ಆನೇಕಲ್, ಆಗಸ್ಟ್ 26: ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ನಟ ದರ್ಶನ್ಗೆ (Darshan) ರಾಜಾತಿಥ್ಯ ವಿಚಾರವಾಗಿ ಬಹಿರಂಗವಾಗುತ್ತಿದ್ದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಗೃಹಸಚಿವ ಡಾ.ಪರಮೇಶ್ವರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆದಿರೋದು ನಿಮಗೆ ತಿಳಿದಿದೆ ಎಂದು ಹೇಳಿದ್ದಾರೆ.
ತನಿಖೆ ಮಾಡಿ ಈಗಾಗಲೇ 7 ಸಿಬ್ಬಂದಿ ಅಮಾನತು ಮಾಡಲಾಗಿದೆ. ಜೈಲಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಅಧೀಕ್ಷಕರಾದ ಮಲ್ಲಿಕಾರ್ಜುನಸ್ವಾಮಿ, ಶೇಷಮೂರ್ತಿಯಿಂದ ಲೋಪವಾಗಿದೆ. ಈ ಇಬ್ಬರು ಜೈಲು ಅಧಿಕಾರಿಗಳನ್ನೂ ಸಹ ಅಮಾನತು ಮಾಡಿದ್ದೇವೆ. ಸಿಬ್ಬಂದಿ ಮಾತ್ರವಲ್ಲ ಅಧಿಕಾರಿಗಳನ್ನೂ ಸಹ ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ರಾಜಾತಿಥ್ಯ: 7 ಜನರ ಸಸ್ಪೆಂಡ್ ಆದೇಶ ಬೆನ್ನಲ್ಲೇ ವೈರಲ್ ಆಯ್ತು ಅದೊಂದು ಆದೇಶ ಪತ್ರ
ಸಿಗರೇಟ್, ಟೀ, ಕುರ್ಚಿ ಯಾರು ತಂದು ಕೊಟ್ಟಿದ್ದೆಂದು ತನಿಖೆ ಆಗುತ್ತಿದೆ. ಈ ಸಂಬಂಧ ಈಗಾಗಲೇ ಜೈಲಿನ ವಾರ್ಡರ್ ಸೇರಿದಂತೆ ಹಲವರ ವಿರುದ್ಧ ಮೂರು ಎಫ್ಐಆರ್ ದಾಖಲಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಎಲ್ಲಾ ಕಡೆ ಸಿಸಿಕ್ಯಾಮರಾ ಅಳವಡಿಸಲಾಗಿದೆ. ಇನ್ನೂ ಕೆಲವೆಡೆ ಸಿಸಿಕ್ಯಾಮರಾ ಹಾಕಲಾಗುವುದು. ಐಪಿಎಸ್ ಅಧಿಕಾರಿಗಳ ತಂಡ ರಚನೆ ಮಾಡಿ ತನಿಖೆ ಮಾಡುತ್ತೇವೆ ಎಂದಿದ್ದಾರೆ.
ಕೈದಿಗಳ ದೈನಂದಿನ ಚಟುವಟಿಕೆ ಮೇಲೆ ನಿಗಾವಹಿಸದಿರುವುದು. ಪ್ರಮುಖ ಪ್ರಕರಣಗಳ ಆರೋಪಿಗಳ ಭೇಟಿ ಮಾಡಿ ಹೋದ ನಂತರ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸದಿರುವುದು ಹೀಗೆ ಹಲವು ವಿಚಾರಗಳಿಗೆ ಜೈಲಿನ ಚೀಫ್ ಸೂಪರಿಂಟ್‌ಡೆಂಡ್, ಸೂಪರಿಡೆಂಟ್ ಹಾಗೂ ಮತ್ತಿತರ ಜೈಲು ಅಧಿಕಾರಿಗಳಿಗೆ ಪರಮೇಶ್ವರ್ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.
ನಿಯಮಗಳನ್ನು ಮೀರಿ ಆರೋಪಿಗಳಿಗೆ ಟೀ, ಸಿಗರೇಟ್ ಮತ್ತಿತರ ಸವಲತ್ತುಗಳನ್ನು ಪೂರೈಕೆಯಾಗಿದೆ. ದಿನದ 24 ಗಂಟೆಯೂ ವಾರ್ಡರ್‌ಗಳು ಕರ್ತವ್ಯದಲ್ಲಿರುತ್ತಾರೆ. ಘಟನೆ ಎಲ್ಲರ ಕಣ್ತಪ್ಪಿ ನಡೆಯಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಯಾವ ವಸ್ತುಗಳು ಪತ್ತೆಯಾಗಿಲ್ಲ. ಜೈಲಿನಲ್ಲಿ ಮೊಬೈಲ್ ಬಳಕೆಯಾಗುತ್ತಿದೆ ಎಂಬುದು ಕಂಡು ಬಂದಿದೆ. ಹೈ ಫ್ರಿಕ್ವೆನ್ಸಿ ಜಾಮರ್, ಅತ್ಯುತ್ತಮ ಗುಣಮಟ್ಟದ ಮೆಟಲ್ ಡಿಟೆಕ್ಟರ್ ಯಂತ್ರ, ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇಷ್ಟೆಲ್ಲ ಬಂದೋಬಸ್ತ್, ಪರಿಶೀಲನೆ ನಡುವೆಯೂ ಕಾರಾಗೃಹದೊಳಗೆ ಸಿಗರೇಟ್, ಮೊಬೈಲ್ ತಲುಪಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದರ್ಶನ್ ಸಲುವಾಗಿ ಜೈಲು ಅಧಿಕಾರಿಗಳ ಕರ್ತವ್ಯ ಲೋಪ; ಗೃಹ ಸಚಿವರಿಗೆ ಪ್ರಶ್ನೆಗಳ ಸುರಿಮಳೆ
ರಾಜ್ಯದ ಎಲ್ಲ ಬಂಧಿಖಾನೆಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಕಾರಾಗೃಹ ಮತ್ತು ಸುಧಾರಣಾ ಸೇವೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಸೂಚನೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.