AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುರಸು ಚಂಡಮಾರುತದ ಅಬ್ಬರ; ಚೆನ್ನೈನಲ್ಲಿ 20ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದು, ಸಮುದ್ರ ತೀರದಲ್ಲಿ ಹೈ ಅಲರ್ಟ್

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಮುರಸು' ಚಂಡಮಾರುತವು ಆಂಧ್ರಪ್ರದೇಶ ಕರಾವಳಿಯತ್ತ ಧಾವಿಸುತ್ತಿದ್ದು, ಇಂದು (ನವೆಂಬರ್ 2) ರಾತ್ರಿ ಅಥವಾ ನಾಳೆ ಮುಂಜಾನೆಯ ವೇಳೆಗೆ ಕರಾವಳಿ ದಾಟಲಿದೆ. ಈ ನಡುವೆ, ಚೆನ್ನೈನಿಂದ ಸುಮಾರು 250-260 ಕಿ.ಮೀ ದೂರದಲ್ಲಿದ್ದ ಚಂಡಮಾರುತದ ಪ್ರಭಾವದಿಂದಾಗಿ ಉತ್ತರ ತಮಿಳುನಾಡಿನಾದ್ಯಂತ ಭಾರಿ ಮಳೆಯಾಗಿದ್ದು, ಚೆನ್ನೈನ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದಿಂದ ಸಂಚರಿಸುವ 20ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಆಂಧ್ರದ ದಕ್ಷಿಣ ಕರಾವಳಿ ಮತ್ತು ರಾಯಲಸೀಮಾ ಪ್ರದೇಶಗಳಲ್ಲಿ ಇಂದು ಹಾಗೂ ಮಂಗಳವಾರ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಮುರಸು ಚಂಡಮಾರುತದ ಅಬ್ಬರ; ಚೆನ್ನೈನಲ್ಲಿ 20ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದು, ಸಮುದ್ರ ತೀರದಲ್ಲಿ ಹೈ ಅಲರ್ಟ್
ತಮಿಳುನಾಡಿನ ಸಮುದ್ರದಲ್ಲಿ ಮೀನುಗಾರಿಕೆ ಸ್ಥಗಿತImage Credit source: PTI
ಸುಷ್ಮಾ ಚಕ್ರೆ
|

Updated on:Nov 02, 2026 | 3:44 PM

Share

ಅಮರಾವತಿ, ನವೆಂಬರ್ 2: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಮುರಸು’ ಚಂಡಮಾರುತವು ಇಂದು ಮುಂಜಾನೆ ಮತ್ತಷ್ಟು ಪ್ರಬಲಗೊಂಡು ತೀವ್ರ ಚಂಡಮಾರುತವಾಗಿ ಮಾರ್ಪಟ್ಟಿದೆ. ಈ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯತ್ತ ಧಾವಿಸುತ್ತಿದ್ದು, ನೆಲ್ಲೂರು ಮತ್ತು ನರಸಾಪುರ ನಡುವೆ ಇಂದು ಮಧ್ಯರಾತ್ರಿಯಿಂದ ನವೆಂಬರ್ 3ರ ಮುಂಜಾನೆಯ ವೇಳೆಗೆ ಕರಾವಳಿ ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯನ್ನು ದಾಟುವ ಸಮಯದಲ್ಲಿ ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗಾಳಿಯ ವೇಗ ಗಂಟೆಗೆ 120 ಕಿ.ಮೀ ತಲುಪುವ ಎಚ್ಚರಿಕೆ ನೀಡಲಾಗಿದೆ. ಆಂಧ್ರ ಕರಾವಳಿಯನ್ನು ಅಪ್ಪಳಿಸುವ ಮೊದಲು ಇದು ಅತ್ಯಂತ ತೀವ್ರ ಚಂಡಮಾರುತವಾಗಿ ಪ್ರಬಲಗೊಳ್ಳುವ ಸಾಧ್ಯತೆಯನ್ನೂ ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಈ ಚಂಡಮಾರುತಕ್ಕೆ ‘ಮುರಸು’ ಎಂಬ ಹೆಸರನ್ನು ಭಾರತವೇ ಸೂಚಿಸಿತ್ತು.

ವಿಮಾನ ಸಂಚಾರ ರದ್ದು:

ಭಾರಿ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಚೆನ್ನೈನಲ್ಲಿ 20ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ತಮಿಳುನಾಡಿನ ಚೆನ್ನೈ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಇಂದು ಶಾಲೆ ಮತ್ತು ಕಾಲೇಜುಗಳಿಗೆ ಸಂಪೂರ್ಣ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: ಮುರಸು ಚಂಡಮಾರುತ: ನವೆಂಬರ್ 3ರ ಬೆಳಗಿನ ಜಾವ ಆಂಧ್ರಕ್ಕೆ ಅಪ್ಪಳಿಸುವ ಸಾಧ್ಯತೆ, ತಮಿಳುನಾಡು, ಒಡಿಶಾದಲ್ಲೂ ಕಟ್ಟೆಚ್ಚರ

ಹಾಗೇ, ತೆಲಂಗಾಣ ರಾಜ್ಯದ 6 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ 5 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಆಂಧ್ರಪ್ರದೇಶದ ಜೊತೆಗೆ ಒಡಿಶಾ ರಾಜ್ಯದಲ್ಲೂ ತೀವ್ರ ಹೈ ಅಲರ್ಟ್ ಘೋಷಿಸಲಾಗಿದೆ. ಅಪಾಯಕಾರಿ ಮತ್ತು ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ದಕ್ಷಿಣ ಒಡಿಶಾದ ಗಂಜಾಂ, ಗಜಪತಿ, ರಾಯಗಡ, ಕೊರಾಪುಟ್ ಮತ್ತು ಮಲ್ಕಾನ್‌ಗಿರಿ ಜಿಲ್ಲೆಗಳಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, 300ಕ್ಕೂ ಹೆಚ್ಚು ಎನ್‌ಡಿಆರ್‌ಎಫ್, ಒಡಿಆರ್‌ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಮುರಸು ಚಂಡಮಾರುತದ ಎಫೆಕ್ಟ್​​: ಕರ್ನಾಟಕದಲ್ಲಿ 5 ದಿನಗಳ ಕಾಲ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​​

ಆಂಧ್ರಪ್ರದೇಶದಲ್ಲಿ ಇಂದು ರಾತ್ರಿ ಚಂಡಮಾರುತ ಅಪ್ಪಳಿಸುವುದರಿಂದ ಕಾರ್ಯಾಚರಣೆಗಾಗಿ 6 ಎನ್‌ಡಿಆರ್‌ಎಫ್ ಹಾಗೂ 7 ಎಸ್‌ಡಿಆರ್‌ಎಫ್ ತಂಡಗಳನ್ನು ಮುಂಚಿತವಾಗಿಯೇ ಸಜ್ಜಾಗಿಡಲಾಗಿದೆ. ಚಂಡಮಾರುತದಿಂದ ಕಂಬಗಳು ಹಾಗೂ ವಿದ್ಯುತ್ ಕಂಬಗಳು ಧರಾಶಾಹಿಯಾಗಿ ವಿದ್ಯುತ್ ಜಾಲಕ್ಕೆ ಭಾರಿ ಹಾನಿಯಾಗುವ ಸಾಧ್ಯತೆಯಿರುವುದರಿಂದ, ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ತಮಿಳುನಾಡು ಸಿಎಂ ವಿಜಯ್ ಹಾಗೂ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿದ್ಯುತ್ ದುರಸ್ತಿ ಕಾರ್ಯಕ್ಕೆ ಅಗತ್ಯ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಇಬ್ಬರೂ ಮುಖ್ಯಮಂತ್ರಿಗಳು ಧನಾತ್ಮಕವಾಗಿ ಸ್ಪಂದಿಸಿದ್ದು, ಆಂಧ್ರಪ್ರದೇಶಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ನವೆಂಬರ್ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದ್ದು, ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶವು ಇತ್ತೀಚೆಗಷ್ಟೇ ‘ಅರ್ನಬ್’ ಚಂಡಮಾರುತದ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಈಗ ಮುರಸು ಚಂಡಮಾರುತದ ಭೀತಿ ಎದುರಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:28 pm, Mon, 2 November 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More