ಸೈಕ್ಲೋನ್, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನಿಖರ ಮುನ್ಸೂಚನೆ ಹೇಗೆ ಸಾಧ್ಯ?: ಐಎಂಡಿ ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ

ಚಂಡಮಾರುತ, ಭಾರಿ ಮಳೆ, ಪ್ರವಾಹ ಹಾಗೂ ಉಷ್ಣ ಅಲೆಗಳ ಮುನ್ಸೂಚನೆ ನೀಡಲು ಭಾರತೀಯ ಹವಾಮಾನ ಇಲಾಖೆ ಹಲವು ತಂತ್ರಜ್ಞಾನಗಳನ್ನು ಬಳಸುತ್ತದೆ. ಕರ್ನಾಟಕದ 31 ಜಿಲ್ಲೆಗಳ ಮಾಹಿತಿ, ಉಪಗ್ರಹ ಚಿತ್ರಗಳು, ಡಾಪ್ಲರ್ ರೇಡಾರ್, ಹವಾಮಾನ ಬಲೂನ್‌ಗಳು ಮತ್ತು ಸೂಪರ್ ಕಂಪ್ಯೂಟರ್‌ಗಳ ನೆರವಿನಿಂದ ಮುನ್ಸೂಚನೆ ಸಿದ್ಧವಾಗುತ್ತದೆ. ಹವಾಮಾನ ಮುನ್ಸೂಚನೆ ನೀಡುವ ಒಟ್ಟು ಪ್ರಕ್ರಿಯೆ ಹೇಗಿರುತ್ತದೆ ಎಂಬ ಸಮಗ್ರ ಮಾಹಿತಿ ಇಲ್ಲಿದೆ.

ಸೈಕ್ಲೋನ್, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನಿಖರ ಮುನ್ಸೂಚನೆ ಹೇಗೆ ಸಾಧ್ಯ?: ಐಎಂಡಿ ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ

Updated on: Nov 04, 2026 | 12:04 PM

ಮುಖ್ಯಾಂಶಗಳು

  • ನೆಲಮಟ್ಟದಿಂದ 35 ಕಿ.ಮೀ. ಎತ್ತರದವರೆಗೂ ಮಾಹಿತಿ ಸಂಗ್ರಹ
  • ಸೂಪರ್ ಕಂಪ್ಯೂಟರ್ ಮಾದರಿ ಜೊತೆಗೆ ತಜ್ಞರ ಪರಿಶೀಲನೆ
  • ಹವಾಮಾನ ಇಲಾಖೆಯ ಕಾರ್ಯವೈಖರಿಯ ಸಮಗ್ರ ಮಾಹಿತಿ

ಕಳೆದ ಕೆಲವೇ ದಿನಗಳ ಅವಧಿಯಲ್ಲಿ ದೇಶದಲ್ಲಿ ಅರ್ನಾಬ್ ಚಂಡಮಾರುತ, ಮುರಸು ಸೈಕ್ಲೋನ್ ಅಪ್ಪಳಿಸಿವೆ. ಅಪಾರ ಪ್ರಮಾಣದ ನಷ್ಟ, ಹಾಣಿ ಆಗಿದ್ದರೂ ಪ್ರಾಣ ಹಾನಿ ಹೆಚ್ಚಾಗದೇ ಇರುವಂತೆ ನೋಡಿಕೊಳ್ಳುವುದು ಸಾಧ್ಯವಾಗಿರುವುದು ಸಮಾಧಾನದ ಸಂಗತಿ. ನಿಖರ ಹವಾಮಾನ ಮುನ್ಸೂಚನೆ ಇತ್ತೀಚೆಗೆ ಸಾಧ್ಯವಾಗುತ್ತಿದ್ದು, ಇಂಥ ಚಂಡಮಾರುತಗಳು, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಮುಂಚಿತವಾಗಿಯೇ ಮಾಹಿತಿ ದೊರೆಯುವುದರಿಂದ ಪ್ರಾಣ ಹಾನಿ, ಅಪಾಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿದೆ. ಅಲ್ಲದೆ, ಮುಂಗಾರು ಮಳೆ, ಹೀಟ್ ವೇವ್ ಸಂದರ್ಭಗಳಲ್ಲೂ ನಿಖರ ಹವಾಮಾನ ಮುನ್ಸೂಚನೆಯಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. ಮೊದಲೆಲ್ಲ ಇದಮಿತ್ಥಂ ಎಂಬ ಹವಾಮಾನ ಮುನ್ಸೂಚನೆ ಸಾಧ್ಯವಾಗುತ್ತಿರಲಿಲ್ಲ. ಆದರೆ, ಇದೀಗ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿಜ್ಞಾನಿಗಳ ಶ್ರಮದಿಂದ ಬಹುತೇಕ ನಿಖರ ಮುನ್ಸೂಚನೆ ಸಾಧ್ಯವಾಗುತ್ತಿದೆ. ಹಾಗಾದರೆ, ಹವಾಮಾನ ಮುನ್ಸೂಚನೆ ಸಿದ್ಧವಾಗುವುದು ಹೇಗೆ? ಕರ್ನಾಟಕದ ಹವಾಮಾನದ ಮಾಹಿತಿ ಎಲ್ಲಿಂದ ಸಂಗ್ರಹವಾಗುತ್ತದೆ? ಭಾರತೀಯ ಹವಾಮಾನ ಇಲಾಖೆ (IMD) ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಸಂಪೂರ್ಣ ವಿವರ.

ಹವಾಮಾನ ಮುನ್ಸೂಚನೆಗೆ ಬೇಕು ಬೃಹತ್ ಮಾಹಿತಿ ಜಾಲ

ರಾಜ್ಯದಲ್ಲಿ ಮಳೆಯಾಗುತ್ತದೆಯೇ, ಯಾವ ಭಾಗದಲ್ಲಿ ಭಾರಿ ಮಳೆಯಾಗಬಹುದು, ಗಾಳಿಯ ವೇಗ ಎಷ್ಟಿರಲಿದೆ, ಉಷ್ಣಾಂಶದಲ್ಲಿ ಎಷ್ಟು ಏರಿಕೆಯಾಗಬಹುದು ಎಂಬುದನ್ನು ಅಂದಾಜಿಸಲು ಹವಾಮಾನ ಇಲಾಖೆ ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತದೆ. ಕರ್ನಾಟಕದ 31 ಜಿಲ್ಲೆಗಳ ಹವಾಮಾನ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರವು ವಿವಿಧ ತಾಂತ್ರಿಕ ವ್ಯವಸ್ಥೆಗಳ ನೆರವು ಪಡೆಯುತ್ತದೆ.

  • ಸ್ವಯಂಚಾಲಿತ ಹವಾಮಾನ ಕೇಂದ್ರಗಳು (AWS): ಈ ಕೇಂದ್ರಗಳು ಮಾನವ ಹಸ್ತಕ್ಷೇಪವಿಲ್ಲದೆ ಉಷ್ಣಾಂಶ, ಗಾಳಿಯ ವೇಗ, ಗಾಳಿಯ ದಿಕ್ಕು, ತೇವಾಂಶ ಸೇರಿದಂತೆ ಹಲವು ಅಂಶಗಳನ್ನು ದಾಖಲಿಸುತ್ತವೆ. ಸಂಗ್ರಹಿಸಿದ ಮಾಹಿತಿಯನ್ನು ನಿಗದಿತ ಅವಧಿಗೆ ಅನುಗುಣವಾಗಿ ಉಪಗ್ರಹ ಅಥವಾ ಸಂವಹನ ವ್ಯವಸ್ಥೆಗಳ ಮೂಲಕ ಕೇಂದ್ರಗಳಿಗೆ ರವಾನಿಸಲಾಗುತ್ತದೆ.
  • ಸ್ವಯಂಚಾಲಿತ ಮಳೆಮಾಪಕಗಳು (ARG): ತಾಲೂಕು ಮತ್ತು ಸ್ಥಳೀಯ ಮಟ್ಟದಲ್ಲಿ ಮಳೆಯ ಪ್ರಮಾಣವನ್ನು ದಾಖಲಿಸುತ್ತವೆ. ಇದರಿಂದ ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗಿದೆ ಎಂಬ ಮಾಹಿತಿ ತ್ವರಿತವಾಗಿ ಲಭ್ಯವಾಗುತ್ತದೆ.
  • ಮಾನವ ಚಾಲಿತ ವೀಕ್ಷಣಾಲಯಗಳು: ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ನಿಗದಿತ ಸಮಯದಲ್ಲಿ ಹವಾಮಾನ ಪರಿಸ್ಥಿತಿಯನ್ನು ವೀಕ್ಷಿಸಿ, ಮಳೆ, ಉಷ್ಣಾಂಶ, ಗಾಳಿ ಸೇರಿದಂತೆ ವಿವಿಧ ಅಂಶಗಳ ವರದಿಯನ್ನು ಸಿದ್ಧಪಡಿಸುತ್ತಾರೆ.
  • ಡಾಪ್ಲರ್ ರೇಡಾರ್ ಮತ್ತು ಉಪಗ್ರಹಗಳು: ಮೋಡಗಳ ಚಲನೆ, ಮಳೆಯ ತೀವ್ರತೆ, ಚಂಡಮಾರುತಗಳ ಬೆಳವಣಿಗೆ ಮತ್ತು ಚಲನೆಯ ಬಗ್ಗೆ ಮಾಹಿತಿ ನೀಡುತ್ತವೆ. ಇಸ್ರೋದ ಇನ್‌ಸ್ಯಾಟ್ ಉಪಗ್ರಹಗಳ ಚಿತ್ರಗಳು ಹಾಗೂ ಡಾಪ್ಲರ್ ರೇಡಾರ್‌ಗಳ ಮಾಹಿತಿ ಮುನ್ಸೂಚನೆಗೆ ನೆರವಾಗುತ್ತದೆ.

ನೆಲಮಟ್ಟದಿಂದ 35 ಕಿ.ಮೀ. ಎತ್ತರದವರೆಗೂ ಮಾಹಿತಿ ಸಂಗ್ರಹ!

ಹವಾಮಾನ ಮುನ್ಸೂಚನೆ ಸಿದ್ಧಪಡಿಸಲು ನೆಲಮಟ್ಟದ ಮಾಹಿತಿ ಮಾತ್ರ ಸಾಕಾಗುವುದಿಲ್ಲ. ವಾತಾವರಣದ ಮೇಲಿನ ಪದರಗಳಲ್ಲಿನ ಬದಲಾವಣೆಗಳನ್ನೂ ಗಮನಿಸಬೇಕಾಗುತ್ತದೆ. ಈ ಪ್ರಕ್ರಿಯೆಯ ಬಗ್ಗೆ ಹವಾಮಾನ ತಜ್ಞ ಸಿಎಸ್ ಪಾಟೀಲ್ ವಿವರಿಸಿದ್ದಾರೆ.

ಹವಾಮಾನ ತಜ್ಞ ಸಿಎಸ್ ಪಾಟೀಲ್ ಹೇಳಿದ್ದೇನು?

‘‘ನೆಲಮಟ್ಟದಿಂದಲೇ ಹವಾಮಾನದ ವಿವಿಧ ಮಾಹಿತಿಗಳು ನಮಗೆ ಲಭ್ಯವಾಗುತ್ತವೆ. ಮಳೆಯ ಪ್ರಮಾಣ, ಉಷ್ಣಾಂಶ, ಗಾಳಿಯ ದಿಕ್ಕು ಮತ್ತು ವೇಗ ಸೇರಿದಂತೆ ಹಲವು ಅಂಶಗಳನ್ನು ದಾಖಲಿಸುತ್ತೇವೆ. ಇದರ ಜತೆಗೆ ಬಲೂನ್‌ಗಳನ್ನು ಉಡಾಯಿಸುವ ಮೂಲಕ ಸುಮಾರು 35 ಕಿಲೋಮೀಟರ್ ಎತ್ತರದವರೆಗಿನ ವಾತಾವರಣದ ಮಾಹಿತಿಯನ್ನೂ ಸಂಗ್ರಹಿಸುತ್ತೇವೆ. ಆ ಎತ್ತರದಲ್ಲಿ ಗಾಳಿಯ ವೇಗ, ದಿಕ್ಕು, ಉಷ್ಣಾಂಶ ಮತ್ತು ವಾಯು ಒತ್ತಡದ ವಿವರಗಳನ್ನು ಪಡೆಯುತ್ತೇವೆ. ಇದರ ಜತೆಗೆ ಡಾಪ್ಲರ್ ರೇಡಾರ್‌ಗಳು ಮತ್ತು ಉಪಗ್ರಹ ಚಿತ್ರಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತದೆ. ಹೀಗೆ ನೆಲಮಟ್ಟದಿಂದ ಹಿಡಿದು ವಾತಾವರಣದ ಮೇಲಿನ ಪದರಗಳವರೆಗಿನ ದತ್ತಾಂಶವನ್ನು ಒಟ್ಟುಗೂಡಿಸಿ ವಿಶ್ಲೇಷಿಸಲಾಗುತ್ತದೆ ’’ ಎಂದು ಅವರು ‘ಟಿವಿ9 ಕನ್ನಡ ಡಿಜಿಟಲ್​’ಗೆ ವಿವರಿಸಿದ್ದಾರೆ.

ಸೂಪರ್ ಕಂಪ್ಯೂಟರ್‌ನಲ್ಲಿ ನಡೆಯುತ್ತದೆ ಹವಾಮಾನದ ಲೆಕ್ಕಾಚಾರ

ಹವಾಮಾನ ಇಲಾಖೆಗೆ ಲಭ್ಯವಾಗುವ ಮಾಹಿತಿಯನ್ನು ನ್ಯೂಮೆರಿಕಲ್ ವೆದರ್ ಪ್ರಿಡಿಕ್ಷನ್ (Numerical Weather Prediction) ಮಾದರಿಗಳಲ್ಲಿ ಬಳಸಲಾಗುತ್ತದೆ. ವಾತಾವರಣದ ಚಲನೆ ಮತ್ತು ಬದಲಾವಣೆಗಳನ್ನು ನಿಯಂತ್ರಿಸುವ ವೈಜ್ಞಾನಿಕ ಸಮೀಕರಣಗಳ ಆಧಾರದಲ್ಲಿ ಈ ಮಾದರಿಗಳು ಕಾರ್ಯನಿರ್ವಹಿಸುತ್ತವೆ. ಸಂಗ್ರಹಿಸಿದ ದತ್ತಾಂಶವನ್ನು ಈ ಸಮೀಕರಣಗಳಲ್ಲಿ ಅಳವಡಿಸಿ ಸೂಪರ್ ಕಂಪ್ಯೂಟರ್‌ಗಳ ಮೂಲಕ ವಿಶ್ಲೇಷಿಸಲಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಹವಾಮಾನ ಹೇಗಿರಬಹುದು ಎಂಬ ಮುನ್ಸೂಚನೆ ಸಿದ್ಧವಾಗುತ್ತದೆ ಎಂದು ಸಿಎಸ್ ಪಾಟೀಲ್ ವಿವರಿಸಿದ್ದಾರೆ.

How IMD Predicts Cyclones and Extreme Weather: Inside Karnataka's Weather Forecasting System

ಸಿಎಸ್ ಪಾಟೀಲ್

ಈ ಹಿಂದೆ ಬೆಂಗಳೂರಿನಲ್ಲಿಯೇ ಮುನ್ಸೂಚನೆಗೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳು ನಡೆಯುತ್ತಿದ್ದವು. ಇದೀಗ ಈ ಪ್ರಕ್ರಿಯೆಯನ್ನು ಕೇಂದ್ರೀಕೃತಗೊಳಿಸಲಾಗಿದ್ದು, ದೆಹಲಿಯಲ್ಲಿ ಮಾದರಿಗಳ ಆಧಾರದಲ್ಲಿ ಮುನ್ಸೂಚನೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಿಸಿ ಪಾಟೀಲ್ ತಿಳಿಸಿದ್ದಾರೆ. ವಿವಿಧ ಮಾದರಿಗಳ ಮೂಲಕ ಸುಮಾರು 10 ದಿನಗಳವರೆಗಿನ ಮುನ್ಸೂಚನೆಗಳನ್ನು ಸಿದ್ಧಪಡಿಸಲಾಗುತ್ತದೆ.

ಸೂಪರ್ ಕಂಪ್ಯೂಟರ್ ನೀಡಿದ ಹವಾಮಾನ ವರದಿಯೇ ಅಂತಿಮವೇ?

ಸೂಪರ್ ಕಂಪ್ಯೂಟರ್ ಮೂಲಕ ಸಿದ್ಧವಾಗುವ ಮುನ್ಸೂಚನೆಯನ್ನು ಯಥಾವತ್ತಾಗಿ ಸಾರ್ವಜನಿಕರಿಗೆ ಬಿಡುಗಡೆ ಮಾಡುವುದಿಲ್ಲ. ಹವಾಮಾನ ತಜ್ಞರು ಅದರಲ್ಲಿರುವ ಮಾಹಿತಿಯನ್ನು ಪರಿಶೀಲಿಸಿ, ವಾಸ್ತವಿಕ ಪರಿಸ್ಥಿತಿಗೆ ಹೋಲಿಕೆ ಮಾಡುತ್ತಾರೆ. ವಿವಿಧ ಮಾದರಿಗಳ ಫಲಿತಾಂಶಗಳಲ್ಲಿನ ವ್ಯತ್ಯಾಸಗಳನ್ನೂ ಗಮನಿಸುತ್ತಾರೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

‘‘ನಾವು ಕೇವಲ ಮಾದರಿಗಳಿಂದ ಬರುವ ಫಲಿತಾಂಶವನ್ನು ಮಾತ್ರ ಅವಲಂಬಿಸುವುದಿಲ್ಲ. ಅವು ಎಷ್ಟು ಸರಿಯಾಗಿವೆ ಎಂಬುದನ್ನು ಪರಿಶೀಲಿಸುತ್ತೇವೆ. ಅದಕ್ಕಾಗಿ ಮಾನವ ವಿಶ್ಲೇಷಣೆ ಅತ್ಯಗತ್ಯ. ಕಂಪ್ಯೂಟರ್ ನೀಡುವ ಮಾಹಿತಿಯನ್ನು ತಜ್ಞರು ಮತ್ತೊಮ್ಮೆ ವಿಶ್ಲೇಷಿಸಿ, ಸ್ಥಳೀಯ ಹವಾಮಾನ ಪರಿಸ್ಥಿತಿಗೆ ಹೋಲಿಕೆ ಮಾಡುತ್ತಾರೆ. ಬಳಿಕವೇ ಅಂತಿಮ ಮುನ್ಸೂಚನೆ ನೀಡಲಾಗುತ್ತದೆ’’ ಎಂದು ಹೇಳಿದ್ದಾರೆ. ಹೀಗಾಗಿ, ಹವಾಮಾನ ಮುನ್ಸೂಚನೆಯಲ್ಲಿ ತಂತ್ರಜ್ಞಾನ ಎಷ್ಟು ಮುಖ್ಯವೋ, ಅದನ್ನು ಪರಿಶೀಲಿಸಿ ಸರಿಯಾದ ನಿರ್ಧಾರಕ್ಕೆ ಬರುವ ತಜ್ಞರ ಅನುಭವವೂ ಅಷ್ಟೇ ಮುಖ್ಯವಾಗಿದೆ.

ಪ್ರತಿದಿನ ಬೆಳಗ್ಗೆ, ಸಂಜೆ 31 ಜಿಲ್ಲೆಗಳ ಹವಾಮಾನ ಮುನ್ಸೂಚನೆ

ಮಾದರಿಗಳ ಫಲಿತಾಂಶ ಮತ್ತು ತಜ್ಞರ ವಿಶ್ಲೇಷಣೆಯ ಆಧಾರದಲ್ಲಿ ಕರ್ನಾಟಕದ 31 ಜಿಲ್ಲೆಗಳಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹವಾಮಾನ ಮುನ್ಸೂಚನೆಗಳನ್ನು ಸಿದ್ಧಪಡಿಸಲಾಗುತ್ತದೆ. ಮಳೆ, ಉಷ್ಣಾಂಶ, ಗಾಳಿಯ ವೇಗ ಮತ್ತು ದಿಕ್ಕು ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಗಳನ್ನು ನೀಡಲಾಗುತ್ತದೆ.

ಭಾರಿ ಮಳೆ, ಗುಡುಗು-ಮಿಂಚು, ಬಿರುಗಾಳಿ, ಹೀಟ್‌ವೇವ್, ಕೋಲ್ಡ್‌ವೇವ್ ಸೇರಿದಂತೆ ವಿವಿಧ ಹವಾಮಾನ ವೈಪರೀತ್ಯಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗುತ್ತದೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವವರ ಸುರಕ್ಷತೆಯ ದೃಷ್ಟಿಯಿಂದ ಮೀನುಗಾರರ ಎಚ್ಚರಿಕೆಗಳನ್ನೂ (Fishermen Warning) ಬಿಡುಗಡೆ ಮಾಡಲಾಗುತ್ತದೆ.

ಹವಾಮಾನದ ತೀವ್ರತೆಯನ್ನು ಆಧರಿಸಿ ಹಸಿರು, ಹಳದಿ, ಆರೆಂಜ್ ಮತ್ತು ರೆಡ್ ಅಲರ್ಟ್‌ಗಳನ್ನು ಪ್ರಕಟಿಸಲಾಗುತ್ತದೆ. ಇದರಿಂದ ಸಾರ್ವಜನಿಕರು, ರೈತರು, ಮೀನುಗಾರರು ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ಕರ್ನಾಟಕದಲ್ಲಿ ಎಷ್ಟು ಹವಾಮಾನ ಕೇಂದ್ರಗಳಿವೆ?

ಕರ್ನಾಟಕದಲ್ಲಿ ಐಎಂಡಿ ವ್ಯಾಪ್ತಿಯ ಪ್ರಮುಖ ವೀಕ್ಷಣಾಲಯಗಳು, ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಮತ್ತು ಮಳೆಮಾಪಕಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ರಾಜ್ಯದಲ್ಲಿ 30ಕ್ಕೂ ಹೆಚ್ಚು ಪ್ರಮುಖ ಹವಾಮಾನ ವೀಕ್ಷಣಾಲಯಗಳು ಹಾಗೂ 100ಕ್ಕೂ ಹೆಚ್ಚು ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಇದರ ಜತೆಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (KSNDMC) ಸಹಕಾರವೂ ಇದೆ. ರಾಜ್ಯ ಸರ್ಕಾರದ ಸಹಯೋಗದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಾಪಿಸಿರುವ 6,000ಕ್ಕೂ ಹೆಚ್ಚು ಟೆಲಿಮೆಟ್ರಿಕ್ ಮಳೆಮಾಪಕಗಳ ಜಾಲದಿಂದಲೂ ಮಳೆಯ ಮಾಹಿತಿ ಲಭ್ಯವಾಗುತ್ತದೆ. ಈ ಮಾಹಿತಿಯನ್ನು ಐಎಂಡಿ ತನ್ನ ಇತರ ದತ್ತಾಂಶಗಳೊಂದಿಗೆ ಸಮನ್ವಯಗೊಳಿಸಿ ಬಳಸಿಕೊಳ್ಳುತ್ತದೆ.

‘‘ರಾಜ್ಯ ಸರ್ಕಾರದ ಟೆಲಿಮೆಟ್ರಿಕ್ ಮಳೆಮಾಪಕಗಳ ಮಾಹಿತಿಯನ್ನೂ ನಾವು ಬಳಸಿಕೊಳ್ಳುತ್ತೇವೆ. ವಿವಿಧ ಮೂಲಗಳಿಂದ ಬರುವ ದತ್ತಾಂಶವನ್ನು ಒಟ್ಟುಗೂಡಿಸಿ ವಿಶ್ಲೇಷಿಸುತ್ತೇವೆ’’ ಎಂದು ಸಿಎಸ್ ಪಾಟೀಲ್ ವಿವರಿಸಿದ್ದಾರೆ.

ಕರ್ನಾಟಕದ ಹವಾಮಾನ ಮುನ್ಸೂಚನೆಗೆ ಜಾಗತಿಕ ದತ್ತಾಂಶವೂ ಅಗತ್ಯ!

ಚಂಡಮಾರುತಗಳಂತಹ ಹವಾಮಾನ ವಿದ್ಯಮಾನಗಳನ್ನು ಅಂದಾಜಿಸಲು ಒಂದು ರಾಜ್ಯದ ಅಥವಾ ಒಂದು ದೇಶದ ಮಾಹಿತಿ ಮಾತ್ರ ಸಾಕಾಗುವುದಿಲ್ಲ. ಸಮುದ್ರದ ಮೇಲಿನ ವಾತಾವರಣ, ನೆರೆಹೊರೆಯ ದೇಶಗಳ ಹವಾಮಾನ ಪರಿಸ್ಥಿತಿ ಮತ್ತು ಗಾಳಿಯ ಚಲನೆಯ ಮಾಹಿತಿಯೂ ಅಗತ್ಯವಾಗುತ್ತದೆ. ಉದಾಹರಣೆಗೆ, ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುತ್ತಿದ್ದರೆ ಅಂಡಮಾನ್ ಸಮುದ್ರದ ಸುತ್ತಮುತ್ತಲಿನ ಹವಾಮಾನ ಪರಿಸ್ಥಿತಿಯೂ ಮುಖ್ಯವಾಗುತ್ತದೆ. ಚಂಡಮಾರುತದ ಚಲನೆ ಮತ್ತು ತೀವ್ರತೆಯನ್ನು ಅಂದಾಜಿಸಲು ಸಮುದ್ರ ಮಟ್ಟದ ದತ್ತಾಂಶ, ಉಪಗ್ರಹ ಚಿತ್ರಗಳು ಹಾಗೂ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ವಿವಿಧ ಪ್ರದೇಶಗಳ ಹವಾಮಾನ ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ವಿಮಾನಗಳ ಹಾರಾಟಕ್ಕೂ ಬೇಕು ಐಎಂಡಿ ಮುನ್ಸೂಚನೆ!

ಹವಾಮಾನ ಮುನ್ಸೂಚನೆ ಕೇವಲ ಸಾರ್ವಜನಿಕರ ಅಥವಾ ರೈತರ ಬಳಕೆಗೆ ಮಾತ್ರ ಸೀಮಿತವಾಗಿಲ್ಲ. ವಿಮಾನಯಾನ ಕ್ಷೇತ್ರದಲ್ಲೂ ಇದು ಅತ್ಯಂತ ಮಹತ್ವದ್ದಾಗಿದೆ. ವಿಮಾನಗಳ ಸುರಕ್ಷಿತ ಹಾರಾಟ ಮತ್ತು ಲ್ಯಾಂಡಿಂಗ್‌ಗೆ ಅಗತ್ಯವಾದ ಹವಾಮಾನ ಮಾಹಿತಿಯನ್ನು ಐಎಂಡಿ ಒದಗಿಸುತ್ತದೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಒಂಬತ್ತು ವಿಮಾನ ನಿಲ್ದಾಣಗಳಲ್ಲಿ ಹವಾಮಾನ ವೀಕ್ಷಣಾ ವ್ಯವಸ್ಥೆಗಳಿದ್ದು, ವಿಮಾನಗಳ ಹಾರಾಟಕ್ಕೆ ಸಂಬಂಧಿಸಿದ ಮುನ್ಸೂಚನೆಗಳನ್ನು ನೀಡಲಾಗುತ್ತದೆ. ಬೆಂಗಳೂರು ವ್ಯಾಪ್ತಿಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಎಚ್‌ಎಎಲ್ ವಿಮಾನ ನಿಲ್ದಾಣ ಹಾಗೂ ಸಿಟಿ ಕಚೇರಿಗಳ ಮೂಲಕ ಹವಾಮಾನ ಸಂಬಂಧಿತ ಕಾರ್ಯಗಳು ನಡೆಯುತ್ತವೆ.

ಹವಾಮಾನ ಮುನ್ಸೂಚನೆಗೆ ದಿನದ 24 ಗಂಟೆಯೂ ಕೆಲಸ

ಈ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವ್ಯವಸ್ಥೆಯಿದೆ. ವಿಮಾನಗಳ ಹಾರಾಟಕ್ಕೆ ಅಗತ್ಯವಾದ ಹವಾಮಾನ ವರದಿ ಮತ್ತು ಮುನ್ಸೂಚನೆಗಳನ್ನು ಒದಗಿಸುವುದು ಐಎಂಡಿಯ ಪ್ರಮುಖ ಜವಾಬ್ದಾರಿಗಳಲ್ಲೊಂದು.

ಹವಾಮಾನ ಇಲಾಖೆ ಕರ್ನಾಟಕ ವ್ಯಾಪ್ತಿಯಲ್ಲಿ ಎಷ್ಟಿದ್ದಾರೆ ಸಿಬ್ಬಂದಿ?

ಹವಾಮಾನ ಮುನ್ಸೂಚನೆ ಸಿದ್ಧಪಡಿಸುವ ಕಾರ್ಯದ ಹಿಂದೆ ತಜ್ಞರು, ತಾಂತ್ರಿಕ ಸಿಬ್ಬಂದಿ ಮತ್ತು ವೀಕ್ಷಣಾ ಕೇಂದ್ರಗಳ ಸಿಬ್ಬಂದಿಯ ಶ್ರಮವಿದೆ. ಸಿಎಸ್ ಪಾಟೀಲ್ ನೀಡಿರುವ ಮಾಹಿತಿಯ ಪ್ರಕಾರ, ಬೆಂಗಳೂರಿನ ಐಎಂಡಿ ವ್ಯವಸ್ಥೆಯಲ್ಲಿ ಸುಮಾರು 65 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ವ್ಯಾಪ್ತಿಯ ಒಟ್ಟು ಸಿಬ್ಬಂದಿ ಸಂಖ್ಯೆ ಸುಮಾರು 100ಕ್ಕೂ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮುರಸು ಚಂಡಮಾರುತದ ಅಬ್ಬರ; ಚೆನ್ನೈನಲ್ಲಿ 20ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದು, ಸಮುದ್ರ ತೀರದಲ್ಲಿ ಹೈ ಅಲರ್ಟ್

ಒಟ್ಟಿನಲ್ಲಿ, ಹವಾಮಾನ ಮುನ್ಸೂಚನೆ ಎಂದರೆ ಕೇವಲ ಕಂಪ್ಯೂಟರ್‌ನಲ್ಲಿ ಮಾಹಿತಿ ಸಂಗ್ರಹಿಸಿ ವರದಿ ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲ. ಸಾವಿರಾರು ಕೇಂದ್ರಗಳಿಂದ ದತ್ತಾಂಶ ಸಂಗ್ರಹ, ಉಪಗ್ರಹ ಮತ್ತು ರೇಡಾರ್‌ಗಳ ನಿಗಾ, ಸೂಪರ್ ಕಂಪ್ಯೂಟರ್‌ಗಳ ವಿಶ್ಲೇಷಣೆ ಹಾಗೂ ತಜ್ಞರ ಪರಿಶೀಲನೆ ಹೀಗೆ ಹಲವು ಹಂತಗಳ ಕೆಲಸ ಇದರ ಹಿಂದೆ ನಡೆಯುತ್ತದೆ. ಚಂಡಮಾರುತ, ಭಾರಿ ಮಳೆ, ಪ್ರವಾಹ ಅಥವಾ ಉಷ್ಣ ಅಲೆಗಳಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಮುಂಚಿತವಾಗಿ ಎಚ್ಚರಿಕೆ ನೀಡಲು ಈ ಸಮಗ್ರ ವ್ಯವಸ್ಥೆ ನೆರವಾಗುತ್ತದೆ. ಮುನ್ಸೂಚನೆ ಆಧರಿಸಿ ಸರ್ಕಾರ ಮತ್ತು ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಬಹುದು; ಅಮೂಲ್ಯ ಜೀವಗಳನ್ನು ಉಳಿಸಲೂ ಸಾಧ್ಯವಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us