ಹಾಸನ ಸಂಸದ ಶ್ರೇಯಸ್​​ ಪಟೇಲ್​​,-ಶಾಸಕ ಎ.ಮಂಜು ನಡುವೆ ತಿಕ್ಕಾಟ: ಅಧಿಕಾರಿಗಳಿಗೆ ಸಂಕಟ!

ಹಾಸನ ಸಂಸದ ಶ್ರೇಯಸ್ ಪಟೇಲ್ ಮತ್ತು ಶಾಸಕ ಎ. ಮಂಜು ನಡುವಿನ ರಾಜಕೀಯ ತಿಕ್ಕಾಟ ತೀವ್ರಗೊಂಡಿದ್ದು, ನಿಯಮ ಉಲ್ಲಂಘಿಸಿ ಸಭೆ ನಡೆಸಿದ್ದಾರೆಂದು ಆರೋಪಿಸಿ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಶಾಸಕರು ಹಕ್ಕುಚ್ಯುತಿ ದೂರು ನೀಡಿದ್ದಾರೆ. ಆದರೆ ಶಾಸಕರ ನಡೆ ಖಂಡಿಸಿರುವ ಸಂಸದರು, ಇದೇ ರೀತಿ ಮುಂದುವರಿದರೆ ತಾನು ಕೂಡ ಲೋಕಸಭಾ ಸ್ಪೀಕರ್​​ಗೆ ದೂರು ನೀಡಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

ಹಾಸನ ಸಂಸದ ಶ್ರೇಯಸ್​​ ಪಟೇಲ್​​,-ಶಾಸಕ ಎ.ಮಂಜು ನಡುವೆ ತಿಕ್ಕಾಟ: ಅಧಿಕಾರಿಗಳಿಗೆ ಸಂಕಟ!
ಹಾಸನದ ರಾಜಕಾರಣಿಗಳ ನಡುವೆ ತಿಕ್ಕಾಟ
Image Credit source: Tv9 Kannada
Edited By:

Updated on: Sep 11, 2026 | 6:03 PM

ಹಾಸನ, ಸೆಪ್ಟೆಂಬರ್​​ 11: ಸಂಸದ ಶ್ರೇಯಸ್ ಪಟೇಲ್ ಮತ್ತು ಶಾಸಕ ಎ. ಮಂಜು ನಡುವಿನ ರಾಜಕೀಯ ತಿಕ್ಕಾಟದ ಪರಿಣಾಮ ಹಾಸನದ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಗ್ರಾಮ ಪಂಚಾಯತ್​​ ಮಟ್ಟದ ಸಭೆ ಸಂಬಂಧ ಹಾಸನ ಜಿಲ್ಲಾದಿಕಾರಿ, ಅಪರ ಜಿಲ್ಲಾದಿಕಾರಿ, ಜಿಲ್ಲಾ ಪಂಚಾಯತ್​​ ಸಿಇಒ, ಹೊಳೆನರಸೀಪುರ ತಾಲೂಕು ಪಂಚಾಯತ್​​ ಇಒ ಮತ್ತು ತಹಶೀಲ್ದಾರ್​​ ವಿರುದ್ಧ ಜೆಡಿಎಸ್​​ ಶಾಸಕ ಎ. ಮಂಜು ವಿಧಾನಸಭೆ ಅಧ್ಯಕ್ಷರಿಗೆ ಹಕ್ಕುಚ್ಯುತಿ ಸಂಬಂಧ ದೂರು ನೀಡಿದ್ದಾರೆ.

ಶಾಸಕರು-ಸಂಸದರ ನಡುವೆ ತಿಕ್ಕಾಟ ಯಾಕೆ?

ಸೆಪ್ಟೆಂಬರ್ 1ರಂದು ಹಳ್ಳಿ ಮೈಸೂರು ಗ್ರಾಮ ಪಂಚಾಯತ್​​ನಲ್ಲಿ ಸಂಸದ ಶ್ರೇಯಸ್​​ ಪಟೇಲ್​​ ಪ್ರಗತಿ ಪರಿಶೀಲನೆ ಸಭೆ ಕರೆದಿದ್ದರು. ಈ ಬಗ್ಗೆ ಡಿಸಿ, ಸಿಇಒಗೆ ಆಗಸ್ಟ್ 28ರಂದು ಪತ್ರ ಬರೆದು, ಹೊಳೆನರಸೀಪುರ ತಹಶೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಖುದ್ದು ಹಾಜರಿಗೆ ಮನವಿ ಮಾಡಿದ್ದರು. ಸಂಸದರ ಪತ್ರ ಆಧರಿಸಿ ಡಿಸಿ ಕಚೇರಿಯಿಂದ ತಹಶೀಲ್ದಾರ್​​ಗೆ, ಸಿಇಒ ಕಚೇರಿಯಿಂದ ತಾಲೂಕು ಪಂಚಾಯತ್​​ ಇಒಗೆ ಪತ್ರ ರವಾನಿಸಲಾಗಿತ್ತು. ಆದರೆ ಈ ಸಭೆ ಬಗ್ಗೆ ಶಾಸಕ ಎ. ಮಂಜು ಆಕ್ಷೇಪ ವ್ಯಕ್ತಪಡಸಿದ್ದರು. ಕೋಡಲೇ ಎಚ್ಚೆತ್ತ ಡಿಸಿ ಪ್ರಗತಿ ಪರಿಶೀಲನೆ ಸಭೆ ಹೆಸರಿನಲ್ಲಿ ಬರೆಯಲಾಗಿದ್ದ ಪತ್ರ ವಾಪಸ್ ಪಡೆದಿದ್ದರು. ಇಷ್ಟೆಲ್ಲ ನಡೆದ ಬಳಿಕ ಮತ್ತೆ ಹೊಸದಾಗಿ ಅಗಸ್ಟ್ 31ರಂದು ಗ್ರಾಮ ಪಂಚಾಯತ್​​ನಲ್ಲಿ ಅಹವಾಲು ಸ್ವೀಕಾರ ಸಭೆ ಎಂದು ಭೇಟಿಯ ಉದ್ದೇಶ ಬದಲಾವಣೆ ಮಾಡಿ ಸಂಸದರು ಪತ್ರ ಬರೆದಿದ್ದರು. ಹೀಗಾಗಿ ಈ ಸಂಬಂಧ ಸೂಕ್ತ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ ನಿಯಮ ಉಲ್ಲಂಘನೆ ಮಾಡಿ ಅರಕಲಗೂಡು ವಿಧಾನಸಭಾ ವ್ಯಾಪ್ತಿಯ ಹಳ್ಳಿಮೈಸೂರಲ್ಲಿ ಸಭೆ ನಡೆಸಲಾಗಿದೆ. ಇದರಿಂದ ಶಾಸಕನ ಹಕ್ಕಿಗೆ ಚ್ಯುತಿಯಾಗಿದೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಎ. ಮಂಜು ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್ ವಸತಿ ಶಾಲೆ ಮಕ್ಕಳ‌ ನರಕಯಾತನೆ, ದನದ ಶೆಡ್‌ನಂತಿರುವ ಕಟ್ಟದಲ್ಲಿ 172 ಮಕ್ಕಳು, 5 ವರ್ಷಗಳಿಂದ ಇದೇ ಸ್ಥಿತಿ!

ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಶ್ರೇಯಸ್​​ ಪಟೇಲ್​​, ಹಳ್ಳಿಮೈಸೂರು ನನ್ನ ಸ್ವಂತ ಹೋಬಳಿ ಮತ್ತು ಕರ್ಮಭೂಮಿ. ಹಾಗಾಗಿ ಅಲ್ಲಿ ಗ್ರಾಮ ಪಂಚಾಯತ್​​ಗೆ ಭೇಟಿ ಕೊಟ್ಟಿದ್ದೆ. ಅದು ಹಿಂದುಳಿದ ಹೋಬಳಿಯಾಗಿರುವ ಕಾರಣ ತಹಶೀಲ್ದಾರ್​​ ಮತ್ತು ಇಒ ಕರೆಸಿ ಮಾಹಿತಿ ಪಡೆಯಲು ಹೋಗಿದ್ದೆ. ಈ ವೇಳೆ ಅಲ್ಲಿ ಸಾವಿರಾರು ಜನ ಸೇರಿದ್ದರು. ಅವರು ಪತ್ರ ಹಿಡಿದು ಬಂದಾಗ ನಾನು ಅಹವಾಲು ಕೇಳಬೇಕಲ್ಲವೇ? ಅದರಲ್ಲಿ ಹಕ್ಕುಚ್ಯುತಿ ಎಲ್ಲಿ ಬಂತು ಎಂದವರು ಪ್ರಶ್ನಿಸಿದ್ದಾರೆ. ತಾನು ದಿಶಾ ಸಮಿತಿ ಅಧ್ಯಕ್ಷನಾಗಿದ್ದು, ಆ ಮೀಟಿಂಗ್​​ನಲ್ಲೇ ಗ್ರಾಮ ಪಂಚಾಯತ್​​ನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ನಾನೂ ಜನಪ್ರತಿನಿಧಿಯೇ, ನನಗೂ 7 ಲಕ್ಷ ಜನ ಮತ ನೀಡಿದ್ದಾರೆ. ಇದೇ ರೀತಿ ನಡೆದರೆ ನಾನೂ ಕಾನೂನು ಹೋರಾಟ ಮಾಡಬೇಕಾಗುತ್ತೆ, ಲೋಕಸಭಾ ಸ್ಪೀಕರ್​​ಗೆ ದೂರು ನೀಡಬೇಕಾಗುತ್ತೆ ಎಂದವರು ಎಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us