ಹಾಸನ, ಜುಲೈ 22: ಹಾಸನ ಜಿಲ್ಲೆಯ ಶಿರಾಡಿ ಘಾಟ್ನಲ್ಲಿ ಭೂಕುಸಿತದ ಗೋಳು ಮುಗಿಯುತ್ತಿಲ್ಲ. ಈ ಮಧ್ಯೆ, ಭಾನುವಾರ ಹಾಸನ ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಬೇಟಿ ನೀಡಿದ್ದ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್, ಮಳೆ ಹಾನಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹಣ ಇಲ್ಲದೆ ಸರ್ಕಾರ ಪಾಪರ್ ಅಗಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗುಡುಗಿದ್ದಾರೆ. ಜತೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ಸಂಬಂಧ ಕೇಂದ್ರ ಸರ್ಕಾರದ ನೆರವು ಕೊಡಿಸುವ ಭರವಸೆ ನೀಡಿದ್ದಾರೆ.
ರಾಜ್ಯದ ಹಲವು ನಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವರುಣಾಘಾತಕ್ಕೆ ಸಿಲುಕಿದ ಮಲೆನಾಡು ಭಾಗದ ಜನರು ತತ್ತರಿಸಿಹೋಗಿದ್ದು ಹಾಸನ ಜಿಲ್ಲೆಯಲ್ಲೂ ಕೂಡ ಆಲೂರು, ಬೇಲೂರು, ಸಕಲೇಶಫುರ ಭಾಗದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಅದರಲ್ಲೂ ಬೆಂಗಳೂರು ಹಾಗು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನಲ್ಲಿ ಪದೇ ಪದೆ ಭೂ ಕುಸಿತ ಆಗುತ್ತಿದ್ದು ಆತಂಕದ ನಡುವೆ ವಾಹನಗಳು ಸಂಚರಿಸುತ್ತಿವೆ.
ಭಾನುವಾರ ಬೆಳ್ಳಂಬೆಳಿಗ್ಗೆಯೇ ಹಾಸನಕ್ಕೆ ಆಗಮಿಸಿದ್ದ ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್ಡಿ ಕುಮಾರಸ್ವಾಮಿ ಹಲವು ಸ್ಥಳಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಪೂರ್ಣವಾಗಿ ಕುಸಿಯುತ್ತಿರುವ ಸಕಲೇಶಪುರ ತಾಲ್ಲೂಕಿನ ಕೊಲ್ಲಹಳ್ಳೀಬಳಿಯ ರಾಷ್ಟ್ರೀಯ ಹೆದ್ದಾರಿ ಹಾಗೂ ಶೀರಾಡಿಘಾಟ್ನ ದೊಡ್ಡತಪ್ಲು ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಬಗ್ಗೆ ಆಕ್ರೋಶ ಇದೆ. ಈ ಬಗ್ಗೆ ಕೇಂದ್ರ ಸಾರಿಗೆ ಸಚಿವರ ಜೊತೆಗೆ ಚರ್ಚೆಮಾಡಿ ಅವರನ್ನೇ ಕರೆತರುವ ಯತ್ನ ಮಾಡುತ್ತೇನೆ ಎಂದ ಕುಮಾರಸ್ವಾಮಿ, ನಾವು ನೆನ್ನೆಯಿಂದ ಹಲವು ಕಡೆ ಮಳೆ ಹಾನಿ ಪ್ರದೇಶಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದೇನೆ. ಆದರೆ, ರಾಜ್ಯದ ಆಡಳಿತ ಪಕ್ಷದ ನಾಯಕರು ನಾನು ಕರ್ನಾಟಕಕ್ಕೆ ಬಡುವುದನ್ನೇ ಇಷ್ಟಪಡುತ್ತಿಲ್ಲ. ಹಾಗಿದ್ದರೆ ನನ್ನಿಂದ ಏನು ನಿರೀಕ್ಷೆ ಮಾಡುತ್ತೀರಿ? ನಾನು ಪದೇ ಪದೆ ಬಂದರೆ ಅವರಿಗೆ ಕಾಲುಗಳು ನಡುಗುತ್ತವೆ ಎಂದು ಲೇವಡಿ ಮಾಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಮಳೆ ಆರಂಬಗೊಂಡಿದೆ, ಏಳು ದಿನಗಳಿಂದ ಅಬ್ಬರಿಸಿ ಬೊಬ್ಬಿರಿದ ಮಳೆಯಿಂದ ಜಿಲ್ಲೆಯ ನದಿ ತೊರೆಗಳೆಲ್ಲಾ ತುಂಬಿ ಹರಿದು ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ ಕೂಡ ಭರ್ತಿಯಾಗಿದೆ. ಕಳೆದ ವರ್ಷದ ಬೀಕರ ಬರಗಾಲದಿಂದ ಕಂಗೆಟ್ಟಿದ್ದ ಜನರಿಗೆ ಮುಂಗಾರು ಮಳೆಯ ಅಬ್ಬರ ಖುಷಿಯನ್ನೇನೋ ತಂದಿದೆ. ಆದರೆ, ನಿರಂತರ ಮಳೆಯಿಂದ ಕುಸಿಯುತ್ತಿರುವ ಸೇತುವೆ, ಮನೆಗಳು, ಹೆದ್ದಾರಿಗಳೆಲ್ಲಾ ಆತಂಕ ಸೃಷ್ಟಿಮಾಡುತ್ತಿವೆ. ಬೆಟ್ಟಗುಡ್ಡಗಳ ಕುಸಿತ ಜೀವ ಭಯ ಸೃಷ್ಟಿಮಾಡಿದೆ.
ಸರ್ಕಾರ ಜನರ ನೆರವಿಗೆ ಧಾವಿಸಬೇಕು, ಮಳೆಯಿಂದ ಮನೆಗೆ ನೀರು ನುಗ್ದಿದ್ರೆ 10 ಸಾವಿರ ರೂ. ಪರಿಹಾರ ಕೊಡಬೇಕು. ಮನೆ ಕುಸಿದರೆ 5 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಕೇಂದ್ರ ಸಚಿವರು ಪರಿಶೀಲನೆ ನಡೆಸಿದರೆ ಏನಾಗುತ್ತದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕಗೆ ಟಾಂಗ್ ಕೊಟ್ಟ ಆರ್ ಅಶೋಕ್, ಅವರು ಬರುವುದಿಲ್ಲ. ನಾವು ಬಂದು ನೋಡಿದರೆ ಸಹಿಸುವುದಿಲ್ಲ. ಅವರೇ ಬಂದು ನೋಡಲಿ ಜನರ ಸಂಕಷ್ಟಕ್ಕೆ ನೆರವು ನೀಡಲಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಶಿರಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ಅವಕಾಶ, ಷರತ್ತುಗಳು ಅನ್ವಯ
ಕುಮಾರಸ್ವಾಮಿ ಕೇಂದ್ರ ಸಚಿವರು. ಅವರು ಬಂದು ಪರಿಶೀಲನೆ ನಡೆಸಲು ಹಕ್ಕಿದೆ. ಇವರು ಕೇಂದ್ರದ ಅನುದಾನದಿಂದಲೇ ಪರಿಹಾರ ನೀಟುತ್ತಾ ಇದ್ದಾರೆ. ಇವರು ಒಂದು ಬಿಡಿಗಾಸು ಹಣ ಕೊಟ್ಟಿಲ್ಲ. ಕೊಡೋಕೆ ಸರ್ಕಾರದ ಬಳಿ ಹಣವೇ ಇಲ್ಲಾ ಎಂದು ಸರ್ಕಾರದ ವಿರುದ್ಧ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ