
ಬೆಂಗಳೂರು, (ಅಕ್ಟೋಬರ್ 24): ಸ್ಟಿಂಗ್ ಆಪರೇಷನ್ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದು,ಈ ಸಂಬಂಧ ತನಿಖೆ ನಡೆಸಿ ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ವೈರಲ್ ಮಾಡಲಾದ ವಿಡಿಯೋ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ, ಶಂಕರ ಎನ್ನುವ ಜೆಡಿಎಸ್ ಕಾರ್ಯಕರ್ತನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ತಮ್ಮ ಪಕ್ಷದ ಕಾರ್ಯಕರ್ತನನ್ನು ವಶಕ್ಕೆ ಪಡೆದುಕೊಂಡಿದ್ದಕ್ಕೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿರುವ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಎಂಟು ವರ್ಷಗಳಿಗೂ ಹೆಚ್ಚುಕಾಲ ರಾಜ್ಯವನ್ನು ಆಳಿದ ಮಾಜಿ ಮುಖ್ಯಮಂತ್ರಿ ವರ್ಚಸ್ಸಿಗೆ ಹನಿಟ್ರ್ಯಾಪ್ ಹೆಸರಿನಲ್ಲಿ ಮಸಿ ಬಳಿಯಲು ರೂಪಿಸಿದ ವ್ಯವಸ್ಥಿತ, ಸಂಘಟಿತ ಷಡ್ಯಂತ್ರವನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಹಾಗೂ ನನ್ನ ಜೊತೆಗಿರುವ ಹುಡುಗರನ್ನು ಟಾರ್ಗೆಟ್ ಮಾಡುತ್ತಿರುವುದು ಲಜ್ಜೆಗೆಡಿತನ.ಯಾವುದೇ ಪ್ರಕರಣ ದಾಖಲಿಸದೇ ಇಂದು ಬೆಳಗ್ಗೆ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶಂಕರ್ ಎಂಬ ಯುವಕನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ನಂತರ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪಕ್ಷದ ಕಾನೂನು ವಿಭಾಗ ದೂರು ದಾಖಲಿಸಿದ ಮೇಲೆ ಆ ಯುವಕನಿಂದ ಆತನ ಪತ್ನಿಗೆ ಕರೆ ಮಾಡಿಸಿ, “ಸಿಸಿಬಿ ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿದ್ದಾರೆ” ಎಂದಷ್ಟೇ ಹೇಳಿಸಿ ಕರೆ ಕಟ್ ಮಾಡಿದ್ದೀರಿ. ಸಾಕು ಮಾಡಿ ನಿಮ್ಮ ಕಪಟ ನಾಟಕ. ಯಾವ ಆಧಾರದ ಮೇಲೆ ಆತನನ್ನು ಕರೆದುಕೊಂಡು ಹೋಗಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿ, ದೃಶ್ಯಗಳನ್ನು ಚಿತ್ರೀಕರಿಸಿ ಅವರ ಚಾರಿತ್ರ್ಯಹರಣಕ್ಕೆ ಕಾರಣನಾದ ನೀಚನನ್ನು ಬಿಟ್ಟು, ಆ ನೀಚತನವನ್ನು ಪ್ರಶ್ನಿಸಿದ ನನ್ನನ್ನು ನೇರವಾಗಿ ಎದುರಿಸಲಾಗದೆ ನನ್ನ ಹುಡುಗರ ಬೆನ್ಹತ್ತಿದ್ದೀರಿ. ಎಲ್ಲವನ್ನೂ ರೆಕಾರ್ಡ್ ಮಾಡಿದ ‘ಮಾಧ್ಯಮದ ಮುಸುಕು’ ಹಾಕಿಕೊಂಡಿರುವ ಆ ‘ಸಂಚುಕೋರ’ ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ಆ ನೈಜ ಅಪರಾಧಿಯನ್ನು ಬಿಟ್ಟು ನಮ್ಮ ಸೋಶಿಯಲ್ ಮೀಡಿಯಾ ಹುಡುಗರ ಮೇಲೆ ಬಿದ್ದಿದ್ದೀರಿ. ಪ್ರಶ್ನೆ ಮಾಡಿದ್ದು ನಾನು. ಸಿಬಿಐ ತನಿಖೆಗೆ ಒತ್ತಾಯಿಸಿದ್ದು ನಾನು. ಧೈರ್ಯವಿದ್ದರೆ ನನ್ನ ಬಳಿಗೇ ನಿಮ್ಮ ಪೊಲೀಸರನ್ನು ಕಳಿಸಬೇಕಿತ್ತು, ಅಮಾಯಕರ ಮೇಲೇನು ನಿಮ್ಮ ಪ್ರತಾಪ ಎಂದು ಕಿಡಿಕಾರಿದ್ದಾರೆ.
ಅಷ್ಟೇ ಅಲ್ಲ, ಈಗ ನಮ್ಮ ಸೋಶಿಯಲ್ ಮೀಡಿಯಾ ತಂಡದ ಮೋಹನ್ ಎಂಬ ಇನ್ನೊಬ್ಬ ಹುಡುಗನ ಮನೆ ಮುಂದೆ ಹೋಗಿ ಪೊಲೀಸರು ಗಲಾಟೆ ಮಾಡುತ್ತಿದ್ದಾರೆ, ಅವರ ಕುಟುಂಬದವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಇದೆಲ್ಲವನ್ನೂ ಸಹಿಸುವ ಪ್ರಶ್ನೆಯೇ ಇಲ್ಲ. ನಮ್ಮವರಿಗೆ ಹೀಗೆ ಸುಖಾಸುಮ್ಮನೆ ಕಿರುಕುಳ ಕೊಟ್ಟರೆ ಕೈಕಟ್ಟಿ ಕೂರುವುದಿಲ್ಲ ನಾವು. ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.