ತಾಯಿ ಬದಲಾಗಿ ಜೀವಂತ ಮಗಳ ಹೆಸರಲ್ಲಿ ಡೆತ್ ಸರ್ಟಿಫಿಕೇಟ್ ನೀಡಿದ ಅಧಿಕಾರಿಗಳು: ತುತ್ತು ಅನ್ನಕ್ಕೂ ಪರದಾಟ
ಜೀವಂತವಿರುವ ವೃದ್ಧೆಯ ಹೆಸರಿನಲ್ಲಿ ಮರಣ ಪ್ರಮಾಣಪತ್ರ ನೀಡುವ ಮೂಲಕ ಅಧಿಕಾರಿಗಳು ಎಡವಟ್ಟಿ ಸೃಷ್ಟಿಸಿರುವಂತಹ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ನಡೆದಿದೆ. ಅಧಿಕಾರಿಗಳ ಈ ಕೆಲಸಕ್ಕೆ ಸದ್ಯ ಮಹಿಳೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಸದ್ಯ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗಿದೆ.

ಹಾವೇರಿ, ಜೂನ್ 17: ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯಕ್ಕೆ ಬಡಪಾಯಿ ವೃದ್ಧೆ ಯೊಬ್ಬರು ಜೀವಂತವಾಗಿದ್ದರೂ ಸರ್ಕಾರಿ ದಾಖಲೆಗಳಲ್ಲಿ ಮಾತ್ರ ಮೃತಪಟ್ಟಿದ್ದಾರೆ. ತಾಯಿ ಬದಲು ಮಗಳ ಹೆಸರಲ್ಲಿ ಮರಣ ಪ್ರಮಾಣ ಪತ್ರ (Death Certificate) ನೀಡುವ ಮೂಲಕ ದೊಡ್ಡ ಎಡವಟ್ಟು ಮಾಡಿದ್ದಾರೆ. ಇದೀಗ ವೃದ್ಧೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಇಂತಹದೊಂದು ದಾರುಣ ಘಟನೆ ಹಾವೇರಿ (haveri) ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮುಖ್ಯಾಂಶಗಳು
- ಜೀವಂತ ವೃದ್ಧೆಗೆ ಮರಣ ಪ್ರಮಾಣಪತ್ರ ನೀಡಿದ ಅಧಿಕಾರಿಗಳು
- ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ವೃದ್ಧೆ
- ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ
ನಡೆದಿದ್ದೇನು?
ಅತ್ತಿಗೇರಿ ಗ್ರಾಮದ ಶಿವಗಂಗವ್ವ ತಳಳ್ಳಿ ಎಂಬ ವೃದ್ಧ ಮಹಿಳೆಯ ತಾಯಿ ಶಂಕ್ರವ್ವ ಮೀಳ್ಳಿ ಇತ್ತೀಚೆಗೆ ನಿಧನರಾಗಿದ್ದರು. ಹೀಗಾಗಿ ತಾಯಿಯ ಮರಣ ಪ್ರಮಾಣ ಪತ್ರಕ್ಕೆ ಮಗಳು ಶಿವಗಂಗವ್ವ ಅರ್ಜಿ ಸಲ್ಲಿಸಿದ್ದರು. ಆದರೆ, ಶಿಗ್ಗಾಂವಿ ತಾಲೂಕಾಡಳಿತ ಮತ್ತು ಅತ್ತಿಗೇರಿ ಗ್ರಾಮದ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಮೃತಪಟ್ಟ ತಾಯಿಯ ಹೆಸರಿನಲ್ಲಿ ಪ್ರಮಾಣ ಪತ್ರ ನೀಡುವ ಬದಲು, ಜೀವಂತವಾಗಿರುವ ಮಗಳು ಶಿವಗಂಗವ್ವಳ ಹೆಸರಲ್ಲೇ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಕೈಗಿಟ್ಟಿದ್ದಾರೆ.
ಆಧಾರ್, ರೇಷನ್ ಕಾರ್ಡ್ ರದ್ದು
ಇನ್ನು ತಮ್ಮ ಹೆಸರಲ್ಲೇ ಡೆತ್ ಸರ್ಟಿಫಿಕೇಟ್ ಸೃಷ್ಟಿಯಾಗಿರುವ ವಿಷಯ ಶಿವಗಂಗವ್ವರಿಗೆ ಗೊತ್ತೇ ಇರಲಿಲ್ಲ. ಇತ್ತೀಚೆಗೆ ಬ್ಯಾಂಕಿನಲ್ಲಿ ಹಣ ತೆಗೆಯಲು ಹೋದಾಗ ವಿಷಯ ತಿಳಿದು ಆಕಾಶವೇ ಬಿದ್ದಂತಾಗಿದೆ. ಅಧಿಕಾರಿಗಳು ಮಾಡಿದ ಈ ಒಂದೇ ಒಂದು ತಪ್ಪಿನಿಂದಾಗಿ ಶಿವಗಂಗವ್ವ ಸದ್ಯ ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತಳಾಗಿದ್ದಾರೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಷ್ಟೇ ಅಲ್ಲದೆ, ಅವರಿಗೆ ಬರುತ್ತಿದ್ದ ವೃದ್ಧಾಪ್ಯ ವೇತನ ಹಾಗೂ ಗಂಡನ ಪೀಚಣಿ ಹಣವೂ ಸಹ ರದ್ದಾಗಿದೆ. ರೇಷನ್ ಮತ್ತು ಹಣ ಎರಡೂ ಇಲ್ಲದೆ ಮಹಿಳೆ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.
ಇನ್ನು ತಮಗೆ ಅನ್ಯಾಯವಾಗಿರುವುದು ತಿಳಿಯುತ್ತಿದ್ದಂತೆಯೇ ಶಿವಗಂಗವ್ವ ಮತ್ತು ಕುಟುಂಬಸ್ಥರು ತಕ್ಷಣವೇ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಎಂದಿದ್ದಾರೆ. ಬಳಿಕ ಒಂದೇ ವಾರದಲ್ಲಿ ಎರಡು ಮರಣ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದಾರೆ. ಮೊದಲು ಮಗಳ ಹೆಸರಿನಲ್ಲಿ ನೀಡಿದ್ದ ಅಧಿಕಾರಿಗಳು, ಬಳಿಕ ತಾಯಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರವನ್ನು ನೀಡಿದ್ದಾರೆ.
ಇದನ್ನೂ ಓದಿ: ಹಾಸನ: ಆಸ್ತಿ ಕಬಳಿಸಲು ಬದುಕಿದ ವೃದ್ಧೆ ಮರಣ ಪ್ರಮಾಣ ಪತ್ರ ಮಾಡಿಸಿದ ಸಂಬಂಧಿಕರು, ದೂರು ದಾಖಲಿಸಿದ ಮಗ
ಸದ್ಯ ಅಧಿಕಾರಿಗಳ ಈ ಬೇಜವಾಬ್ದಾರಿ ನಡೆಗೆ ಅತ್ತಿಗೇರಿ ಗ್ರಾಮಸ್ಥರು ಹಾಗೂ ವೃದ್ಧೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಡ ವೃದ್ಧೆಗೆ ನ್ಯಾಯ ಕೊಡಿಸಬೇಕು ಮತ್ತು ಎಡವಟ್ಟಿಗೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




