ಸಾವಿರ ಅಡಿ ಜಾಗದ ವಿಚಾರಕ್ಕೆ ದುಷ್ಕರ್ಮಿಗಳಿಂದ ವ್ಯಕ್ತಿಯ ಬರ್ಬರ ಹತ್ಯೆ: ಮರಗಮ್ಮದೇವಿ ಉತ್ಸವದಂದೇ ಹರಿದ ನೆತ್ತರು
ಐದು ದಿನದ ಹಿಂದಷ್ಟೇ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಇದು ಕುಟುಂಬದ ಆನಂದವನ್ನು ಹೆಚ್ಚಿಸಿತ್ತು. ಹೀಗಾಗಿ ತಾಂಡಾದಲ್ಲಿ ಅದ್ದೂರಿಯಾಗಿ ಮರಗಮ್ಮ ದೇವಿಯ ಉತ್ಸವ ಮಾಡಿದ್ದರು. ಆದರೆ ರಾತ್ರಿ ತುಂಡು ಜಾಗದ ವಿಚಾರಕ್ಕೆ ದುಷ್ಕರ್ಮಿಗಳು ವ್ಯಕ್ತಿಯ ಬರ್ಬರ ಕೊಲೆ ಮಾಡಿದ್ದಾರೆ.
ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಅರಣಕಲ್ ಕಿಂಡಿ ತಾಂಡಾದಲ್ಲಿ ನವೆಂಬರ್ 17ರ ರಾತ್ರಿ ಯುವಕನ ಬರ್ಬರ ಕೊಲೆಯಾಗಿದೆ. ಆನಂದ್ ಚೌಹಾಣ್(25) ಕೊಲೆಯಾದ ಯುವಕ. ತಾಂಡಾದ ಮರಗಮ್ಮದೇವಿ ಉತ್ಸವನ್ನು ಹಮ್ಮಿಕೊಳ್ಳಲಾಗಿತ್ತು. ಉತ್ಸವದ ನಂತರ ಇಡೀ ತಾಂಡಾದ ಜನರು ಸಂಭ್ರಮದಲ್ಲಿದ್ದರು. ಒಂಬತ್ತು ಗಂಟೆ ಸಮಯದಲ್ಲಿ ಊಟ ಮಾಡಿ ಮನೆಯಿಂದ ಹೊರಹೋಗಿದ್ದ ಆನಂದ್, ಮನೆಯಿಂದ ಹೊರಬರುವುದನ್ನು ಕಾಯುತ್ತಿದ್ದ ಅದೇ ತಾಂಡಾದ ಕೆಲವರು ಆತನನ್ನು ಹೊರವಲಯಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಚಾಕುವಿನಿಂದ ಇರಿದು, ನಂತರ ಕೈಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.
ಆನಂದ್ ಮೇಲೆ ಹಲ್ಲೆ ಮಾಡುವುದನ್ನು ನೋಡಿ, ಆತನ ಸಹೋದರ ಆನಂದನ್ನ ರಕ್ಷಣೆಗೆ ಮುಂದಾಗಿದ್ದಾರೆ. ಆತನ ಮೇಲೂ ಕೂಡಾ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಕುಟುಂಬದವರು ಆನಂದನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವ ಮುನ್ನವೇ ಆನಂದ್ ಬಾರದ ಲೋಕಕ್ಕೆ ಹೋಗಿದ್ದಾನೆ. ಇನ್ನು ಆನಂದ್ ಮತ್ತು ಆತನ ಕುಟುಂಬದವರು ಈ ಮೊದಲು ಮಹಾರಾಷ್ಟ್ರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಆನಂದ ಪತ್ನಿ ಗರ್ಭಿಣಿ ಆದ್ದರಿಂದ ಹೆರಿಗೆಗಾಗಿ ಗಂಡ ಮತ್ತು ಹೆಂಡತಿ ಇಬ್ಬರು ಮರಳಿ ತಾಂಡಾಕ್ಕೆ ಬಂದಿದ್ದಾರೆ. ಆನಂದ್ ತಾಂಡಾದಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದ. ಆನಂದನಿಗೆ ಇಬ್ಬರು ಪುತ್ರಿಯರಿದ್ದು, ಐದು ದಿನದ ಹಿಂದಷ್ಟೇ ಆನಂದ್ ಪತ್ನಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಇದು ಆನಂದನ ಆನಂದವನ್ನು ಹೆಚ್ಚಿಸಿತ್ತು.ಆದರೆ ಅದು ಬಹಳ ದಿನ ಉಳಿಯಲಿಲ್ಲ. ದುಷ್ಕರ್ಮಿಗಳು ಆನಂದನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಇನ್ನು ಆನಂದ್ನ ಕೊಲೆಗೆ ಕಾರಣವಾಗಿದ್ದು, ತಾಂಡಾದಲ್ಲಿರುವ ಸಾವಿರ ಅಡಿ ಜಾಗದ ವಿಚಾರ. ಆನಂದ್ಕುಟುಂಬದವರು ತಾಂಡಾದಲ್ಲಿಯೇ ಪುಟ್ಟ ಮನೆಯೊಂದನ್ನು ಕಟ್ಟಿಕೊಂಡಿದ್ದಾರೆ. ಅದರ ಪಕ್ಕದಲ್ಲಿ ಸ್ವಲ್ಪ ಖಾಲಿ ಜಾಗವಿದೆ. ಆದರೆ ಈ ಜಾಗ ತಮ್ಮದು ಅಂತ ಇದೇ ತಾಂಡಾದ ನಿವಾಸಿಗಳಾದ ಭೀಮಸಿಂಗ್, ನಿಲೇಶ್, ಕಬೀರ್ ಜಾದವ್ ಸೇರಿದಂತೆ ಇನ್ನೊಂದು ಕುಟುಂಬದವರು ಆನಂದ್ ಕುಟುಂಬದ ಜೊತೆ ವೈಷಮ್ಯ ಹೊಂದಿದ್ದರು ಎನ್ನಲಾಗಿದೆ.
ಈ ಬಗ್ಗೆ ಆನಂದ್ ಕುಟುಂಬ ಮತ್ತು ಜಾದವ್ ಕುಟುಂಬದ ನಡುವೆ ಆಗಾಗ ಜಗಳವು ಆಗುತ್ತಿದ್ದು, ಪೊಲೀಸ್ ಠಾಣೆಯ ಮೆಟ್ಟಿಲು ಕೂಡಾ ಹತ್ತಿ ಬಂದಿದ್ದರು. ಆದರೆ ತಾಂಡಾದ ಹಿರಿಯರು, ತಾಂಡಾದ ಮರಗಮ್ಮ ದೇವಿ ಉತ್ಸವದ ನಂತರ ಸಮಸ್ಯೆ ಬಗೆಹರಿಸುವ ಮಾತುಗಳನ್ನು ಹೇಳಿದ್ದರಂತೆ. ಆದರೆ ಮರಗಮ್ಮ ದೇವಿ ಉತ್ಸವ ನಡೆದ ದಿನವೇ, ರಾತ್ರಿ ಆನಂದ್ನನ್ನು ಜಾದವ್ ಕುಟುಂಬದ ಹದಿಮೂರಕ್ಕೂ ಹೆಚ್ಚು ಜನರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಆನಂದ್ ಚೌಹಾಣ್ ಕುಟುಂಬದವರು ಆರೋಪಿಸಿದ್ದಾರೆ.
ಇದನ್ನೂ ಓದಿ:ಅನಿವಾರ್ಯತೆ ಕಲಿಸದ ಬದುಕಿನ ಪಾಠ: ಕಲಬುರಗಿ ಯುವಕನಿಗೆ ಕಾಲುಗಳೇ ಕೈಗಳು, ರಾಹುಲ್ನಿಂದ ಬಂತು ಅಪರೂಪದ ಗಿಫ್ಟ್
ಸದ್ಯ ಕಾಳಗಿ ಪೊಲೀಸ್ ಠಾಣೆಯಲ್ಲಿ ತಾಂಡಾದ ಕಬೀರ್ ಜಾದವ್ ಸೇರಿದಂತೆ ಹದಿಮೂರು ಜನರ ವಿರುದ್ದ ದೂರು ದಾಖಲಾಗಿದೆ. ದೂರು ದಾಖಲಾದ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸೌಹಾರ್ದಯುತವಾಗಿ ಜಗಳ ಬಗೆಹರಿಸಿಕೊಂಡಿದ್ದರೆ, ಒಂದು ಜೀವ ಉಳಿಯುತ್ತಿತ್ತು.ಆದರೆ ಸಣ್ಣ ಆಸ್ತಿಯ ಜಗಳವನ್ನು ವಿಕೋಪಕ್ಕೆ ಮಾಡಿದ ದುಷ್ಟರು, ಕೊಲೆಯನ್ನೇ ಮಾಡಿದ್ದಾರೆ. ಏನು ಅರಿಯದ ಮೂರು ಕಂದಮ್ಮಗಳು, ತಂದೆಯನ್ನು ಕಳೆದುಕೊಂಡು ಅನಾಥವಾಗಿವೆ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ