ವಿದೇಶದಿಂದ ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಡಿನ್ನರ್ ಸಭೆ ಬಗ್ಗೆ ಡಿಕೆಶಿ ಖಡಕ್ ಮಾತು
ಡಿನ್ನರ್ ಮೀಟಿಂಗ್.. ರಾಜ್ಯ ರಾಜಕೀಯದಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತೆ. ಇಂಥಾದ್ದೇ ದೊಡ್ಡ ಸದ್ದು ಮಾಡುತ್ತಿರುವುದು ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್. ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗಲೇ ಈ ರಹಸ್ಯ ಸಭೆ ನಡೆದಿದ್ದು, ಊಟ ಉಂಡು ಬಂದವರು ರಾಜಕೀಯ ಏನೂ ಇಲ್ಲ ಅಂತಿದ್ದಾರೆ. ಆದ್ರೆ ಊಟಕ್ಕೆ ಸೇರಿದವರು ಆಟ ಕಟ್ಟದೇ ಇರುತ್ತಾರಾ ಎಂದು ರಾಜಕೀಯ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಇದೀಗ ವಿದೇಶ ಪ್ರವಾಸ ಮುಗಿಸಿ ಡಿಕೆ ಶಿವಕುಮಾರ್ ಭಾರತಕ್ಕೆ ಬಂದಿಳಿದಿದ್ದು, ಈ ಡಿನ್ನರ್ ಮೀಟಿಂಗ್ ಬಗ್ಗೆ ಮಾತನಾಡಿದ್ದಾರೆ.
ನವದೆಹಲಿ, (ಜನವರಿ 06): ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್ ಹಳಸಿದ್ರೂ, ಅದಕ್ಕೆ ಬೀಳುತ್ತಿರುವ ಒಗ್ಗರಣೆ ಮಾತ್ರ ಭರ್ಜರಿಯಾಗಿವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗಲೇ ಇತ್ತ ಸಿಎಂ ಡಿನ್ನರ್ ಮೀಟಿಂಗ್ ಸಂಚಲನ ಮೂಡಿಸಿದ್ದು, ನಾನಾ ಚರ್ಚೆಗೆ ಗ್ರಾಸವಾಗಿದೆ. ಇನ್ನು ಇದೀಗ ಡಿಕೆ ಶಿವಕುಮಾರ್ ವಿದೇಶ ಪ್ರವಾಸ ಮುಗಿಸಿಕೊಂಡು ಭಾರತಕ್ಕೆ ಬಂದಿಳಿದಿದ್ದು, ಈ ಡಿನ್ನರ್ ಮೀಟಿಂಗ್ ಬಗ್ಗೆ ಮಾತನಾಡಿದ್ದಾರೆ. ಔತಣ ಕೂಟಕ್ಕೆ ಸೇರಿದರೆ ರಾಜಕೀಯ ಯಾಕೆ ಬೇರೆಸುತ್ತೀರಿ? ಎಲ್ಲರೂ ಊಟಕ್ಕೆ ಸೇರಿದರೆ ಅದರಲ್ಲಿ ತಪ್ಪೇನಿದೆ ಎಂದಿದ್ದಾರೆ.
ನಾಲ್ಕು ವರ್ಷದಿಂದ ಎಲ್ಲೂ ಹೊರಗೆ ಹೋಗಿರಲಿಲ್ಲ. ಹೀಗಾಗಿ ಕುಟುಂಬದ ಜೊತೆಗೆ ಹೊಸ ವರ್ಷಕ್ಕೆ ವಿದೇಶಕ್ಕೆ ತೆರಳಿದ್ದೆ. ಔತಣಕೂಟಕ್ಕೆ ಸೇರಿದ್ದನ್ನೂ ರಾಜಕೀಯ ಯಾಕೆ ಬೆರೆಸುತ್ತೀರಿ. ಎಲ್ಲರೂ ಊಟಕ್ಕೆ ಸೇರಿದರೆ ತಪ್ಪೇನು? ನಾನು ಕೆಲವು ಬಾರಿ ಊಟಕ್ಕೆ ಕರೆದಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಕ್ಯಾಬಿನೆಟ್ ಪುನರ್ ರಚನೆ ನಿಮ್ಮನ್ನು ಬ್ಯುಸಿಯಲ್ಲಿಡಲು ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ನಾಟಿಕೋಳಿ, ಮುದ್ದೆ ಸವಿಯುತ್ತಲೇ ರಾಜಕೀಯ ತಂತ್ರಗಾರಿಕೆ: ಸಿಎಂ ಡಿನ್ನರ್ ಸಭೆಯ ಇನ್‌ಸೈಡ್ ಡಿಟೇಲ್ಸ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಜ.2ರ ರಾತ್ರಿ ನಡೆದ ಔತಣ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೆಲವು ಸಚಿವರು ಮತ್ತು ಶಾಸಕರು ಪಾಲ್ಗೊಂಡಿದ್ದರು. ಸಂಪುಟ ಸಭೆಯ ಬಳಿಕ ಸಚಿವರ ಅಧಿಕೃತ ನಿವಾಸದಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ನಡುವೆಯೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗಲೇ ಸಭೆ ನಡೆದಿರುವುದು ಕುತೂಹಲ ಮೂಡಿಸಿತ್ತು. ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿತ್ತು.
ಡಾ.ಜಿ.ಪರಮೇಶ್ವರ್, ಕೆ.ಎನ್. ರಾಜಣ್ಣ, ಡಾ.ಎಚ್.ಸಿ. ಮಹದೇವಪ್ಪ ಸೇರಿ ಏಳು ಮಂದಿ ಸಚಿವರು ಹಾಜರಿದ್ದರು. ಜತೆಗೆ ಒಟ್ಟು 35 ಮಂದಿ ಶಾಸಕರೂ ಭಾಗವಹಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ