ಬಿಜೆಪಿ ಜೆಡಿಎಸ್ ಮೈತ್ರಿ ಲೋಕಸಭಾ ಚುನಾವಣೆಗೆ ಸೀಮಿತವಲ್ಲ, ಶಾಶ್ವತ: ಬಿವೈ ವಿಜಯೇಂದ್ರ
ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಲೋಕಸಭೆ ಚುನಾವಣೆಯ ನಂಗತರವೂ ಮುಂದುವರಿಯುವುದು ದೃಢಪಟ್ಟಿದೆ. ಈ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರು ಈಗಾಗಲೇ ಘೋಷಣೆ ಮಾಡಿದ್ದರು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಮೈತ್ರಿ ಮುಂದುವರಿಯಲಿದೆ ಎಂದಿದ್ದಾರೆ.
ಹಾಸನ, ಏಪ್ರಿಲ್ 4: ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ (BJP JDS Alliance) ಶಾಶ್ವತವಾದದ್ದು. ಲೋಕಸಭಾ ಚುನಾವಣೆಗೆ (Lok Sabha Elections) ಮಾತ್ರ ಸೀಮಿತವಾಗಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದರು. ಹಾಸನದಲ್ಲಿ ಮೈತ್ರಿ ಅಭ್ಯರ್ಥಿ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ನಾಮಪತ್ರ (Prajwal Revanna Nomination) ಸಲ್ಲಿಕೆ ವೇಳೆ ಹಾಜರಿದ್ದು ಅವರು ಮಾತನಾಡಿದರು. ರೈತ, ದಲಿತ ವಿರೋಧಿ ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಕಿತ್ತೊಗೆಯಬೇಕು. ಆ ನಿಟ್ಟಿನಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ನಮ್ಮೆಲ್ಲರ ಹಿರಿಯರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡಿರಲಿಲ್ಲ. ಈ ಚುನಾವಣೆಯಲ್ಲಿ ದೇವೇಗೌಡರ ಆಶೀರ್ವಾದ ನಮ್ಮ ಮೇಲಿದೆ ಎಂದು ವಿಜಯೇಂದ್ರ ಹೇಳಿದರು.
ಪ್ರಧಾನಿ ಮೋದಿ ಅವರಿಗಾಗಿ ಹೆಚ್ಡಿ ದೇವೇಗೌಡರು ಮೈತ್ರಿ ಮಾಡಿಕೊಂಡಿದ್ದಾರೆ. ದೇವೇಗೌಡರು ಖುದ್ದು ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಹಾಸನ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಗೆಲ್ಲಿಸಲು ನಾವು ಕೆಲಸ ಮಾಡಬೇಕು ಎಂದು ವಿಜಯೇಂದ್ರ ಹೇಳಿದರು.
ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಮೊಮ್ಮಗ ಪ್ರಜ್ವಲ್ ನಾಮಪತ್ರ ಸಲ್ಲಿಕೆ ವೇಳೆ ದೇವೇಗೌಡರು ಹಾಜರಿದ್ದರು. ಉಳಿದಂತೆ ಬಿವೈ ವಿಜಯೇಂದ್ರ, ಹೆಚ್.ಡಿ.ರೇವಣ್ಣ, ಡಿ.ವಿ.ಸದಾನಂದ ಗೌಡ ಹಾಜರಿದ್ದರು.
ನಾಮಪತ್ರ ಸಲ್ಲಿಕೆ ಬಳಿಕ ದೇವೇಗೌಡರ ನೇತೃತ್ವದಲ್ಲಿ ರೋಡ್ಶೋ ನಡೆಯಿತು. ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ಪರ ದೇವೇಗೌಡ ರೋಡ್ಶೋ ನಡೆಸಿ ಮತಯಾಚನೆ ಮಾಡಿದರು.
ಮೈತ್ರಿ ತಾತ್ಕಾಲಿಕವಲ್ಲ ಎಂದಿದ್ದ ಕುಮಾರಸ್ವಾಮಿ, ದೇವೇಗೌಡ
ಈ ಮೈತ್ರಿ ತಾತ್ಕಾಲಿಕವಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಲೋಕಸಭೆ ಚುನಾವಣೆ ನಂತರವೂ ಮುಂದುವರಿಯಲಿದೆ. ಮೈತ್ರಿ ನಾಯಕರು ಭದ್ರ ಬುನಾದಿ ಹಾಕಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಅಸಾಧ್ಯ ಎಂದು ಇತ್ತೀಚೆಗೆ ಕುಮಾರಸ್ವಾಮಿ ಸಹ ಹೇಳಿದ್ದರು. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ತಾತ್ಕಾಲಿಕವಲ್ಲ, ಮುಂದೆಯೂ ಇರಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ ಮಾರ್ಚ್ 30ರಂದು ಘೋಷಣೆ ಮಾಡಿದ್ದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ನಂತರವೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆ: ದೇವೇಗೌಡ ಅಧಿಕೃತ ಘೋಷಣೆ
ತುಮಕೂರಿನಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ದೇವೇಗೌಡರು, ಚುನಾವಣೆ ಮುಗಿದ ಮೇಲೆಯೂ ಬಿಜೆಪಿ ಜೆಡಿಎಸ್ ಸಂಬಂಧ ಮುಂದುವರೆಯುತ್ತದೆ. ಈ ಸಂಬಂಧ ಕಾಪಾಡಿಕೊಂಡು ಹೋಗುತ್ತೇವೆ. ನಮ್ಮ ಬಾಂಧವ್ಯ ತಾತ್ಕಾಲಿಕವಲ್ಲ. ಈ ಬಾಂಧವ್ಯವನ್ನ ಮುಂದುವರೆಸಿಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ