ಹೈದರಾಬಾದ್ನಲ್ಲಿದ್ದ ಕಲಬುರಗಿಯ ಒಂದೇ ಕುಟುಂಬದ ಐವರು ನಿಗೂಢ ಸಾವು
ಅದು ಕುಡು ಬಡತನದ ಕುಟುಂಬ. ಸಂಸಾರ ನೌಕೆ ಸಾಗಿಸಲು ಅಂತ ತೆಲಂಗಾಣದಲ್ಲಿ ವಾಸವಾಗಿತ್ತು. ಅಲ್ಲಿಯೇ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಆದರೆ, ಈ ಕುಟುಂಬದ ಐವರು ರಾತ್ರೋರಾತ್ರಿ ಮೃತಪಟ್ಟಿದ್ದಾರೆ. ಮೃತರು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ರಂಜೋಳ ಗ್ರಾಮದವರು ಎಂದು ತಿಳಿದುಬಂದಿದೆ.

ಕಲಬುರಗಿ, ಆಗಸ್ಟ್ 22: ತೆಲಂಗಾಣ (Telangana) ರಾಜ್ಯದ ರಾಜಧಾನಿ ಹೈದರಾಬಾದ್‌ನಲ್ಲಿ ಗುರುವಾರ (ಆ.21) ಹೃದಯ ವಿದ್ರಾವಕ ಘಟನೆಯೊಂದು ನಡೆಯಿತು. ಹೈದರಾಬಾದ್‌ನ ಮಿಯಾಪುರದಲ್ಲಿ ವಾಸವಾಗಿದ್ದ ಕಲಬುರಗಿ (Kalaburagi) ಮೂಲದ ಒಂದೇ ಕುಟುಂಬದ ಐವರು ನಿಗೂಢವಾಗಿ ಮೃತಪಟ್ಟಿದ್ದಾರೆ. ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮೃತರನ್ನು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ರಂಜೋಳ ಗ್ರಾಮದ ನರಸಿಂಹ (60), ಪತ್ನಿ ವೆಂಕಟಮ್ಮ (55), ಮಗ ಅನಿಲ್ (32), ಮಗಳು ಕವಿತಾ (24) ಹಾಗೂ ಮೊಮ್ಮಗ ಅಪ್ಪು (2) ಮೃತಪಟ್ಟವರು.
ಇವರು ಕಳೆದ 20 ವರ್ಷಗಳಿಂದ ಹೈದರಾಬಾದ್‌ನಲ್ಲಿ ವಾಸವಾಗಿದ್ದರು. ಐವರೂ ಗುರುವಾರ ರಾತ್ರಿ ಊಟ ಮಾಡಿ ಮಲಗಿದ್ದು, ಬೆಳಗಾಗುವಷ್ಟರಲ್ಲಿ ಮೃತಪಟ್ಟಿದ್ದಾರೆ. ಅಕ್ಕ-ಪಕ್ಕದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಹೈದರಾಬಾದ್ನಿಂದ ಐವರ ಮೃತ ದೇಹಗಳನ್ನು ಸ್ವಗ್ರಾಮ ರಂಜೋಳಕ್ಕೆ ತರಲಾಗಿದ್ದು, ಹುಟ್ಟೂರಿನಲ್ಲೆಯೇ ಐವರ ಅಂತ್ಯಸಂಸ್ಕಾರ ನೆರವೇರಿದೆ.
ಗ್ರಾಮಸ್ಥರೇ ಹಣ ಸಂಗ್ರಹಿಸಿ ಮೃತರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ದುಡಿದು ತಿನ್ನಲು ಅಂತ ಹೈದರಾಬಾದ್ಗೆ ಹೋಗಿದ್ದ ಕುಟುಂಬ ಬಲಿಯಾಗಿದ್ದು, ಗ್ರಾಮಸ್ಥರನ್ನು ದಿಗ್ಬ್ರಾಂತಗೊಳಿಸಿದೆ. ಸಾವಿನ ಕುರಿತು ತನಿಖೆಯಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಿಗೂಢವಾಗಿ ಮೃತಪಟ್ಟಿರುವ ನರಸಿಂಹ ಅವರ ಕುಟುಂಬವು ಮೂಲತಃ ರಂಜೋಳ ಗ್ರಾಮದವರಾಗಿದ್ದು, ಕಳೆದ 20 ವರ್ಷಗಳಿಂದ ಹೈದರಾಬಾದ್ನಲ್ಲಿಯೇ ವಾಸವಾಗಿತ್ತು. ನರಸಿಂಹ ದಂಪತಿ ಮತ್ತು ತಮ್ಮ ಎರಡನೇ ಮಗಳು, ಅಳಿಯ ಹಾಗೂ ಮೊಮ್ಮಗನೊಂದಿಗೆ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು. ಕುಟುಂಬ ಕೂಲಿ ಮಾಡುತ್ತಾ ಮೂಲಕ ಜೀವನ ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ. ನರಸಿಂಹ ದಂಪತಿಯ ಇನ್ನೋರ್ವ ಪುತ್ರ ಬದುಕಿದ್ದಾನೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಸಾವು
ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಗ್ರಾಮಸ್ಥರು ಮಾತ್ರ ನಿಗೂಢ ಸಾವಿನ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ಕುಟುಂಬಕ್ಕೆ ಅರ್ಥಿಕ ಸಹಾಯ ಮಾಡಬೇಕುಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮಿಯಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಿಜಕ್ಕೂ ನರಸಿಂಹ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಿಯಾ? ಅಥವಾ ಬೇರೆ ಕಾರಣಗಳಿವೆಯೇ? ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದೆ. ಒಂದೇ ಕುಟುಂಬದ ಐದು ಮಂದಿ ಸಾವಿನಿಂದ ಮಿಯಾಪುರ ಪ್ರದೇಶದಲ್ಲಿ ಸಂಚಲನ ಮೂಡಿದೆ.
ಒಟ್ಟಿನಲ್ಲಿ ದುಡಿದು ತಿನ್ನೋಕೆ ಅಂತ ದೂರದೂರಿಗೆ ಹೋಗಿದ್ದ ಕುಟುಂಬ ಸದ್ಯ ಬಾರದ ಲೋಕಕ್ಕೆ ಹೋಗಿದೆ. ಆದರೆ, ಇಡೀ ಕುಟುಂಬದ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅದೇನೆ ಇರಲಿ ಪೊಲೀಸರು ಸೂಕ್ತ ತನಿಖೆಯ ನಂತರವೇ ನಿಗೂಢ ಸಾವಿನ ರಹಸ್ಯ ಬಯಲಾಗಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:18 pm, Fri, 22 August 25



