ಹಾಸನ: ಕಾಡಾನೆ ಸೆರೆ ಕಾರ್ಯಾಚರಣೆ ದಿಢೀರ್ ಸ್ಥಗಿತ, ಸದ್ದಿಲ್ಲದೆ ಸಾಕಾನೆಗಳ ವಾಪಸ್ ಕಳುಹಿಸಿರುವ ಅರಣ್ಯಾಧಿಕಾರಿಗಳು
ಕಾಡಾನೆ ಹಾವಳಿಯಿಂದ ಬೇಸತ್ತಿರುವ ಹಾಸನ ಜಿಲ್ಲೆಯ ಜನತೆಗೆ ಮತ್ತೆ ಸಂಕಷ್ಟ ಎದುರಾಗಿದೆ. ಕಾಡಾನೆ ಸೆರೆಗೆ ಕಾರ್ಯಾಚರಣೆ ಮತ್ತೆ ಆರಂಭವಾಗಿದೆ ಎಂದು ಖುಷಿಯಲ್ಲಿದ್ದ ಜನರ ಮುಖದಲ್ಲಿ ಈಗ ನಿರಾಸೆ ಕಾದಿದೆ. ಕಾರಣ, ಅರಣ್ಯ ಇಲಾಖೆ ಅಧಿಕಾರಿಗಳು ಸದ್ದಿಲ್ಲದೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು ಮತ್ತು ಸಾಕಾನೆಗಳನ್ನು ವಾಪಸ್ ಕಳುಹಿಸುತ್ತಿರುವುದು.
ಹಾಸನ, ಜನವರಿ 23: ಹಾಸನ ಜಿಲ್ಲೆಯಲ್ಲಿ (Hassan) ನಡೆಯುತ್ತಿದ್ದ ಕಾಡಾನೆ (Wild Elephant) ಸೆರೆ ಕಾರ್ಯಾಚರಣೆ ದಿಢೀರ್ ಸ್ಥಗಿತಗೊಂಡಿದೆ. ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಿಲ್ಲಿಸಿ ಸದ್ದಿಲ್ಲದೆ ಸಾಕಾನೆಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ಜನವರಿ 4ರಂದು ಬೇಲೂರು (Belur) ತಾಲ್ಲೂಕಿನ ಮತ್ತಾವರ ಬಳಿ ಕಾರ್ಮಿಕರೊಬ್ಬರನ್ನು ಕಾಡಾನೆ ಕೊಂದುಹಾಕಿತ್ತು. ಇದಾದ ನಂತರ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿತ್ತು. ಸ್ಥಳೀಯರಿಂದ ವ್ಯಾಪಕ ಆಗ್ರಹ ವ್ಯಕ್ತವಾದ ಬೆನ್ನಲ್ಲೇ ಅರಣ್ಯ ಇಲಾಖೆ ಇತ್ತೀಚೆಗೆ ಮತ್ತೆ ಕಾಡಾನೆ ಸೆರೆ ಕಾರ್ಯಾಚರಣೆ ಸೆರೆ ಆರಂಭಿಸಿತ್ತು.
ಎರಡು ಕಾಡಾನೆಗಳನ್ನು ಇತ್ತೀಚೆಗೆ ಸೆರೆಹಿಡಿಲಾಗಿತ್ತು. ಆದರೆ, ಹಂತಕ ಆನೆಗಳ ಪೈಕಿ ಯಾವುದನ್ನೂ ಸೆರೆ ಹಿಡಿಯದೆ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದು ಇದೀಗ ಮತ್ತೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಕಾರ್ಮಿಕ ವಸಂತ್ ಬಲಿ ಪಡೆದಿದ್ದ ಸೀಗೆ ಹೆಸರಿನ ಕಾಡಾನೆ, ಈ ಆನೆ ಜೊತೆಗೆ ಶಾರ್ಪ್ ಶೂಟರ್ ವೆಂಕಟೇಶ ಬಲಿ ಪಡೆದ ಭೀಮಾ ಹಾಗು ದಸರಾ ಆನೆ ಅರ್ಜುನನನ್ನು ಕೊಂದ ಆನೆಗಳ ಸೆರೆಗೆ ಜನ ಒತ್ತಾಯಿಸಿದ್ದರು. ಆದರೆ, ಈ ಯಾವುದೇ ಆನೆಗಳನ್ನು ಸೆರೆ ಹಿಡಿಯದೆ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಅಧಿಕಾರಿಗಳು ಸಾಕಾನೆಗಳನ್ನು ವಾಪಸ್ ಕಳುಹಿಸಿದ್ದಾರೆ.
ಕಾರ್ಯಾಚರಣೆ ಸ್ಥಗಿತಕ್ಕೆ ಕಾರಣವೇನು?
ಕೆಲ ಆನೆಗಳು ಕಾರ್ಯಾಚರಣೆಗೆ ಕಷ್ಟವಾಗುವ ಸ್ಥಳದಲ್ಲಿವೆ. ಕೆಲ ಆನೆಗೆ ಮದವೇರಿದೆ, ಹೀಗಾಗಿ ಅವುಗಳನ್ನು ಸೆರೆ ಹಿಡಿಯುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಮದವೇರಿದ ಕಾಡಾನೆ ಸೆರೆಗೆ ಮುಂದಾದರೆ ಮತ್ತೆ ಸಮಸ್ಯೆ ಆಗಬಹುದು ಎಂಬ ಭೀತಿಯಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಕಾರ್ಯಾಚರಣೆಗೆ ಬಂದ 8 ಸಾಕಾನೆಗಳು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ, ಬಿಕ್ಕೋಡು ಗ್ರಾಮದ ಬಳಿ ತಾತ್ಕಾಲಿಕ ಕ್ಯಾಂಪ್‌ನಲ್ಲಿದ್ದವು.
ಡಿಸಂಬರ್ 4 ರಂದು ದಸರಾ ಆನೆ ಅರ್ಜುನನ ಸಾವಿನಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಜನವರಿ 13 ರಿಂದ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರಿದಿತ್ತು. ಇದುವರೆಗೂ ಅರಣ್ಯ ಇಲಾಖೆ ಆರು ಸಲಗಗಳನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಿದೆ. ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅಲ್ಲಿಯೇ ಬಿಟ್ಟಿದೆ.
ಯಾವೆಲ್ಲ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗಿ?
ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ದಸರಾ ಆನೆ ಅಭಿಮನ್ಯು, ಇತರ ಆನೆಗಳಾದ ಪ್ರಶಾಂತ, ಹರ್ಷ, ಸುಗ್ರೀವ, ಅಶ್ವತ್ಥಾಮ, ಕರ್ನಾಟಕ ಭೀಮ, ಧನಂಜಯ, ಮಹೇಂದ್ರ ಭಾಗಿಯಾಗದ್ದವು. ಇವುಗಳು ಇದೀಗ ಮಂಗಳವಾರ ಬೆಳ್ಳಂಬೆಳಗ್ಗೆ ಕ್ಯಾಂಪ್‌ಗಳಿಗೆ ವಾಪಾಸ್ಸಾಗಿವೆ.
ಇದನ್ನೂ ಓದಿ: ಹಾಸನ: ಗ್ರಾಮೀಣ ಭಾಗದ ಜನರಿಗೆ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ: 3ನೇ ದಿನದ ಕಾರ್ಯಾಚರಣೆ ಯಶಸ್ವಿ
ಹಾಸನದಲ್ಲಿ ಕಾಡಾನೆ, ಮಾನವ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಾಗಿವೆ. ಅದರಲ್ಲೂ ಜಿಲ್ಲೆಯ ಬೇಲೂರು ಬಳಿ ಹಲವು ಮಂದಿ ಮೇಲೆ ಕಾಡಾನೆಗಳು ದಾಳಿ ನಡೆಸಿವೆ. ಮತ್ತೊಂದೆಡೆ, ಕಾಡಾನೆ ಸೆರೆ ಕಾರ್ಯಾಚರಣೆಗೆ ಸಾಕಷ್ಟು ಸಮರ್ಥ ಸಾಕಾನೆಗಳ ಕೊರತೆ ಇದೆ ಎಂದೂ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಇವು ಒಟ್ಟಾರೆಯಾಗಿ ಜಿಲ್ಲೆಯ ಜನರನ್ನು ಆತಂಕದಿಂದ ದಿನದೂಡುವಂತೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ