ರಾಜು ಕಪನೂರು ಗ್ಯಾಂಗ್ ಎಲ್ಲಿ ಬಚ್ಚಿಟ್ಟಿದ್ದೀರಿ ಸುಪಾರಿ ಕಿಲ್ಲರ್ ಪ್ರಿಯಾಂಕ್ ಖರ್ಗೆ: ಬಿಜೆಪಿ ಪ್ರಶ್ನೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸಂಬಂಧ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮ ಅಭಿಯಾನ ತೀವ್ರಗೊಳಿಸಿರುವ ಬಿಜೆಪಿ, ಸಚಿವ ಪ್ರಿಯಾಂಕ್ ಖರ್ಗೆಯನ್ನು ಸುಪಾರಿ ಕಿಲ್ಲರ್ ಎಂದು ಟೀಕಿಸಿದೆ. ಜೊತೆಗೆ, ಪ್ರಕರಣದ ಆರೋಪಿ ರಾಜು ಕಪನೂರ್ ಮತ್ತು ಗ್ಯಾಂಗನ್ನು ಸಚಿವರೇ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಬೆಂಗಳೂರು, ಜನವರಿ 6: ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣ ಸಂಬಂಧ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ವಾಗ್ದಾಳಿ ತೀವ್ರಗೊಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕರ್ನಾಟಕ ಬಿಜೆಪಿ, ಭಾನುವಾರ “ಕಾಂಗ್ರೆಸ್ ಗ್ಯಾಂಗ್” ಎಂದು ಉಲ್ಲೇಖಿ ಟೀಕಿಸಿತ್ತು. ಇದೀಗ ಪ್ರಿಯಾಂಕ ಖರ್ಗೆಯನ್ನು “ಸುಪಾರಿ ಕಿಲ್ಲರ್” ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಭಂಡತನದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನೇ ಮೀರಿಸುತ್ತಾರೆ. ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಕೊಲೆ ನಡೆದು 10 ದಿನಗಳಾದರೂ, ಕೊಲೆಗಾರರಾದ ಪ್ರಿಯಾಂಕ್ ಖರ್ಗೆ ಅವರ ಆಪ್ತರನ್ನು ಇದುವರೆಗೂ ಪೊಲೀಸರು ಬಂಧಿಸದಿರುವುದು ಇದು ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಕೊಲೆ ಎಂಬುದಕ್ಕೆ ಸಾಕ್ಷಿ ಎಂದು ಬಿಜೆಪಿ ಟೀಕಿಸಿದೆ.
ಸುಪಾರಿ ಕಿಲ್ಲರ್ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಕುಚಿಕು ರಾಜು ಕಪನೂರು ಮತ್ತವರ ಗ್ಯಾಂಗ್ ಅನ್ನು ಎಲ್ಲಿ ಬಚ್ಚಿಟ್ಟಿದ್ದಿರಿ? ಅವರಿಗೆ ಚಹಾ-ಎಳನೀರಿನ ವ್ಯವಸ್ಥೆ ಆಗಿದೆಯೋ?! ಎಂದು ಎಕ್ಸ್ ಸಂದೇಶದಲ್ಲಿ ಬಿಜೆಪಿ ಪ್ರಶ್ನಿಸಿದೆ.
ಬಿಜೆಪಿ ಎಕ್ಸ್ ಸಂದೇಶ
ಭಂಡತನದಲ್ಲಿ ಸಿಎಂ @siddaramaiah ಅವರನ್ನೇ ಮೀರಿಸುತ್ತಾರೆ #TrollMinister @PriyankKharge ಅವರು!!
ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಕೊಲೆ ನಡೆದು 10 ದಿನಗಳಾದರೂ, ಕೊಲೆಗಾರರಾದ ಪ್ರಿಯಾಂಕ್ ಖರ್ಗೆ ಅವರ ಆಪ್ತರನ್ನು ಇದುವರೆಗೂ ಪೊಲೀಸರು ಬಂಧಿಸದಿರುವುದು ಇದು @INCKarnataka ಸರ್ಕಾರದ ಪ್ರಾಯೋಜಿತ ಕೊಲೆ ಎಂಬುದಕ್ಕೆ ಸಾಕ್ಷಿ!!… pic.twitter.com/TXiXKi4wV2
— BJP Karnataka (@BJP4Karnataka) January 6, 2025
ಭಾನುವಾರವಷ್ಟೇ ಟ್ವೀಟ್ ಮಾಡಿದ್ದ ಕರ್ನಾಟಕ ಬಿಜೆಪಿ, ರಾಜ್ಯದಲ್ಲಿ ಕೊಲೆ, ಬೆದರಿಕೆ, ಆತ್ಮಹತ್ಯೆಗೆ ಸುಪಾರಿ ನೀಡಲು ಈ ಕೆಳಗಿನ ಕರ್ನಾಟಕ ಕಾಂಗ್ರೆಸ್ ಗ್ಯಾಂಗ್ ಅನ್ನು ಸಂಪರ್ಕಿಸಿ ಎಂದು ಉಲ್ಲೇಖಿಸಿತ್ತು. ಅಲ್ಲದೆ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ, ವಿನಯ್ ಕುಲಕರ್ಣಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಹೆಸರುಗಳನ್ನು ಉಲ್ಲೇಖಿಸಿತ್ತು.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ 60 ಪರ್ಸೆಂಟ್ ಕಮಿಷನ್: ಹೆಚ್ಡಿ ಕುಮಾರಸ್ವಾಮಿ ಗಂಭೀರ ಆರೋಪ
ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆಗೆ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಮತ್ತು ಗ್ಯಾಂಗ್ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಡೆತ್ ನೋಟ್ನಲ್ಲಿ ರಾಜು ಕಪನೂರು ಮತ್ತು ಗ್ಯಾಂಗ್ ಹೆಸರು ಉಲ್ಲೇಖವಾಗಿತ್ತು. ಜೊತೆಗೆ ಪ್ರಿಯಾಂಖ್ ಖರ್ಗೆ ಹೆಸರು ಕೂಡ ಉಲ್ಲೇಖವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ