ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಕಾರು: ಒಂದೂವರೆ ವರ್ಷದ ಮಗು ಸೇರಿ ತಾಯಿ ಸಾವು

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಲ್ಲನಘಟ್ಟ ಬಳಿ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಹೇಮಾವತಿ ನಾಲೆಗೆ ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಒಂದೂವರೆ ವರ್ಷದ ಮಗು ಸೇರಿದಂತೆ ತಾಯಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸದ್ಯ ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಕಾರು: ಒಂದೂವರೆ ವರ್ಷದ ಮಗು ಸೇರಿ ತಾಯಿ ಸಾವು
ನಾಲೆಗೆ ಬಿದ್ದ ಸ್ವಿಫ್ಟ್ ಕಾರು
Image Credit source: tv9 kannada
Edited By:

Updated on: Apr 29, 2026 | 5:02 PM

ಹಾಸನ, ಏಪ್ರಿಲ್​ 29: ಚಾಲಕನ ನಿಯಂತ್ರಣ ತಪ್ಪಿ (Accident) ಹೇಮಾವತಿ ನಾಲೆಗೆ ಸ್ವಿಫ್ಟ್ ಕಾರು ಬಿದ್ದು ಪರಿಣಾಮ  ತಾಯಿ ಸೇರಿದಂತೆ ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಲ್ಲನಘಟ್ಟ ಬಳಿ ನಡೆದಿದೆ. ಪ್ರಿಯಾಂಕಾ(30) ಮತ್ತು ಮಗು ವೈಭವ್ ಮೃತರು. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬೆಂಗಳೂರಿನ ದೇವನಹಳ್ಳಿ ಮೂಲದ ಕುಟುಂಬವು ಸ್ವಿಫ್ಟ್ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಮುಗಿಸಿಕೊಂಡು ಮರಳಿ ಬರುತ್ತಿದ್ದರು. ಚನ್ನರಾಯಪಟ್ಟಣ ತಾಲೂಕಿನ ಮಲ್ಲನಘಟ್ಟ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿದ್ದ ಹೇಮಾವತಿ ನಾಲೆಗೆ ಬಿದ್ದಿದೆ. ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ದಂಪತಿ ತೆರಳುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ: ಪತ್ನಿ ಸಾವು, ಪತಿಗೆ ಗಾಯ

ದಂಪತಿ ತೆರಳುತ್ತಿದ್ದ ಬೈಕ್​ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪತ್ನಿ ಸಾವನ್ನಪ್ಪಿದ್ದು, ಪತಿ ಗಾಯಗೊಂಡಿರುವಂತಹ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಫ್ಲೈಓವರ್ ಬಳಿ ನಡೆದಿದೆ. ರಾಣಿ ಮೃತ ಪತ್ನಿ. ಗಂಭೀರವಾಗಿ ಗಾಯಗೊಂಡಿರುವ ಪತಿ ನಾಗೇಂದ್ರರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಉಡುಪಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹಾಗೂ ಟ್ರಕ್‌ಗೆ ಡಿಕ್ಕಿಯಾದ ಪ್ರವಾಸಿ ಬಸ್; ಇಬ್ಬರು ವಿದ್ಯಾರ್ಥಿಗಳು ಸಾವು!

ದಂಪತಿ ಮದುವೆ ಕಾರ್ಯಕ್ರಮ ಮುಗಿಸಿ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ, ಬೈಕ್​​ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ನಂಜನಗೂಡು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಎಕ್ಸೆಲ್​ ವೈಯರ್​ ತುಂಡಾಗಿ ಜಮೀನಿಗೆ ನುಗ್ಗಿದ ಸಾರಿಗೆ ಬಸ್

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮದ ಬಳಿ ಎಕ್ಸೆಲ್​ ವೈಯರ್​ ತುಂಡಾಗಿ ಸಾರಿಗೆ ಬಸ್ ಜಮೀನಿಗೆ ನುಗ್ಗಿದ ಘಟನೆ ನಡೆದಿದೆ. ಬಸ್​ನಲ್ಲಿ ಇದ್ದ 55ಕ್ಕೂ ಹೆಚ್ಚು ಪ್ರಯಾಣಿಕರು ಸುರಕ್ಷಿತವಾಗಿದ್ದು, ಭಾರೀ ಅಪಘಾತವೊಂದು ತಪ್ಪಿದೆ.

ಇದನ್ನೂ ಓದಿ: ಕೊಳ್ಳೇಗಾಲ: ಮದುವೆ ಮನೆಯಲ್ಲಿ ಚಿನ್ನದ ವಿಚಾರಕ್ಕೆ ಭಾರಿ ಗಲಾಟೆ, ಚಾಕುವಿನಿಂದ ಇರಿದು ಮರ್ಮಾಂಗಕ್ಕೆ ಒದ್ದು ಹಲ್ಲೆ

ಓರ್ವ ಮಹಿಳೆಗೆ ಗಾಯವಾಗಿದ್ದು, ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೆ.ಬಸಾಪುರ ಗ್ರಾಮದಿಂದ ಸಿಂಧನೂರಿಗೆ ಸರ್ಕಾರಿ ಬಸ್ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಸಿಂಧನೂರು ಗ್ರಾಮೀಣ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us