ಗಾಣಗಾಪುರದ ಶ್ರೀ ದತ್ತಾತ್ರೇಯನ ದರ್ಶನಕ್ಕೆ ತೆರಳುತ್ತಿದ್ದ ನಾಲ್ವರು ಅಪಘಾತದಲ್ಲಿ ಸಾವು
ಮಹಿಂದ್ರಾ ಪಿಕಪ್ ಗೂಡ್ಸ್ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟಿರುವ ಘಟನೆ ಕಮಲಾಪುರ ತಾಲೂಕಿನ ಮರಗುತ್ತಿ ಕ್ರಾಸ್ ಬಳಿ ನಡೆದಿದೆ. ನಾಲ್ವರೂ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಕಲಬುರಗಿ, ನವೆಂಬರ್ 09: ಕಮಲಾಪುರ (Kamlapur) ತಾಲೂಕಿನ ಮರಗುತ್ತಿ ಕ್ರಾಸ್ ಬಳಿ ಮಹಿಂದ್ರಾ ಪಿಕಪ್ ಗೂಡ್ಸ್ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ. ಹೈದರಾಬಾದ್ ಮೂಲದ ಭಾರ್ಗವ ಕೃಷ್ಣ (55), ಸಂಗೀತಾ (45), ಉತ್ತಮ್ ರಾಘವನ್ (28) ಮತ್ತು ಕಾರು ಚಾಲಕ ಮೃತ ದುರ್ದೈವಿಗಳು. ಗೂಡ್ಸ್ ವಾಹನ ಚಾಲಕನಿಗೂ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರೂ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಕಮಲಾಪುರ ಸಿಪಿಐ ಭೇಟಿ ನೀಡಿ ಪರೀಶಿಲನೆ ನಡೆಸಿದರು.
ಪಾಗಲ್ ಪ್ರೇಮಿ ಆತ್ಮಹತ್ಯೆ
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆ ಶಾಮಿಯಾನ ಅಂಗಡಿಯಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಡದಿ ಬಳಿಯ ಹಂಪಾಪುರ ಗ್ರಾಮ ಸಂತೋಷ (20) ಮೃತ ದುರ್ದೈವಿ. ಸಂತೋಷ ತಾನು ಪ್ರೀತಿಸುತ್ತಿದ್ದ ಯುವತಿಯ ಮನೆ ಬಳಿ ಹುಚ್ಚಾಟವಾಡಿದ್ದಾನೆ. ಆಗ, ಯುವತಿ ಪೋಷಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವಿಚಾರ ತಿಳಿದ ಸಂತೋಷ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಇದನ್ನೂ ಓದಿ: ರಾಯಚೂರು: 10 ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ 240 ಸಾವು, ಬೈಕ್ ಸವಾರರಿಗೆ ಇನ್ನಷ್ಟು ಕಠಿಣ ರೂಲ್ಸ್
ನಂತರ ತಾನು ಕೆಲಸ ಮಾಡುತ್ತಿದ್ದ ಶಾಮಿಯಾನ ಅಂಗಡಿಯ ಶೌಚಾಲಯದಲ್ಲಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿಬ್ಬಂದಿ ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸಂತೋಷ ಬಳ್ಳಾರಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನು ಎಂದು ಪೊಲೀಸರ ತನಿಖೆಯಲ್ಲ ತಿಳಿದುಬಂದಿದೆ. ದಾಬಸ್ ಪೇಟೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಟ್ಟು ಕರಕಲಾದ ಹತ್ತಿ
ಯಾದಗಿರಿ ತಾಲೂಕಿನ ಮುಂಡರಗಿ ಬಳಿಯ ಕೈಗಾರಿಕಾ ಪ್ರದೇಶದಲ್ಲಿನ ಕಾಟನ್ ಮಿಲ್ನಲ್ಲಿ ಅಗ್ನಿ ಅವಘಡ ಸಂಭವಿಸಿ, ಲಕ್ಷಾಂತರ ರೂ. ಮೌಲ್ಯದ ಹತ್ತಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ರೈತರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ