ಬಿಹಾರ ಸಂಘಕ್ಕೆ ಬೆಂಗಳೂರಲ್ಲಿ ಜಾಗ: ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿಕೆಗೆ JDS ಕೆಂಡ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಹಾರ ಸಂಘಕ್ಕೆ ಬೆಂಗಳೂರಿನಲ್ಲಿ ನಿವೇಶನ ನೀಡುವ ಭರವಸೆ ನೀಡಿದ ಬೆನ್ನಲ್ಲೇ ಜಾತ್ಯಾತೀತ ಜನತಾದಳ (ಜೆಡಿಎಸ್) ಆಕ್ರೋಶ ವ್ಯಕ್ತಪಡಿಸಿದೆ. ಕನ್ನಡಿಗರ ಹಿತಾಸಕ್ತಿ ಕಡೆಗಣಿಸಿ, ಬಿಹಾರ ಚುನಾವಣೆಯಲ್ಲಿ ಮತ ಗಳಿಕೆಗಾಗಿ ವಲಸಿಗರಿಗೆ ಭೂಮಿ ನೀಡುವ ಮೂಲಕ ಕಾಂಗ್ರೆಸ್ 'ಓಲೈಕೆ ರಾಜಕಾರಣ' ಮಾಡುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ. ಈ ನಿರ್ಧಾರವು ಕನ್ನಡಿಗರ ತೆರಿಗೆ ಹಣದ ದುರ್ಬಳಕೆ ಎಂದು ಟೀಕಿಸಿದೆ.

ಬಿಹಾರ ಸಂಘಕ್ಕೆ ಬೆಂಗಳೂರಲ್ಲಿ ಜಾಗ: ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿಕೆಗೆ JDS ಕೆಂಡ
ಜೆಡಿಎಸ್​ ಪೋಸ್ಟ್​
Image Credit source: Google
Updated By: ಪ್ರಸನ್ನ ಹೆಗಡೆ

Updated on: Nov 03, 2025 | 1:54 PM

ಬೆಂಗಳೂರು, ನವೆಂಬರ್​ 03: ಬಿಹಾರ ಸಂಘಕ್ಕೆ ಬೆಂಗಳೂರಲ್ಲಿ ನಿವೇಶನ ನೀಡಲಾಗುವುದು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ​ ಹೇಳಿಕೆಗೆ ಜಾತ್ಯಾತೀತ ಜನತಾದಳ​ ಕಿಡಿ ಕಾರಿದೆ. ಈ ಬಗ್ಗೆ ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ JDS, ‘ನಮ್ಮ ತೆರಿಗೆ, ನಮ್ಮ ಹಕ್ಕು’ ಎಂದು ಗಂಟಲು ಹರಿದುಕೊಳ್ಳುವ ಕಾಂಗ್ರೆಸ್ಸಿಗರೇ ನಿಮ್ಮ ಡೋಂಗಿತನಕ್ಕೆ ಏನೆನ್ನಬೇಕು ? ಮತಕ್ಕೋಸ್ಕರ ಕನ್ನಡಿಗರ ಭೂಮಿಯನ್ನು ವಲಸಿಗರಿಗೆ ನೀಡಲು ಹೊರಟಿರುವ ನಿಮಗೆ ಧಿಕ್ಕಾರ ಎಂದು ಕಿಡಿ ಕಾರಿದೆ.

ಜೆಡಿಎಸ್​ ಪೋಸ್ಟ್​ನಲ್ಲಿ ಏನಿದೆ?

ಕನ್ನಡಿಗರ ಹಿತ ಕಾಪಾಡುವ ಬದಲು ಹೈಕಮಾಂಡ್‌ ಗುಲಾಮಗಿರಿಗಾಗಿ ಪರಭಾಷಿಕರನ್ನು ಮತಕ್ಕಾಗಿ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದೀರಿ. ನಮ್ಮ ರಾಜ್ಯದ ಹೆಚ್ಚು ಪಾಲು ಬಿಹಾರಕ್ಕೆ ಹೋಗುತ್ತೆ, ಅಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣ ಬಿಹಾರಿಗಳು ಕರ್ನಾಟಕಕ್ಕೆ ಬಂದು ಕನ್ನಡಿಗರ ಮಕ್ಕಳ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ಅವರು ಆರೋಪಿಸಿದ್ದರು.‌ ಆದರೆ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಲು ರಾಜ್ಯದಲ್ಲಿರುವ ಬಿಹಾರಿ ಮತದಾರರಿಗೆ ಬೆಂಗಳೂರಿನಲ್ಲಿ ನಿವೇಶನ, ಸೈಟು ಕೊಡುವುದಾಗಿ ಆಮಿಷ ಒಡ್ಡಲಾಗಿದೆ. ಇದು ಕಾಂಗ್ರೆಸ್​​ನ ಓಲೈಕೆ ರಾಜಕಾರಣ. ಕನ್ನಡಿಗರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್ಸಿನ ಜಾತ್ರೆ ನಡೆಯುತ್ತಿದ್ದು, ಯಾರದೋ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದ್ದಾರೆ ಎಂದು ಜೆಡಿಎಸ್​ ಆರೋಪಿಸಿದೆ.

ಇದನ್ನೂ ಓದಿ: ಬಿಹಾರ ಮುಖಂಡರು ಡಿಕೆಶಿ ಸಿಎಂ ಆಗಲಿ ಎಂದ ಬಗ್ಗೆ ಸಿದ್ದರಾಮಯ್ಯ ಏನಂದ್ರು?

ಬಿಹಾರ ಚುನಾವಣೆ ಹಿನ್ನಲೆ ಮತದಾನಕ್ಕೆ ರಾಜ್ಯದಿಂದ ತೆರಳಲಿರುವ ಅಲ್ಲಿನ ಮತದಾರರಿಗೆ ಮೂರು ದಿನಗಳ ಕಾಲ ರಜೆ ನೀಡುವಂತೆ ಸಂಸ್ಥೆ, ಗುತ್ತಿಗೆದಾರರು ಹಾಗೂ ಕ್ರೆಡಾಯ್​ ಸಂಸ್ಥೆಗೆ ಸೂಚಿಸುತ್ತೇನೆ. ಅಲ್ಲದೆ, ಬಿಹಾರದವರು ಇಲ್ಲದಿದ್ದರೆ ಬೆಂಗಳೂರಲ್ಲಿ ಅತ್ಯುತ್ತಮ ಕಟ್ಟಡಗಳನ್ನು ನಿರ್ಮಿಸಲು  ಆಗುತ್ತಿರಲಿಲ್ಲ. ಹೀಗಾಗಿ ಬಿಹಾರ ಸಂಘಕ್ಕೆ ಬೆಂಗಳೂರಲ್ಲಿ ನಿವೇಶನ ಕೊಡಲಾಗುವುದು ಎಂಬ ಆಶ್ವಾಸನೆಯನ್ನ ಡಿಸಿಎಂ ಡಿ.ಕೆ. ಶಿವಕುಮಾರ್​ ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.