ಹಾವೇರಿ: ರೈತರ ದವಸ-ಧಾನ್ಯ ಕದಿಯುತ್ತಿದ್ದ ಕಳ್ಳರು ಅಂದರ್
ಹಾವೇರಿ ಜಿಲ್ಲೆಯಲ್ಲಿ ರೈತರ ಧಾನ್ಯ ಕಳ್ಳತನ ಮಾಡುತ್ತಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸವಣೂರು ತಾಲ್ಲೂಕಿನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ. ಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಜಾಮೀನು ನೀಡದಂತೆ ರೈತರು ಮನವಿ ಮಾಡಿದ್ದಾರೆ. ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಧಾನ್ಯವನ್ನು ವಶಪಡಿಸಿಕೊಂಡಿದ್ದಾರೆ.

ಹಾವೇರಿ, ಮಾರ್ಚ್ 17: ಕೃಷಿ ಪ್ರಧಾನವಾದ ಜಿಲ್ಲೆ ಹಾವೇರಿ (Haveri) ರೈತರಿಗೆ (Farmers) ಒಂದಿಲ್ಲೊಂದು ಸಮಸ್ಯೆಗಳು ಕಾಡುತ್ತಿವೆ. ರೈತರ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಖರ್ತನಾಕ ಕಳ್ಳರು ಕಳ್ಳತನ ಮಾಡುತ್ತಿದ್ದಾರೆ. ಈಗ ಸವಣೂರು ಪೊಲೀಸರು ಕಳ್ಳರನ್ನು ಬಂಧಿಸಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಜೊತೆಗೆ ಬಂಧಿತ ಆರೋಪಿಗಳಿಗೆ ವಕೀಲರು ವಕಾಲತ್ತು ನಡೆಸಬಾರದು, ಮತ್ತು ಜಾಮೀನು ಕೊಡಬಾರದು ಎಂದು ರೈತರು ಮನವಿ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಹಾವೇರಿ ಜಿಲ್ಲೆಯಲ್ಲಿ ರೈತರು ಬೆಳೆದ ದವಸ ಧಾನ್ಯಗಳನ್ನು ಕಳ್ಳರು ಕದ್ದುಕೊಂಡು ಪರಾರಿ ಆಗುತ್ತಿದ್ದರು. ವರ್ಷವಿಡಿ ಕಷ್ಟಪಟ್ಟು ಬೆಳೆದಿದ್ದ ರೈತರಿಗೆ ದವಸ ಧಾನ್ಯಗಳನ್ನು ರಕ್ಷಣೆ ಮಾಡಿಟ್ಟುಕೊಳ್ಳುವುದು ದೊಡ್ಡ ಸವಾಲಾಗಿತ್ತು. ಮಾರ್ಚ್ 8 ರಂದು ಕಳ್ಳರು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೆವರಮೆಳ್ಳಳ್ಳಿ ಗ್ರಾಮದ ರೈತ ಶಂಕ್ರಪ್ಪ ದೊಡ್ಡಮನಿ ಎಂಬುವರಿಗೆ ಸೇರಿದ ದವಸ ಧಾನ್ಯಗಳನ್ನು ಕಳ್ಳತನ ಮಾಡಿದ್ದರು.
ರೈತ ಶಂಕ್ರಪ್ಪ ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅಂಶುಕುಮಾರ ಆರೋಪಿಗಳ ಪತ್ತೆಗಾಗಿ ಸವಣೂರು ಸಿಪಿಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಪ್ರಕರಣದ ತನಿಖೆಗೆ ಇಳಿದ ಪೊಲೀಸರು ದುರಗಪ್ಪ ಕೊರವರ, ಗಂಗಾಧರ ಕೊಕನೂರ, ಮಾಂತೇಶ ಗದಗ, ಅಮೀತ ಗೋಸಾವಿ ಹಾಗೂ ಅಭಿಷೇಕ ನರೇಗಲ್ ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಮತ್ತು ಅವರ ಪರವಾಗಿ ವಕಾಲತ್ತು ನಡೆಸಬಾರದು ಎಂದು ರೈತ ಸಂಘದ ಮುಖಂಡರು ಮನವಿ ಮಾಡಿದ್ದಾರೆ.
ಬಂಧಿತರಿಂದ 10.27 ಲಕ್ಷ ರೂಪಾಯಿ ಮೌಲ್ಯದ ಜೋಳ, ಗೋವಿನಜೋಳ, ಸಾವಿ, ಗೋದಿ, ಕಡ್ಲಿ ಸೇರಿದಂತೆ ವಿವಿಧ ಧಾನ್ಯಗಳು ಹಾಗೂ ಕಳ್ಳತನಕ್ಕೆ ಬಳಸಿದ ಒಂದು ಬೊಲೆರೋ ಹಾಗೂ ಒಂದು ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ.
ಈ ಕಳ್ಳತನ ಪ್ರಕರಣ ಪತ್ತೆಯಿಂದ ಒಟ್ಟು ಶಿಗ್ಗಾಂವಿ, ಬಂಕಾಪುರ, ಹುಲಗೂರು ಹಾಗೂ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಒಟ್ಟು ಒಂಬತ್ತು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಅದರೆ, ಹಾವೇರಿ ಜಿಲ್ಲೆಯ ರೈತರು ಮಾತ್ರ ಆಕ್ರೋಶ ಹೊರಹಾಕಿದ್ದಾರೆ. ದೇಶಕ್ಕೆ ಅನ್ನ ಹಾಕುವ ರೈತನಿಗೆ ಕಳ್ಳರು ಕಾಟಡುತ್ತಿದ್ದಾರೆ. ಮನೆಯ ಮುಂದೆ ಇಟ್ಟ ಚೀಲ ಮತ್ತು ಜಮೀನಿನಲ್ಲಿದ್ದ ರಾಶಿಯ ಚೀಲವನ್ನ ಕಳ್ಳತನ ಮಾಡುತ್ತಿದ್ದಾರೆ. ಜಿಲ್ಲೆಯ ಯಾವುದೇ ವಕೀಲರು ಇವರ ಪರವಾಗಿ ವಕಾಲತ್ತು ವಹಿಸಬಾರದು, ಅವರಿಗೆ ಜಾಮೀನು ಸಹ ಕೊಡಸಬಾರದು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ: ಬೆಚ್ಚಿಬೀಳಿಸುವಂತಿದೆ ನಯಾಜ್ನ ಕ್ರೌರ್ಯ
ಒಟ್ಟಿನಲ್ಲಿ ಮನೆ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ರೈತ ದವಸ–ಧಾನ್ಯ ಕಳ್ಳತನ ಮಾಡುತ್ತಿದ್ದ ಕಳ್ಳರು ಅಂದರ್ ಆಗಿದ್ದು, ರೈತರು ಈಗ ಸ್ಪಲ್ಪ ನಿರಾಳರಾಗಿದ್ದಾರೆ. ಈಗ ಆರೋಪಿಗಳ ಪರವಾಗಿ ವಕಾಲತ್ತು ಮಾಡಬಾರದು ಮತ್ತು ಜಾಮೀನಿ ಸಿಗಬಾರದು ಎಂದು ಜಿಲ್ಲಾ ವಕೀಲರ ಸಂಘಕ್ಕೆ ಮನವಿ ಮಾಡಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:37 am, Mon, 17 March 25