India Justice Report: ಇಂಡಿಯಾ ಜಸ್ಟೀಸ್ ರಿಪೋರ್ಟ್ 2025; ನ್ಯಾಯಾಂಗ, ಪೊಲೀಸ್ ವ್ಯವಸ್ಥೆಯಲ್ಲಿ ಕರ್ನಾಟಕವೇ ನಂಬರ್ 1
'ಇಂಡಿಯಾ ಜಸ್ಟೀಸ್ ರಿಪೋರ್ಟ್ 2025' ರ ಪ್ರಕಾರ, ಕರ್ನಾಟಕವು ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಗಳಲ್ಲಿ ಅಗ್ರಸ್ಥಾನ ಪಡೆದಿದೆ. ದಕ್ಷಿಣ ಭಾರತದ ರಾಜ್ಯಗಳು ಉತ್ತಮ ಪ್ರದರ್ಶನ ತೋರಿದರೆ, ಉತ್ತರ ಭಾರತದ ರಾಜ್ಯಗಳು ಹಿಂದುಳಿದಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿವೆ. ಈ ವರದಿಯು ನ್ಯಾಯ ಒದಗಿಸುವ ಸಾಮರ್ಥ್ಯದಲ್ಲಿ ರಾಜ್ಯಗಳನ್ನು ಶ್ರೇಣೀಕರಿಸುತ್ತದೆ.

ಬೆಂಗಳೂರು, ಏಪ್ರಿಲ್ 15: ‘ಇಂಡಿಯಾ ಜಸ್ಟೀಸ್ ರಿಪೋರ್ಟ್ 2025 (India Justice Report 2025)’ ಬಿಡುಗಡೆಯಾಗಿದ್ದು, ನ್ಯಾಯಾಂಗ (Judicial) ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಕರ್ನಾಟಕ (Karnataka) ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ದಕ್ಷಿಣದ ರಾಜ್ಯಗಳೇ ಮುಂಚೂಣಿಯಲ್ಲಿದ್ದು, ಉತ್ತರದ ರಾಜ್ಯಗಳು ಕಳಪೆ ಪ್ರದರ್ಶನ ತೋರಿವೆ. ನ್ಯಾಯ ಒದಗಿಸುವ ಸಾಮರ್ಥ್ಯದ ವಾರ್ಷಿಕ ಶ್ರೇಯಾಂಕದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಈ ರಾಜ್ಯಗಳ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿರುವುದಾಗಿ ‘ಇಂಡಿಯಾ ಜಸ್ಟೀಸ್ ರಿಪೋರ್ಟ್ 2025’ ಉಲ್ಲೇಖಿಸಿದೆ. 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ (ತಲಾ ಒಂದು ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯೊಂದಿಗೆ) ಕರ್ನಾಟಕಕ್ಕೆ ಮೊದಲ ಸ್ಥಾನ ದೊರೆತಿದೆ.
ಐಜೆಆರ್ ಶ್ರೇಯಾಂಕ: ದಕ್ಷಿಣದ ರಾಜ್ಯಗಳ ಉತ್ತಮ ಸಾಧನೆ
ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವಿನಲ್ಲಿ ರಾಜ್ಯಗಳ ಸಾಮರ್ಥ್ಯದ ಆಧಾರದ ಮೇಲೆ ಐಜೆಆರ್ ರ್ಯಾಂಕಿಂಗ್ ಪ್ರಕಟಿಸಲಾಗಿದೆ. ಕರ್ನಾಟಕ ಕಳೆದ ವರ್ಷವೂ ಅಗ್ರ ಸ್ಥಾನ ಗಳಿಸಿದ್ದು, ಈ ವರ್ಷ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ವರ್ಷ ಐದನೇ ಸ್ಥಾನ ಪಡೆದಿದ್ದ ಆಂಧ್ರಪ್ರದೇಶ ಈ ವರ್ಷ ಎರಡನೇ ಸ್ಥಾನಕ್ಕೆ ಬಂದಿದೆ. 2019 ರಲ್ಲಿ ಹನ್ನೊಂದನೇ ಸ್ಥಾನ ಪಡೆದಿದ್ದ ತೆಲಂಗಾಣ ಈ ಬಾರಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ.
ಐಜೆಆರ್ ಶ್ರೇಯಾಂಕದಲ್ಲಿ ಕುಸಿದ ಮಹಾರಾಷ್ಟ್ರ
ಪ್ರಬಲ ಪ್ರದರ್ಶನ ನೀಡಿದ ಕೇರಳ ಮತ್ತು ತಮಿಳುನಾಡು ಸಣ್ಣ ಏರಿಳಿತಗಳ ಹೊರತಾಗಿಯೂ ಮೊದಲ ಐದರಲ್ಲಿ ಸ್ಥಾನ ಪಡೆದಿವೆ ಎಂದು ವರದಿ ತಿಳಿಸಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಒಡಿಶಾದ ಮಧ್ಯಮ ಶ್ರೇಣಿಯ ರಾಜ್ಯಗಳು ಸ್ಥಿರವಾದ ಸುಧಾರಣೆಯನ್ನು ಕಂಡಿವೆ. ಈ ಹಿಂದೆ ಮುಂಚೂಣಿಯಲ್ಲಿದ್ದ ಮಹಾರಾಷ್ಟ್ರವು ಈ ಬಾರಿ ಶ್ರೇಯಾಂಕದಲ್ಲಿ ಕುಸಿತ ಕಂಡಿದೆ. ಗುಜರಾತ್ ಮತ್ತು ಪಂಜಾಬ್ ಕಳಪೆ ಪ್ರದರ್ಶನ ತೋರಿವೆ ಎಂದು ವರದಿ ತಿಳಿಸಿದೆ.
ಕೊನೇ 2 ಸ್ಥಾನಗಳಲ್ಲಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ
ಬಿಹಾರ, ರಾಜಸ್ಥಾನ, ಜಾರ್ಖಂಡ್, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಸಣ್ಣ ಬದಲಾವಣೆಗಳೊಂದಿಗೆ ಕೊನೆಯ ಸ್ಥಾನಗಳಲ್ಲಿವೆ ಎಂದು ವರದಿ ತಿಳಿಸಿದೆ. ಹಿಂದಿನ ಬಾರಿ ಕೊನೆಯ ಸ್ಥಾನದಲ್ಲಿದ್ದ ಉತ್ತರ ಪ್ರದೇಶವು ಈ ಬಾರಿ ಒಂದು ಸ್ಥಾನ ಮೇಲಕ್ಕೇರಿದ್ದರೆ, ಪಶ್ಚಿಮ ಬಂಗಾಳ ಕೊನೆಯ ಸ್ಥಾನದಲ್ಲಿದೆ.
ಇದನ್ನೂ ಓದಿ: ಬೆಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 5 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
ಇಂಡಿಯಾ ಜಸ್ಟಿಸ್ ರಿಪೊರ್ಟ್ ಅನ್ನು ಟಾಟಾ ಟ್ರಸ್ಟ್ಸ್ ಪ್ರಾರಂಭಿಸಿತ್ತು ಮತ್ತು ಪ್ರಪ್ರಥಮ ಶ್ರೇಯಾಂಕವನ್ನು 2019ನಲ್ಲಿ ಪ್ರಕಟಿಸಲಾಗಿತ್ತು. ಇದು ವರದಿಯ ನಾಲ್ಕನೇ ಆವೃತ್ತಿಯಾಗಿದ್ದು, ಸಾಮಾಜಿಕ ನ್ಯಾಯ ಕೇಂದ್ರ, ಕಾಮನ್ ಕಾಸ್, ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್, DAKSH, TISS–ಪ್ರಯಾಸ್, ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತುಐಜೆಆರ್ನ ದತ್ತಾಂಶ ಭಾಗೀದಾರನಾದ ಹೌ ಇಂಡಿಯಾ ಲಿವ್ಸ್ (How India Lives)ನ ಸಹಯೋಗದೊಂದಿಗೆ ವರದಿ ಸಿದ್ಧಪಡಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Tue, 15 April 25