು ವಶಕ್ಕೆ ಪಡೆದ ಪೊಲೀಸರು
ಇನ್ನು ಎರಡೂವರೆ ತಿಂಗಳ ಹಿಂದೆ ಅಷ್ಟೇ ಮುಖ್ಯ ಶಿಕ್ಷಕ ಮುಂಜುನಾಥ್ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಇದೀಗ ಇಂತಹ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಖ್ಯ ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ಜೀಪ್ ಅಡ್ಡಗಟ್ಟಿ ಮಂಜುನಾಥ್‌ನನ್ನು ನಮ್ಮ ವಶಕ್ಕೆ ನೀಡುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ. ಕೊನೆಗೆ ಗ್ರಾಮಸ್ಥರ ಮನವೊಲಿಸಿ ಮಂಜುನಾಥ್‌ನನ್ನು ಪೊಲೀಸರು ಕರೆದೊಯ್ದಿದ್ದಾರೆ. ಈ ಘಟನೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ