ಎಂಆರ್‌ಎಂಸಿ ಮೆಡಿಕಲ್ ಕಾಲೇಜ್ ಶಿಷ್ಯ ವೇತನ ಹಗರಣ: ಕಾಂಗ್ರೆಸ್ ಮುಖಂಡನ 5.87 ಕೋಟಿ ಆಸ್ತಿ ಜಪ್ತಿ
ಕಲಬುರಗಿಯ ಎಂಆರ್‌ಎಂಸಿ ವೈದ್ಯಕೀಯ ಕಾಲೇಜಿನಲ್ಲಿ 2018 ರಿಂದ 2024 ರವರೆಗೆ ನಡೆದ 82 ಕೋಟಿ ರೂ. ವಿದ್ಯಾರ್ಥಿವೇತನ ಹಗರಣದಲ್ಲಿ, ಹೆಚ್‌ಕೆಇ ಸೊಸೈಟಿಯ ಮಾಜಿ ಅಧ್ಯಕ್ಷ ಭೀಮಾಶಂಕರ್ ಬಲಿಗುಂದಿಯವರ 5.87 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಬಲಿಗುಂದಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಕಲಬುರಗಿ, ಜುಲೈ 23: ಎಂಆರ್‌ಎಂಸಿ ಮೆಡಿಕಲ್ ಕಾಲೇಜ್ ಶಿಷ್ಯ ವೇತನ ಹಗರಣ (MRMC stipend scam) ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌ಕೆಇ ಸೊಸೈಟಿಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಭೀಮಾಶಂಕರ್ ಬಲಿಗುಂದಿಯ (Bhimashankar Bilgundi) 5.87 ಕೋಟಿ ರೂ ಆಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ. ಕಲಬುರಗಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಲಬುಗರಿಯ ಹೆಚ್‌ಕೆಇ ಶಿಕ್ಷಣ ಸಂಸ್ಥೆ ಅಂದರೆ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿ ಅಡಿಯಲ್ಲಿ ಬರುವ ಎಂಆರ್‌ಎಂಸಿ ಮೆಡಿಕಲ್ ಕಾಲೇಜು ಶಿಷ್ಯವೇತನ ಹಗರಣ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲಿ ಓದುತ್ತಿರುವ ಎಂಬಿಬಿಎಸ್ ವಿದ್ಯಾರ್ಥಿಗಳ ಶಿಷ್ಯ ವೇತನಕ್ಕೆ ಸಂಸ್ಥೆಯ ಅಧ್ಯಕ್ಷರು ಕತ್ತರಿ ಹಾಕಿದ್ದರು. ಅಂದರೆ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಶಿಷ್ಯವೇತನನ್ನೇ ಸ್ವಾಹ ಮಾಡಿದ್ದರು. ಈ ಬಗ್ಗೆ ಟಿವಿ9 ಸಾಕ್ಷ್ಯ ಸಮೇತ ವರದಿ ಮಾಡಿತ್ತು.
ಇದನ್ನೂ ಓದಿ: ಕಲಬುರಗಿ ಮೆಡಿಕಲ್ ಕಾಲೇಜಿನಲ್ಲಿ ಕೋಟ್ಯಂತರ ಶಿಷ್ಯವೇತನ ಗೋಲ್ ಮಾಲ್, ಆಡಿಯೋದಲ್ಲಿ ಆಡಳಿತ ಮಂಡಳಿ ಕಳ್ಳಾಟ ಬಯಲು
ಸುಮಾರು 400 ಜನ ಎಂಬಿಬಿಎಸ್ ವಿಧ್ಯಾರ್ಥಿಗಳ ಶಿಷ್ಯವೇತನವನ್ನೆ ಕಾಲೇಜು ಪ್ರಿನ್ಸಿಪಾಲ್, ಅಧ್ಯಕ್ಷರು ಸೇರಿ ಗುಳಂ ಮಾಡಿದ್ದರು. ಬರೋಬ್ಬರಿ 82 ಕೋಟಿ ರೂ ಹಣವನ್ನ ತಮ್ಮ ಜೇಬಿಗಳಿಸಿದ್ದರು. ಈ ಬಗ್ಗೆ ಯಾವಾಗ ಟಿರ್ವಿ ವರದಿ ಬಿತ್ತರವಾಯ್ತೋ ಕಳೆದ ಮಾಚ್೯ನಲ್ಲಿ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಹೆಚ್ ಕೆಇ ಸಂಸ್ಥೆಯ ಆಗಿನ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಂ. ಪಾಟೀಲ, ಕಾಲೇಜಿನ ಅಕೌಂಟೆಂಟ್ ಸುಭಾಷ ಜಗನ್ನಾಥ ಮತ್ತು ಕೆನರಾ ಬ್ಯಾಂಕ್ ಎಂಆರ್‌ಎಂಸಿ ಶಾಖೆಯ ವ್ಯವಸ್ಥಾಪಕರ ವಿರುದ್ಧ ಮನೆ ಮೇಲೆ ದಾಳಿ ಮಾಡಿ ದಾಖಲಾತಿಗಳನ್ನ ಪರೀಶಿಲನೆ ಮಾಡಿತ್ತು. ಸದ್ಯ ಆ ಎಲ್ಲಾ ದಾಖಲೆಗಳ ಮಾಹಿತಿ ಆಧಾರ ಮೇಲೆ 5.87 ಕೋಟಿ ರೂ ಮೌಲ್ಯದ ಆಸ್ತಿಯನ್ನ ಜಪ್ತಿ ಮಾಡಿದೆ.
ಈ ಆಸ್ತಿ ಖರೀದಿಯ ಎಲ್ಲವೂ ನಗದು ರೂಪದಲ್ಲಾಗಿದ್ದು ಮತ್ತು ಹಗರಣ ಬೆಳಕಿಗೆ ಬಂದ ಅವಧಿಯಲ್ಲೆ ಖರೀದಿ ಆಗಿವೆ. ಹಾಗಾಗಿ ಆಸ್ತಿ ಖರೀದಿ ಮಾಡಿರುವ ಹಣಕ್ಕೆ ಯಾವುದೇ ದಾಖಲಾತಿಗಳಿಲ್ಲ. ಹೀಗಾಗಿ ಇದು ಅಕ್ರಮ ಹಣದಿಂದಲೇ ಆಸ್ತಿ ಖರೀದಿಯಾಗಿದೆ ಎನ್ನೋ ಅನುಮಾನದ ಮೇಲೆ ಸದ್ಯ ಇಡಿ ಖರೀದಿಯಾಗಿರುವ 5.87 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಇದು ಟಿವಿ9 ವರದಿಯಿಂದಲೇ ದೊಡ್ಡ ಮಟ್ಟದ ಇಂಪ್ಯಾಕ್ಟ್ ಆಗಿದೆ ಎನ್ನುತ್ತಿದ್ದಾರೆ.
ಇನ್ನು ಎಂಆರ್‌ಎಂಸಿ ಮೆಡಿಕಲ್ ಕಾಲೇಜ್ ಶಿಷ್ಯ ವೇತನ ಹಗರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹೆಚ್‌ಕೆಇ ಸೊಸೈಟಿಯ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡನ 5.87 ಕೋಟಿ ರೂ ಆಸ್ತಿ ಜಪ್ತಿ ಮಾಡಿ ಮೊದಲ ಹಂತದ ತನಿಖೆಯನ್ನ ಜಾರಿ ನಿರ್ದೇಶನಾಲಯ ಮಾಡಿದೆ. ಈ ಭೀಮಾಶಂಕರ್ ಬಿಲಗುಂದಿ ಅಧ್ಯಕ್ಷ ಅವಧಿಯಲ್ಲಿ 2018 ರಿಂದ 2024 ರ ವರೆಗಿನ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳ ಶಿಷ್ಯ ವೇತನ ನೀಡಿರಲಿಲ್ಲ. ವಿದ್ಯಾರ್ಥಿಗಳ ಅಕೌಂಟ್ಗೆ ಬಂದ ಹಣವನ್ನ ಚೆಕ್ ಮೂಲಕ ವಾಪಸ್ ತೆಗೆದುಕೊಳ್ಳುತ್ತಿದ್ದರು. ಅಂದಾಜು 82 ಕೋಟಿ ರೂಪಾಯಿ ಹಗರಣ ನಡೆದಿತ್ತು. ಸದ್ಯ ಕೇವಲ ಐದು ಕೋಟಿ ಮೌಲ್ಯ ಆಸ್ತಿ ಸಿಕ್ಕಿದೆ. ಉಳಿದ ಹಣ ಯಾರ ಯಾರ ಪಾಲಾಗಿದೆ ಎನ್ನೋ ಬಗ್ಗೆಯೂ ಇ.ಡಿ ಅಧಿಕಾರಿಗಳು ತನಿಖೆಗೆ ಮುಂದಾಗಬೇಕಿದೆ.
ಇದನ್ನೂ ಓದಿ: ಶುಶ್ರುತಿ ಸಹಕಾರ ಸೌಹಾರ್ದ ಬ್ಯಾಂಕ್ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಇಡಿ ಎಂಟ್ರಿ: ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಯಲಿಗೆ
ಇನ್ನು ಕಳೆದ ಮೂರ್ನಾಲ್ಕು ತಿಂಗಳ ದಾಖಲಾತಿಗಳ ಪರೀಶಿಲನೆ ಬಳಿಕ ಇ.ಡಿ ಮಹತ್ವದ ಹೆಜ್ಜೆ ಇಟ್ಟಿದೆ. ಅಷ್ಟೇ ಏಕೆ ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳ ಹಣವನ್ನ ವಸೂಲಿ ಮಾಡುವ ಕೆಲಸಕ್ಕೆ ಕೈ ಹಾಕಬೇಕಿದೆ. ಏನೇ ಇರಲಿ ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎನ್ನೋ ಗಾದೆ ಮಾತಿನಂತೆ ಸದ್ಯ ಅಕ್ರಮವಾಗಿ ಮಾಡಿದ್ದ ಆಸ್ತಿ ಜಪ್ತಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:50 am, Wed, 23 July 25







