ಕಲಬುರಗಿ: ಕಿದ್ವಾಯಿ ಆಸ್ಪತ್ರೆಯಲ್ಲಿನ ಎಸಿ ಕಳ್ಳತನ: ವೈದ್ಯರ ವಿರುದ್ದವೇ ಗಂಭೀರ ಆರೋಪ
ಕಲಬುರಗಿಯ ಬಡ ಜನರಿಗಾಗಿ ಇರುವ ಕಿದ್ವಾಯಿ ಆಸ್ಪತ್ರೆಯಲ್ಲಿ ಲಕ್ಷಾಂತರ ಮೌಲ್ಯದ ಎ.ಸಿ ಕಳ್ಳತನವಾಗಿರುವ ಆರೋಪ ಕೇಳಿಬಂದಿದೆ. ಆಸ್ಪತ್ರೆಯ ವೈದ್ಯರೇ ಎ.ಸಿಗಳನ್ನು ತಮ್ಮ ನಿವಾಸಕ್ಕೆ ಬಳಸಿದ್ದಾರೆ. ಅಷ್ಟೇ ಅಲ್ಲದೆ ಔಷಧಿಗಳನ್ನೂ ಕದ್ದೊಯ್ದಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಕುರಿತು ಬಿಜೆಪಿ ಸಮಗ್ರ ತನಿಖೆಗೆ ಆಗ್ರಹಿಸಿದೆ.

ಕಲಬುರಗಿ, ಡಿಸೆಂಬರ್ 22: ಕಿದ್ವಾಯಿ (Kidwai) ಈ ಭಾಗದ ಬಡ ಜನರ ಉಪಯೋಗಕ್ಕಿರುವ ಕ್ಯಾನ್ಸರ್ ಆಸ್ಪತ್ರೆ. ಆದರೆ ಆಸ್ಪತ್ರೆಯಲ್ಲಿನ ಕೆಲ ಬೆಲೆ ಬಾಳುವ ವಸ್ತುಗಳನ್ನು ಅಲ್ಲಿನ ಕೆಲ ವೈದ್ಯರೇ ಕಳ್ಳತನ (theft) ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಲಕ್ಷಾಂತರ ಮೌಲ್ಯದ ಎಸಿಗಳನ್ನ ತಮ್ಮ ನಿವಾಸಕ್ಕೆ ಬಳಿಸಿಕೊಂಡಿದ್ದಾರಂತೆ. ವೈದ್ಯಕೀಯ ಶಿಕ್ಷಣ ಸಚಿವರ ತವರಲ್ಲೇ ಗೋಲ್ಮಾಲ್ ನಡೆದಿರುವುದು ಕೇಸರಿ ಪಡೆ ತನಿಖೆಗೆ ಆಗ್ರಹಿಸಿದೆ.
ಕಲಬುರಗಿಯ ಕಿದ್ವಾಯಿ ಆಸ್ಪತ್ರೆಯ ಮುಖ್ಯಸ್ಥರ ವಿರುದ್ದವೇ ಗಂಭೀರ ಆರೋಪ ಕೇಳಿಬಂದಿದೆ. ಏಕೆಂದರೆ ಆಸ್ಪತ್ರೆಯಲ್ಲಿ ಲಕ್ಷಾಂತರ ಮೌಲ್ಯದ ಎ.ಸಿಗಳನ್ನು ತಮ್ಮ ಸ್ವಂತ ಮನೆಗೆ ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಳೆದ ತಿಂಗಳು ಆಸ್ಪತ್ರೆಯಲ್ಲಿನ 24 ಎ.ಸಿ ಯೂನಿಟ್ಗಳನ್ನ ಬೇರೆಡೆಗೆ ಸಾಗಿಸಲಾಗಿತ್ತಂತೆ. ಈ ಬಗ್ಗೆ ಅಲ್ಲಿನ ಸಿಬ್ಬಂದಿಗೆ ಗೊತ್ತಾದ್ರು ಬೇರೆಯದ್ದೆ ಕಥೆ ಹೇಳಿದ್ದರಂತೆ. ಯಾವಾಗ ಈ ವಿಚಾರ ಹೊರಗಡೆ ಲೀಕ್ ಆಯಿತೋ ಆವಾಗ ಬೆಂಗಳೂರಿನ ಮುಖ್ಯ ಕಚೇರಿಯವರೆಗೂ ವಿಷಯ ತಲುಪಿದೆ. ಅಲ್ಲಿಂದ ತಕ್ಷಣವೇ ಎಸಿ ಕಳ್ಳತನವಾದ ಬಗ್ಗೆ ದೂರು ದಾಖಲಿಸುವುದಕ್ಕೆ ಸೂಚಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಮಷಿನ್ ಕದ್ದೊಯ್ದು ಮನೆಯಲ್ಲಿಟ್ಟ ಸಿಬ್ಬಂದಿ: ಭ್ರೂಣ ಲಿಂಗ ಪತ್ತೆ ಶಂಕೆ!
ಕಳೆದ ವಾರ ಅಂದರೆ ಡಿಸೆಂಬರ್ 12ರಂದು ಕಲಬುರಗಿಯ ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ ಅಲ್ಲಿಯೂ ಆಸ್ಪತ್ರೆ ಪ್ರಭಾರ ವೈದ್ಯಾಧಿಕಾರಿ ಡಾ.ಗುರುರಾಜ ದೇಶಪಾಂಡೆ ಕೇವಲ ಎರಡು ಎಸಿಗಳ ಬಿಡಿ ಭಾಗಗಳಷ್ಟೇ ಕಳುವಾಗಿದೆ ಎಂದು ದೂರು ನೀಡಿದ್ದಾರೆ. ಅದೇ ವಿಷಯ ಸದ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಏಕೆಂದರೆ ಯಾವಾಗ ಎಸಿ ಕಳ್ಳತನದ ಬಗ್ಗೆ ಒತ್ತಡ ಹೆಚ್ಚಾಯಿತೋ ಆಗ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ದ ಎಸಿಗಳನ್ನ ವಾಪಸ್ ತಂದಿಟ್ಟಿದ್ದಾರಂತೆ. ಹೀಗಾಗಿ ಲಕ್ಷಾಂತರ ರೂ ಎಸಿ ಯೂನಿಟ್ಗಳನ್ನ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದು ಯಾರು, ಇದಕ್ಕೆ ಆಸ್ಪತ್ರೆಯ ಮುಖ್ಯಸ್ಥರೇ ಸಹಕರಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಬಿಜೆಪಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಆಗ್ರಹಿಸಿದ್ದಾರೆ.
ಎಸಿ ಕಳ್ಳತನ ವಿಚಾರದಲ್ಲಿ ದೊಡ್ಡ ಗೋಲ್ಮಾಲ್ ನಡೆದಿದೆ. ಆಸ್ಪತ್ರೆಯ ಸಿಸಿಟಿವಿಯಲ್ಲಿ ಕಳ್ಳ ಸೆರೆಸಿಕ್ಕರೂ ಪೊಲೀಸರು ಆತನ ವಿಚಾರಣೆ ಮಾಡಿಲ್ಲ. ಎಲ್ಲರೂ ಶಾಮೀಲಾಗಿ ವ್ಯವಸ್ಥಿತವಾಗಿ ಪ್ರಕರಣವನ್ನ ಮುಚ್ಚಿಹಾಕುವುದಕ್ಕೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಇದಿಷ್ಟೇ ಅಲ್ಲದೆ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತವಾಗಿ ಸಿಗುವ ಔಷಧಿಗಳನ್ನ ಕೂಡ ಕಳ್ಳತನ ಮಾಡಿಕೊಂಡು ತಮ್ಮ ಖಾಸಗಿ ಕ್ಲಿನಿಕ್ ತೆಗೆದುಕೊಂಡು ಹೋಗುತ್ತಿದ್ದಾರಂತೆ. ಪ್ರತಿ ತಿಂಗಳು ಬಡ ರೋಗಿಗಳಿಗೆ ಅಂತ ಲಕ್ಷಾಂತರ ರೂ. ಸರ್ಕಾರ ಖರ್ಚು ಮಾಡುತ್ತಿದ್ದರೆ, ಇಲ್ಲಿನ ಆಸ್ಪತ್ರೆಯ ಮುಖ್ಯಸ್ಥರೇ ಕಳ್ಳತನಕ್ಕಿಳಿದರಾ ಎನ್ನುವ ಅನುಮಾನ ಶುರುವಾಗಿದೆ.
ಡಾ.ಗುರುರಾಜ್ ದೇಶಪಾಂಡೆ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಕ್ವಿದ್ವಾಯಿ ಪ್ರಭಾರ ವೈದ್ಯಾಧಿಕಾರಿ ಡಾ.ಗುರುರಾಜ್ ದೇಶಪಾಂಡೆ ಅವರನ್ನು ಕೇಳಿದರೆ, ಆಸ್ಪತ್ರೆಯ ಎಸಿಗಳು ಕೆಟ್ಟು ಹೋಗಿದ್ದವು, ಅವುಗಳನ್ನ ತೆಗೆದು ಹೊಸ ಎಸಿಗಳನ್ನ ಹಾಕಿದ್ದೇವೆ. ಹಳೇ ಎಸಿಗಳನ್ನ ಮರುಖರೀದಿ ಅಡಿ ಕೊಟ್ಟಿದ್ದೇವೆ. ಆದರೆ ಟೆಂಡರ್ನಲ್ಲಿ ಮರುಖರೀದಿ ಇರದ ಕಾರಣ ವಾಪಸ್ ತರಿಸಿಕೊಂಡಿದ್ದೇವೆ ಎನ್ನುತ್ತಾರೆ. ಮರುಖರೀದಿಗೆ ಟೆಂಡರ್ ಕರೆಯದೆ ಹೇಗೆ ಎಸಿಗಳನ್ನ ಆಸ್ಪತ್ರೆಯಿಂದ ಹೊರಗಡೆ ತೆಗೆದುಕೊಂಡು ಹೋದರು, ಯಾರು ತೆಗೆದುಕೊಂಡು ಹೋದರು ಎಂದು ಕೇಳಿದರೆ ಅದಕ್ಕೆ ಉತ್ತರವಿಲ್ಲ.
ಇದನ್ನೂ ಓದಿ: ಸೈಬರ್ ಅಪರಾಧ ಲೋಕದ ಅತಿದೊಡ್ಡ ವಂಚನೆ ಬಯಲಿಗೆಳೆದ ದಾವಣಗೆರೆ ಪೊಲೀಸ್! ವಂಚಕನ ಖಾತೆಯಲ್ಲಿ 1000 ಕೋಟಿ ರೂ.ಗೂ ಹೆಚ್ಚು ವಹಿವಾಟು
ಕಲಬುರಗಿ ಕಿದ್ವಾಯಿ ಆಸ್ಪತ್ರೆಯ ಮುಖ್ಯಸ್ಥರ ವಿರುದ್ದವೇ ಬಿಜೆಪಿ ತನಿಖೆಗೆ ಆಗ್ರಹಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆಯಿಂದ ಅಸಲಿ ಕಹಾನಿ ಹೊರಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



