ಧರ್ಮದಲ್ಲಿ ರಾಜಕೀಯ ಇರಬಾರದು ಆದರೆ, ರಾಜಕೀಯದಲ್ಲಿ ಧರ್ಮವಿರಬೇಕು: ಮಾಜಿ ಸಿಎಂ ಬಿ ಎಸ್ ​ಯಡಿಯೂರಪ್ಪ

ಧರ್ಮದ ಮಾರ್ಗದಲ್ಲಿ ನಡೆಯುವವರು ವಿರಳರಾಗಿದ್ದಾರೆ. ಎಲ್ಲೆಡೆ ಅಧರ್ಮವೇ ಮೇಲುಗೈ ಸಾಧಿಸುತ್ತಿರುವುದನ್ನು ನೋಡುತ್ತಿದ್ದೇವೆ.

ಧರ್ಮದಲ್ಲಿ ರಾಜಕೀಯ ಇರಬಾರದು ಆದರೆ, ರಾಜಕೀಯದಲ್ಲಿ ಧರ್ಮವಿರಬೇಕು: ಮಾಜಿ ಸಿಎಂ ಬಿ ಎಸ್ ​ಯಡಿಯೂರಪ್ಪ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 26, 2022 | 10:11 PM

ಹಾಸನ: ಧರ್ಮದಲ್ಲಿ ರಾಜಕೀಯ ಇರಬಾರದು. ಆದರೆ ರಾಜಕೀಯದಲ್ಲಿ ಧರ್ಮವಿರಬೇಕೆಂದು ನಂಬಿದವನು ನಾನು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು. ಜಿಲ್ಲೆಯ ಬೇಲೂರಿನಲ್ಲಿ ದಸರಾ ದರ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಧರ್ಮದ ಮಾರ್ಗದಲ್ಲಿ ನಡೆಯುವವರು ವಿರಳರಾಗಿದ್ದಾರೆ. ಎಲ್ಲೆಡೆ ಅಧರ್ಮವೇ ಮೇಲುಗೈ ಸಾಧಿಸುತ್ತಿರುವುದನ್ನು ನೋಡುತ್ತಿದ್ದೇವೆ. ನಾನು ಸಿಎಂ ಆಗಿದ್ದ ವೇಳೆ ಎಲ್ಲಾ ಮಠಗಳಿಗೆ ಅನುದಾನ ನೀಡಿದ್ದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಅನ್ನದಾಸೋಹ. ವಿದ್ಯಾರ್ಜನೆಗೆ ನೀಡುತ್ತಿರುವ ಮಠ ಮಾನ್ಯಗಳಿಗೆ ಅನುದಾನ ನೀಡಿದ್ದು ಸದುಪಯೋಗ ಆಗಿದೆ. ರೈತರು, ಬಡವರು, ಸಣ್ಣ ವ್ಯಾಪಾರಿಗಳು, ಕುಶಲ ಕರ್ಮಿಗಳು, ಶ್ರಮಿಕರು ಅಸಂಘಟಿತ ಕಾರ್ಮಿಕರು, ಅನೇಕ ಸಂಕಷ್ಟಕ್ಕೊಳಗಾದವರ‌ ನೆರವಿಗೆ ಕಾರ್ಯಕ್ರಮ ರೂಪಿಸಿ ಪ್ಯಾಕೇಜ್ ಒದಗಿಸಿ, ಅವರಿಗೆ ಸವಲತ್ತು ಒದಗಿಸಿದ ಸಮಾಧಾನ ನನಗಿದೆ ಎಂದು ಹೇಳಿದರು.

ಸಮಕಾಲಿನ‌ ಸನ್ನಿವೇಶದಲ್ಲಿ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಗಳ ಮಹತ್ವವನ್ನು ಅರಿತು ಗೌರವಿಸುವ ಪ್ರವೃತ್ತಿ ಕಡಿಮೆಯಾಗುತ್ತಿರುವುದು ವಿಷಾಧನೀಯ. ಈ‌ ಪ್ರವೃತ್ತಿಗೆ ಕಡಿವಾಣ ಹಾಕಲು ಇಂತಹ ಕಾರ್ಯಕ್ರಮಗಳು ಈ‌ ನಾಡಿನಲ್ಲಿ ಹೆಚ್ಚು, ಹೆಚ್ಚು ನಡೆಯಬೇಕು. ದಸರಾ ಈ ನಾಡಿಗೆಲ್ಲ ಸಂಭ್ರಮದ ಹಬ್ಬ. ದಸರಾ ಅವಧಿಯಲ್ಲಿ ಶರನ್ನವರಾತ್ರಿ ಆಚರಿಸಿಕೊಂಡು ಜನಜಾಗೃತಿ, ಧರ್ಮ ಸಮ್ಮೇಳನಗಳಂತಹ ಪವಿತ್ರ ಸಮಾರಂಭಗಳು ಶ್ರೀಗಳ‌ ಸಾನಿಧ್ಯದಲ್ಲಿ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯವಾದ ಸಂಗತಿ.

ದೇವರ ದಯೆಯಿಂದ ನಾಡಿನ ಎಲ್ಲೆಡೆ ಮಳೆ

ದೇವರು, ಪೂಜ್ಯರ ದಯೆಯಿಂದ ನಾಡಿನ ಎಲ್ಲೆಡೆ ಒಳ್ಳೆಯ ಮಳೆಯಾಗಿದೆ. ಕೆರೆ, ಕಟ್ಟೆಗಳು, ಜಲಾಶಯಗಳು ತುಂಬಿವೆ. ಕೆಲವೆಡೆ ಬೆಳೆ ನಾಶವಾಗಿದೆ. ಉಳಿದ ಎಲ್ಲಾ ಕಡೆ ರೈತರು ನೆಮ್ಮದಿಯಿಂದ ಬದುಕವಂತಹ ವ್ಯವಸ್ಥೆ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ರೈತರು ಬೆಳೆದಂತಹ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು ಅಂತ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ, ಈಗ ಬಸವರಾಜ ಬೊಮ್ಮಯಿ ಮುಖ್ಯಮಂತ್ರಿ ಆಗಿದ್ದಾರೆ. ಈ‌ ನಾಡಿನ ರೈತ ಸಮುದಾಯ ನೆಮ್ಮದಿಯಿಂದ, ಗೌರವದಿಂದ, ಸ್ವಾಭಿಮಾನದಿಂದ ಬಾಳಿ ಬದುಕಬೇಕು. ಅದಕ್ಕಾಗಿ ಏನೆಲ್ಲಾ ಕಾರ್ಯಕ್ರಮ ಮಾಡಬೇಕು, ಆ ಎಲ್ಲ ಕಾರ್ಯಕ್ರಮ ಮಾಡುವಂತಹ ಪ್ರಾಮಾಣಿಕ ಪ್ರಯತ್ನವನ್ನ ಮಾಡುತ್ತಿದ್ದೇವೆ.

ರಂಭಾಪುರಿ ಶ್ರೀಗಳು ಸಮಾಜ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ

ರಂಭಾಪುರಿ ಶ್ರೀಗಳು ಈ ರೀತಿಯ ಕಾರ್ಯಕ್ರಮ ಮಾಡುವ ಮೂಲಕ ನಮ್ಮ ನಾಡಿನ ಜನರಲ್ಲಿ ಧರ್ಮ ಪ್ರಜ್ಞೆಯನ್ನ, ರಾಷ್ಟ, ಸಮಾಜ ಪ್ರಜ್ಞೆಯನ್ನ ಮೂಡಿಸುವಂತಹ ನಿರಂತರ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ನಾನು ನೋಡಿದ ಹಾಗೇ ವಿಶ್ರಾಂತಿ ಪಡೆಯದೆ, ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲು, ಧರ್ಮ ಪ್ರಚಾರ ಮಾಡುತ್ತಿದ್ದಾರೆ ಇದು ಬಹಳ ಅಪರೂಪದ ಸಂಗತಿ. ಇಲ್ಲಿ ತುಂಬಿತುಳುಕುತ್ತಿರುವ ಜನರನ್ನು ನೋಡಿದರೆ ನಮ್ಮಲ್ಲಿ ಧರ್ಮ ಪ್ರಜ್ಞೆ ಇದೆ ಎಂಬುದು ಗೊತ್ತಾಗುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada