ಮಂತ್ರಾಕ್ಷತೆ ಅಯೋಧ್ಯೆಯಿಂದ ಬಂದಿಲ್ಲ: ಈ ನನ್ಮಕ್ಕಳೇ ಅಕ್ಕಿಗೆ ಅರಿಶಿಣ ಮಿಕ್ಸ್ ಮಾಡಿ ಹಂಚಿದ್ದಾರೆ ಎಂದ ಸಚಿವ
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ವೆಂಕಟೇಶ್, ಮಂತ್ರಾಕ್ಷತೆ ಉತ್ತರ ಪ್ರದೇಶದ ಅಯೋಧ್ಯೆಯಿಂದ ಬಂದಿರುವುದಲ್ಲ. ಈ ನನ್ಮಕ್ಕಳು ಬಿಜೆಪಿಗರು ಅನ್ನಭಾಗ್ಯದ ಅಕ್ಕಿಗೆ ಅರಿಶಿಣ ಮಿಕ್ಸ್ ಮಾಡಿ ಹಂಚಿದ್ದಾರೆ ಎಂದು ಕಿಡಿಕಾರಿದ್ದಾರೆ. ಭಾವನಾತ್ಮಕ ವಿಚಾರ ಇಟ್ಟುಕೊಂಡೇ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದಿದ್ದಾರೆ.
ಚಾಮರಾಜನಗರ, ಮಾರ್ಚ್ 28: ಮಂತ್ರಾಕ್ಷತೆ ಉತ್ತರ ಪ್ರದೇಶದ ಅಯೋಧ್ಯೆಯಿಂದ ಬಂದಿರುವುದಲ್ಲ. ಈ ನನ್ಮಕ್ಕಳು ಬಿಜೆಪಿಗರು ಅನ್ನಭಾಗ್ಯದ ಅಕ್ಕಿಗೆ ಅರಿಶಿಣ ಮಿಕ್ಸ್ ಮಾಡಿ ಹಂಚಿದ್ದಾರೆ ಎಂದು ಸಚಿವ ಕೆ.ವೆಂಕಟೇಶ್ (K Venkatesh) ತೀವ್ರ ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಹನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾವನಾತ್ಮಕ ವಿಚಾರ ಇಟ್ಟುಕೊಂಡೇ ಬಿಜೆಪಿ ರಾಜಕೀಯ ಮಾಡುತ್ತಿದೆ. 400 ಸ್ಥಾನ ಗೆಲ್ಲುವ ಹಿಂದಿನ ಅಜೆಂಡಾವೇ ಸಂವಿಧಾನ ಬದಲಾವಣೆ. ಅಯೋಧ್ಯೆಯಿಂದ ಮಂತ್ರಾಕ್ಷತೆ ಬಂದಿದ್ದು ಅಂತಾ ಸುಳ್ಳು ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ಮಾತೆತ್ತಿದರೆ ರಾಮ ಮಂದಿರ ಅಂತಾ ಹೇಳುತ್ತಾರೆ. ಯಾಕೆ ಅಯೋಧ್ಯೆಯಲ್ಲಿ ಮಾತ್ರ ರಾಮ ಮಂದಿರ ಇರೋದಾ? ಎಲ್ಲಾ ಊರಿನಲ್ಲೂ ರಾಮಮಂದಿರ ಇದೆ, ನಮ್ಮ ಊರಿನಲ್ಲೂ ಇದೆ ಎಂದಿದ್ದಾರೆ. ಈಗ 400 ಸೀಟು ಗೆದ್ದರೆ ಮುಂದೆ ಚುನಾವಣೆನೇ ಬೇಡ. ಜನ ನಮಗೆ ಓಟ್ ಹಾಕುತ್ತಾರೆ ಅಂತ ಹೇಳುತ್ತಾರೆ. ಸಂವಿಧಾನ ಬದಲಾವಣೆ ಬಗ್ಗೆ ಹೇಳಿಕೆ ನೀಡಿದವರ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸುನೀಲ್ ಬೋಸ್ ಒರಿಜಿನಲ್ ಕಾಂಗ್ರೆಸ್ ಕಾರ್ಯಕರ್ತ: ಸಚಿವ ಮಹದೇವಪ್ಪ
ಸಚಿವ ಮಹದೇವಪ್ಪ ಮಾತನಾಡಿ, ನನ್ನ ಪುತ್ರ ಎಂಬ ಕಾರಣಕ್ಕೆ ಸುನೀಲ್ ಬೋಸ್‌ಗೆ ಟಿಕೆಟ್ ಸಿಕ್ಕಿದ್ದಲ್ಲ. ಸುನೀಲ್ ಬೋಸ್ ಒರಿಜಿನಲ್ ಕಾಂಗ್ರೆಸ್ ಕಾರ್ಯಕರ್ತ. ಹಾಗಾಗಿ ಅವರಿಗೆ ಟಿಕೆಟ್ ಸಿಕ್ಕಿದೆ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸುನೀಲ್ ಬೋಸ್ ದುಡಿದಿದ್ದಾನೆ. ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದಾನೆ. ಇದನ್ನು ಗಮನಿಸಿ ಪಕ್ಷ ಟಿಕೆಟ್ ನೀಡಿದೆ ಎಂದು ಹೇಳಿದರು.
ಇದನ್ನೂ ಓದಿ: ಚಾಮರಾಜನಗರ ಕ್ಷೇತ್ರದ ಟಿಕೆಟ್ ಫೈನಲ್: ಮತ್ತೋರ್ವ ಸಚಿವರ ಪುತ್ರನಿಗೆ ಕಾಂಗ್ರೆಸ್ ಮಣೆ
ಸಂವಿಧಾನದ ಬದಲಾವಣೆ ವಿಚಾರ ಪ್ರಸ್ತಾಪಿಸಿದ ಸಚಿವ ಮಹದೇವಪ್ಪ, ಜನರ ಹಕ್ಕು ರಕ್ಷಣೆ ಮಾಡುವ ಸಂವಿಧಾನ ಇರಬೇಕೋ ಬೇಡ್ವೋ? ಪ್ರಜಾಪ್ರಭುತ್ವ ಮುಂದುವರಿಬೇಕಾ ಅಥವಾ ಸರ್ವಾಧಿಕಾರ ಆಡಳಿತ ಬೇಕಾ ನಿರ್ಧರಿಸಿ ಎಂದಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಕ್ಷೇತ್ರದ ಮೂಲಕ ಹೆಚ್ಸಿ ಮಹದೇವಪ್ಪರನ್ನು ಲೋಕಸಭೆಗೆ ಕಳುಹಿಸಿ ಯತೀಂದ್ರಗೆ ಸಚಿವ ಸ್ಥಾನ ನೀಡುವ ಪ್ಲಾನ್
ಚಾಮರಾಜನಗರದ ನಾಲ್ಕು ವಿಧಾನಸಭಾ ಕ್ಷೇತ್ರದ ಪೈಕಿ 3ರಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿತ್ತು. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಸೋಲಾಗಿತ್ತು. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಮಂಜುನಾಥ್ ಜಯಶೀಲರಾಗಿದ್ರು. ಈ ಹಿನ್ನಲೆ ಮೊದಲು ಹನೂರು ವಿಧಾನಸಭಾ ಕ್ಷೇತ್ರದಲ್ಲೇ ಸಭೆ ಆಯೋಜನೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.