ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ: ಚುನಾವಣೆಗೆ ಕಾಯಬೇಕು ಮತ್ತೆ ಆರೇಳು ತಿಂಗಳು..!
2019 ರ ಮಾರ್ಚ್ 6 ಕ್ಕೆ ಪಾಲಿಕೆಯಲ್ಲಿ ಬಿಜೆಪಿ ತನ್ನ ಆಡಳಿತದ ಎರಡನೇ ಅವಧಿಯನ್ನು ಮುಗಿಸಿತ್ತು. ಕಳೆದ 21 ತಿಂಗಳಿನಿಂದಲೂ ಪಾಲಿಕೆಯಲ್ಲಿ ಜನಪ್ರತಿನಿಧಿಗಳೇ ಇಲ್ಲದಂಗಾಗಿದೆ. ಸದ್ಯಕ್ಕೆ ಅವಳಿ ನಗರದಲ್ಲಿ ಒಟ್ಟು 67 ವಾರ್ಡ್ ಗಳಿದ್ದವು. ಈ ವಾರ್ಡ್ ಗಳ ಸಂಖ್ಯೆಯನ್ನು 82 ಕ್ಕೆ ಏರಿಸಲಾಯಿತು.
ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಯಾವುದೇ ಯೋಜನೆಗಳು ಬಂದರೂ ಅವು ಪೂರ್ಣಗೊಳ್ಳುವುದರಲ್ಲಿ ಅನೇಕ ಸರ್ಕಾರಗಳು ಬದಲಾಗಿ ಹೋಗಿರುತ್ತವೆ. ಸರ್ಕಾರ ಯಾವುದೇ ಬರಲಿ, ಅವಳಿ ನಗರಕ್ಕೆ ಪಾಲಿಕೆ ಇದೆ. ಹೀಗಾಗಿ ಅಭಿವೃದ್ಧಿಗೆ ಯಾವುದೇ ತೊಂದರೆಯಾಗುವುದಿಲ್ಲ ಅನ್ನುವಂತೆಯೂ ಇಲ್ಲ. ಏಕೆಂದರೆ ಕಳೆದ 21 ತಿಂಗಳಿನಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಪುರಪಿತೃಗಳೇ ಇಲ್ಲ. ಇಷ್ಟರಲ್ಲಿಯೇ ಚುನಾವಣೆ ನಡೆಯಬಹುದು ಅಂದುಕೊಳ್ಳಲಾಗಿತ್ತು. ಆದರೆ ಇದೀಗ ಮತ್ತೆ ಆರೇಳು ತಿಂಗಳು ಚುನಾವಣೆಗೆ ಮುಹೂರ್ತವೇ ಇಲ್ಲದಂತಾಗಿದೆ. ಹೀಗಾಗಿ ಅವಳಿ ನಗರದ ಜನರು ಜನಪ್ರತಿನಿಧಿಗಳು ಇಲ್ಲದೇ ತತ್ತರಿಸಿ ಹೋಗುವಂತಾಗಿದೆ. ರಾಜ್ಯದ ಅತಿದೊಡ್ಡ ಪಾಲಿಕೆ ಅನ್ನುವ ಖ್ಯಾತಿ ಹೊಂದಿದ್ದರೂ ಇಂಥ ಅನೇಕ ಸಮಸ್ಯೆಗಳಿಂದಾಗಿ ಜನರು ತಮ್ಮ ಕಷ್ಟಗಳನ್ನು ಯಾರಿಗೆ ಹೇಳಬೇಕು ಅನ್ನುವ ಸ್ಥಿತಿಯಲ್ಲಿದ್ದಾರೆ.
ಇಷ್ಟು ದಿನ ಚುನಾವಣೆ ಆಗಿಲ್ಲವೇಕೆ? 2019 ರ ಮಾರ್ಚ್ 6 ಕ್ಕೆ ಪಾಲಿಕೆಯಲ್ಲಿ ಬಿಜೆಪಿ ತನ್ನ ಆಡಳಿತದ ಎರಡನೇ ಅವಧಿಯನ್ನು ಮುಗಿಸಿತ್ತು. ಕಳೆದ 21 ತಿಂಗಳಿನಿಂದಲೂ ಪಾಲಿಕೆಯಲ್ಲಿ ಜನಪ್ರತಿನಿಧಿಗಳೇ ಇಲ್ಲದಂಗಾಗಿದೆ. ಸದ್ಯಕ್ಕೆ ಅವಳಿ ನಗರದಲ್ಲಿ ಒಟ್ಟು 67 ವಾರ್ಡ್ ಗಳಿದ್ದವು. ಈ ವಾರ್ಡ್ ಗಳ ಸಂಖ್ಯೆಯನ್ನು 82 ಕ್ಕೆ ಏರಿಸಲಾಯಿತು. ಇದಕ್ಕೆ ರಾಜ್ಯ ಸರಕಾರದ ಅನುಮೋದನೆಯೂ ಸಿಕ್ಕಿತು. ಆದರೆ ಈ ವಾರ್ಡ್ಗಳ ಪುನಾರಚನೆ ಸರಿಯಾಗಿ ಆಗಿಲ್ಲ ಎಂದು ಕೆಲವರು ಕೋರ್ಟ್ ಮೊರೆ ಹೋದರು. ಏಕೆಂದರೆ ಕೆಲವು ವಾರ್ಡ್ಗಳನ್ನು ಎರಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಲಾಗಿತ್ತು.
ಉದಾಹರಣೆಗೆ ಹೇಳುವುದಾದರೆ, ಹುಬ್ಬಳ್ಳಿಯ 44 ನೇ ವಾರ್ಡ್ ಅಂಬೇಡ್ಕರ್ ನಗರ ಬಡಾವಣೆಯ ಗುಡಿ ಓಣಿ ಮತ್ತು ಜಿಹ್ವೇಶ್ವರ ಕಲ್ಯಾಣ ಮಂಟಪ ಸುತ್ತಮುತ್ತಲಿನ ಪ್ರದೇಶವನ್ನು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಗಿತ್ತು. ಅಲ್ಲದೆ, ಪಾಲಿಕೆ ಅಧಿಕಾರಿಗಳು ವಾರ್ಡ್ ವಿಂಗಡನೆ ಮಾಡುವಾಗ ಪ್ರತಿ ವಾರ್ಡ್ ಗೆ 11 ರಿಂದ 12 ಸಾವಿರ ಜನಸಂಖ್ಯೆ ಮಿತಿ ಲೆಕ್ಕಾಚಾರದಲ್ಲಿ ವಾರ್ಡ್ ಮಾಡಿದ್ದರು. ಆದರೆ ಇದಕ್ಕೆ ಸ್ಥಳೀಯರ ಜೊತೆಗೆ ಮುಂಬರೋ ಪಾಲಿಕೆ ಚುನಾವಣಾ ಆಕಾಂಕ್ಷಿಗಳ ಆಕ್ಷೇಪಣೆಯೂ ಕೇಳಿ ಬಂತು. ಆಕಾಂಕ್ಷಿಗಳು ತಮ್ಮ ತಮ್ಮ ಮತಗಳ ಮೇಲೆ ಕಣ್ಣಿಟ್ಟು ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ. ಅವರಿಗೆ ಕೆಲವು ಕಡೆಗಳಲ್ಲಿ ಅವರಿಗೆ ಅನಾನುಕೂಲವಾಗೋದು ಖಚಿತವಾಗಿತ್ತು. ಹೀಗಾಗಿ ಕೂಡಲೇ ಅನೇಕರು ಕೋರ್ಟ್ ಮೊರೆ ಹೋದರು.
ಕೋರ್ಟ್ಗೆ ಹೋದವರು ಯಾರಾರು? ಮಾಜಿ ಕಾರ್ಪೋರೇಟರ್ ಹಾಗೂ ಬಿಜೆಪಿ ಮುಖಂಡ ಸಂಜಯ ಕಪಟಕರ್ ನೇತ್ರತ್ವದಲ್ಲಿ ಅನೇಕರು ಧಾರವಾಡದ ಹೈಕೋರ್ಟ್ ಗೆ ಈ ಬಗ್ಗೆ ತಕರಾರು ಅರ್ಜಿ ಸಲ್ಲಿಸಿದರು. ಸಂಜಯ್ ಜೊತೆಗೆ ಕೃಷ್ಣ ಗಂಡಗಾಳೇಕರ್, ನರೇಂದ್ರ ಕುಲಕರ್ಣಿ, ವಿಶ್ವನಾಥ ಸೋಮಾಪುರ, ಮಹಾವೀರ ಶಿವಣ್ಣವರ್, ಪಾಂಡುರಂಗ ವರ್ಣೇಕರ್, ಬಸವರಾಜ ಪೂಜಾರ್, ಸಂಜಯ್ ಕತ್ರಿಮಲ್, ಶಿವಶಂಕರ ಗುರಗುಂಟಿ, ವೆಂಕಟೇಶ ಮೇಸ್ತ್ರಿ, ರಮೇಶ ಮತ್ತು ಡಿ.ಕೆ. ಚವ್ಹಾಣ್ ಹೈಕೋರ್ಟ್ ಮೊರೆ ಹೋದವರು. ಯಾವಾಗ ಈ ಪ್ರಕರಣ ಹೈಕೋರ್ಟ್ ಗೆ ಹೋಯಿತೋ ಆಗ ರಾಜ್ಯ ಸರಕಾರಕ್ಕೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿತು. ಇದೇ ವೇಳೆ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಕೂಡಲೇ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಸೂಚಿಸುವಂತೆ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದರು.
ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಬೇಗನೆ ಮುಗಿಸಿಕೊಳ್ಳಲು ಸರಕಾರ ಮನಸ್ಸು ಮಾಡಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಚುನಾವಣೆ ನಡೆದು ಪಾಲಿಕೆಗೆ ಸದಸ್ಯರು ಬಂದರೆ ಶಾಸಕರ ಅಧಿಕಾರ ಹಾಗೂ ಅನುದಾನಕ್ಕೆ ಕತ್ತರಿ ಬೀಳುತ್ತೆ ಅನ್ನೋ ಕಾರಣಕ್ಕೆ ಶಾಸಕರು ಕೂಡ ಸುಮ್ಮನಾಗಿಬಿಟ್ಟರು. ಇನ್ನು ಇದೇ ವೇಳೆ ಪ್ರಕಟಿತ ಮೀಸಲಾತಿಗೂ ಆಕ್ಷೇಪಣೆ ಕೇಳಿ ಬಂತು. ಇದರ ವಿರುದ್ಧವೂ ಅನೇಕರು ಹೈಕೋರ್ಟ್ ಮೊರೆ ಹೋದರು. ಇವೆಲ್ಲಾ ಕಾರಣದಿಂದಾಗಿ ಚುನಾವಣೆ ಅನ್ನುವುದು ಗಗನ ಕುಸುಮವಾಗಿ ಹೋಯಿತು.
21 ತಿಂಗಳು ಕಳೆದು ಹೋಗಿವೆ, ಇನ್ನೂ ಆರೇಳು ತಿಂಗಳು ಕಳೆಯಬೇಕು..! ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಸೂಚಿಸುವಂತೆ ಕೋರಿ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಬೆಂಗಳೂರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, 6 ವಾರಗಳಲ್ಲಿ ವಾರ್ಡ್ ಗಳ ಮರುವಿಂಗಡನೆ ಕಾರ್ಯವನ್ನು ಮುಕ್ತಾಯಗೊಳಿಸುವಂತೆ ಸೂಚನೆ ನೀಡಿದೆ. ಅದಾದ ಎರಡು ತಿಂಗಳಲ್ಲಿ ಮೀಸಲು ಅಧಿಸೂಚನೆ ಹೊರಡಿಸಬೇಕು. ನಂತರ ಎರಡು ತಿಂಗಳಲ್ಲಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು. ಮತದಾರರ ಪಟ್ಟಿ ಪ್ರಕಟವಾದ 45 ದಿನಗಳ ಬಳಿಕ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಅಂತಾ ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ ಆದೇಶ ನೀಡಿದ ಅಂಶಗಳ ಅವಧಿಯನ್ನು ನೋಡಿದರೆ ಮತ್ತೆ ಆರೇಳು ತಿಂಗಳು ಕಳೆಯೋದು ಗ್ಯಾರಂಟಿ. ಹೀಗಾಗಿ ಮತ್ತೆ ಆರೇಳು ತಿಂಗಳವರೆಗೆ ರಾಜ್ಯದ ಅತಿದೊಡ್ಡ ಮಹಾನಗರ ಪಾಲಿಕೆ ಅನ್ನೋ ಖ್ಯಾತಿ ಪಡೆದಿರೋ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜನಪ್ರತಿನಿಧಿಗಳಿಲ್ಲದೇ ಇರಬೇಕಾಗುತ್ತದೆ.