ಎಫ್‌ಐಆರ್‌ ದಾಖಲಿಸದಿದ್ದರೆ ಸ್ಟಿಂಗ್‌ ಆಪರೇಶನ್‌ ಮಾಡಿಸಿದ್ದು ಕಾಂಗ್ರೆಸ್ಸೇ ಎಂದು ಖಚಿತ: ಅಶೋಕ್

ರಾಜ್ಯ ರಾಜಕಾರಣದಲ್ಲೀಗ ಸ್ಟಿಂಗ್ ಆಪರೇಷನ್‌ನದ್ದೇ ಸದ್ದು. ಮಾಜಿ ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ಕೇಳಿಬಂದಿರುವ ಸ್ಟಿಂಗ್ ಆಪರೇಷನ್ ವಿವಾದಕ್ಕೆ, ದಿನಕ್ಕೊಂದು ಹೊಸ ತಿರುವು ಸಿಗುತ್ತಿದೆ. ಸ್ಟಿಂಗ್ ಮಾಡಿಸಿದ್ದು ಯಾರು? ಯಾರನ್ನ ಟಾರ್ಗೆಟ್ ಮಾಡಲಾಗಿತ್ತು? ಇದರ ಹಿಂದಿನ ಉದ್ದೇಶವೇನು ಎನ್ನುವ ಪ್ರಶ್ನೆಗಳ ನಡುವೆ ಮೂರು ಪಕ್ಷಗಳ ನಾಯಕರ ನಡುವೆ, ಆರೋಪ-ಪ್ರತ್ಯಾರೋಪಗಳ ವಾಗ್ಯುದ್ಧ ಜೋರಾಗಿದೆ. ಇದರ ಮಧ್ಯೆ ವಿಪಕ್ಷ ನಾಯಕರ ಆರ್ ಅಶೋಕ್ ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ.

ಎಫ್‌ಐಆರ್‌ ದಾಖಲಿಸದಿದ್ದರೆ ಸ್ಟಿಂಗ್‌ ಆಪರೇಶನ್‌ ಮಾಡಿಸಿದ್ದು ಕಾಂಗ್ರೆಸ್ಸೇ ಎಂದು ಖಚಿತ: ಅಶೋಕ್
R Ashok

Updated on: Oct 14, 2026 | 6:13 PM

ಬೆಂಗಳೂರು,(ಅಕ್ಟೋಬರ್‌ 14):  ಮೊದಲು ಸಿಎಂ ಡಿಕೆ ಶಿವಕುಮಾರ್ ಅವರು ಸ್ಟಿಂಗ್ ಆಪರೇಷನ್​ ಬಗ್ಗೆ  ಕ್ಯಾಬಿನೆಟ್ ಸಭೆಯಲ್ಲೇ ಪ್ರಸ್ತಾಪಿಸಿ, ಸಚಿವರಿಗೆ ಎಚ್ಚರಿಕೆ ಇರುವಂತೆ ಅಲರ್ಟ್ ಮಾಡಿದ್ದರು.  ಹಾಗಾದ್ರೆ, ವಿಪಕ್ಷಗಳು ಸ್ಟಿಂಗ್ ಆಪರೇಷನ್ ಮಾಡಿಸುತ್ತಿದ್ದರೆ ಸಿಎಂ ಎಫ್​​ಐಆರ್ ದಾಖಲಿಸಿ ತನಿಖೆಗೆ ಆದೇಶಿಸಬೇಕಿತ್ತು. ಆದ್ರೆ, ಸಿಎಂ ಬಾಯಿಂದಲೇ ಹೇಳಿದ್ದಾರೆ ಬಿಟ್ಟರೆ ಇದುವರೆಗೂ ಯಾವುದೇ ದೂರು ದಾಖಲಿಸಿಲ್ಲ. ಹೀಗಾಗಿ ವಿಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿದ್ದು, ಆ ಪಕ್ಷದವರೇ ಸ್ಟಿಂಗ್ ಮಾಡಿಸಿದ್ದಾರೆ ಎಂದು ಆರೋಪಿಸಿದ್ದು, ತನಿಖೆಗೆ ಆಗ್ರಹಿಸುತ್ತಿವೆ. ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿ, ಸ್ಟಿಂಗ್‌ ಆಪರೇಶನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸದೇ ಇದ್ದಲ್ಲಿ, ಇದನ್ನು ಮಾಡಿಸಿದ್ದು ಕಾಂಗ್ರೆಸ್‌ ನಾಯಕರೇ ಎಂಬುದು ಖಚಿತವಾಗುತ್ತದೆ ಎಂದಿದ್ದಾರೆ.

ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್‌ಡ್ರೈವ್‌, ಸ್ಟಿಂಗ್‌ ಆಪರೇಶನ್‌ ಎಂದುಕೊಂಡು ಕರ್ನಾಟಕದ ರಾಜಕಾರಣದ ಮಾನವನ್ನು ಕಾಂಗ್ರೆಸ್‌ ಹರಾಜು ಹಾಕಿದೆ. ಇದು ಹೊಲಸು ರಾಜಕಾರಣವಾಗಿದ್ದು, ಇದು ಯಾರಿಗೂ ಶೋಭೆ ತರುವುದಿಲ್ಲ. ತೆಲಂಗಾಣ, ತಮಿಳುನಾಡು ರಾಜಕಾರಣ ನಮ್ಮಲ್ಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆವು. ಆದರೀಗ ಸಿಡಿ ಫ್ಯಾಕ್ಟರಿ, ಪೆನ್‌ ಡ್ರೈವ್‌ ಫ್ಯಾಕ್ಟರಿಯಿಂದಾಗಿ ಈ ರಾಜಕಾರಣವನ್ನು ನೋಡಲಾಗುತ್ತಿಲ್ಲ. ಮುಖ್ಯಮಂತ್ರಿ ಕೇವಲ ಹೇಳಿಕೆಗಳನ್ನು ನೀಡುವ ಬದಲು ಕೂಡಲೇ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: ‘ಸಿದ್ದರಾಮಯ್ಯ ಸ್ಟಿಂಗ್​​ ಮಾಡಿಸಿದ್ದು ಜನತಾ ದಳ’​​: ಸಚಿವ ಚಲುವರಾಯಸ್ವಾಮಿ ಹೊಸ ಬಾಂಬ್​

ಈ ರಾಜ್ಯದಲ್ಲಿ ಗೃಹ ಸಚಿವರು ಇಲ್ಲವೇ? ಕೂಡಲೇ ಎಫ್‌ಐಆರ್‌ ದಾಖಲಿಸಿ, ನಂತರ ಯಾವ ತನಿಖೆಗೆ ನೀಡಬೇಕು ಎಂದು ತೀರ್ಮಾನಿಸಬೇಕು. ಸಚಿವ ಪ್ರಿಯಾಂಕ್‌ ಖರ್ಗೆ ಕೇವಲ ಆರ್‌ಎಸ್‌ಎಸ್‌ ಎನ್ನುತ್ತಾರೆ. ಆದರೆ ಸ್ವಯಂಪ್ರೇರಿತವಾಗಿ ತನಿಖೆ ಮಾಡುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ವೀಡಿಯೋ ಯಾರು ಹಂಚಿದ್ದಾರೆ ಎಂದು ತನಿಖೆಯಾಗಲಿ ಎಂದು ದೂರು ನೀಡಿದ್ದಾರೆ. ಈ ವಿಷಯವನ್ನು ತನಿಖೆ ಮಾಡಬೇಕು, ಇದರ ಹಿಂದೆ ಯಾವ ನಾಯಕ ಇದ್ದಾರೆ ಎಂದು ತನಿಖೆಯಾಗಬೇಕು. ಈ ವಿಷಯ ಆಚೆ ಬರಬೇಕಿದೆ. ಇಲ್ಲವಾದರೆ ಸಭ್ಯತೆ ಇಲ್ಲದ ರಾಜಕಾರಣವಾಗುತ್ತದೆ ಎಂದರು.

ಇದರ ತನಿಖೆಯನ್ನು ಮಾಡದಿದ್ದರೆ ರಾಜ್ಯದ ಮಾನ ಹರಾಜಾಗುತ್ತದೆ. ಸಿದ್ದರಾಮಯ್ಯನವರನ್ನು ಮುಗಿಸಬೇಕು, ಸರ್ವನಾಶ ಮಾಡಬೇಕು, ಅಹಿಂದ ರಾಜಕಾರಣ ಮಾಡಬಾರದು ಎಂಬ ಕಾರಣಕ್ಕೆ ಇದನ್ನು ಮಾಡಲಾಗಿದೆ. ಸರ್ಕಾರ ಎಫ್‌ಐಆರ್‌ ದಾಖಲಿಸಲು ಹಿಂದೇಟು ಹಾಕುತ್ತಿದೆ. ಹತ್ತು ಸಚಿವರ ಮೇಲೆ ಆರೋಪವಿದ್ದು, ಎಲ್ಲ ಸಚಿವರು ನಾನಲ್ಲ ಎಂದು ಹೇಳಿಕೊಂಡು ಒದ್ದಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಬೆಂಬಲಿಗರು ಇದನ್ನು ಕಾಂಗ್ರೆಸ್‌ ನಾಯಕರೇ ಮಾಡಿಸಿದ್ದು ಎನ್ನುತ್ತಿದ್ದಾರೆ. ಎಫ್‌ಐಆರ್‌ ಮಾಡದೇ ಇದ್ದರೆ ಇದು ಖಚಿತವಾಗುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Wed, 14 October 26

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us