ಕೊವಿಡ್ ಪುನರ್ ಚೇತನ ಅಭಿಯಾನ; ಸೋಂಕಿನಿಂದ ಗುಣಮುಖರಾದವರ ಆತ್ಮಸ್ಥೈರ್ಯ ಹೆಚ್ಚಿಸಲು ಜಿಲ್ಲಾಡಳಿತದಿಂದ ವಿನೂತನ ಪ್ರಯೋಗ

ಕೊವಿಡ್ ಪುನರ್ ಚೇತನ ನಡೆಯುವ ಸ್ಥಳಕ್ಕೆ ಬಂದವರಿಗೆ ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಎರಡು ಗಂಟೆವರಗೆ, ಸುಮಾರು ಎರಡು ಗಂಟೆ ಕಾಲ ಯೋಗದ ವಿವಿಧ ಆಸನಗಳನ್ನು ಹೇಳಿ ಕೊಡಲಾಗುತ್ತದೆ ಎಂದು ಕೊವಿಡ್ ಪುನರ್ ಚೇತನ ಅಭಿಯಾನದ ನೋಡಲ್ ಅಧಿಕಾರಿ ರಮೇಶ್ ಸಂಗಾ ತಿಳಿಸಿದ್ದಾರೆ.

ಕೊವಿಡ್ ಪುನರ್ ಚೇತನ ಅಭಿಯಾನ; ಸೋಂಕಿನಿಂದ ಗುಣಮುಖರಾದವರ ಆತ್ಮಸ್ಥೈರ್ಯ ಹೆಚ್ಚಿಸಲು ಜಿಲ್ಲಾಡಳಿತದಿಂದ ವಿನೂತನ ಪ್ರಯೋಗ
ಕೊವಿಡ್ ಪುನರ್ ಚೇತನ ಅಭಿಯಾನ

ಕಲಬುರಗಿ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಪರಿಸ್ಥಿತಿಯನ್ನು ಸುಧಾರಿಸಲು ಸಾಕಷ್ಟು ಪ್ರಯತ್ನಗಳನ್ನು ಪಡುತ್ತಿದ್ದು, ಜನರ ನೆರವಿಗೆ ನಿಂತಿದೆ. ಇದರಂತೆ ಕಲಬುರಗಿ ಜಿಲ್ಲಾಡಳಿತ ಕೂಡ ಹೊಸ ಹೊಸ ಪ್ರಯೋಗಗಳ ಜತೆಗೆ ಸೋಂಕಿತರ ಸಹಾಯಕ್ಕೆ ನಿಂತಿದ್ದು, ಕೊರೊನಾ ಹರಡುವಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಇನ್ನು ಸೋಂಕಿನಿಂದ ಗುಣಮುಖರಾದವರು ಮತ್ತು ಸೋಂಕಿಗೆ ತುತ್ತಾದವರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎನ್ನುವುದನ್ನು ಅರಿತ ಜಿಲ್ಲಾಡಳಿತ, ಕೋವಿಡ್ ಪುನರ್ ಚೇತನ ಅಭಿಯಾನದ ಮೂಲಕ ಸೋಂಕಿನಿಂದ ಗುಣಮುಖರಾದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಪ್ರಾರಂಭಿಸಿದೆ.

ಸೋಂಕಿನಿಂದ ಗುಣಮುಖವಾದರು ಮನೆಯಲ್ಲಿ ಹೇಗಿರಬೇಕು, ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಗೊಂದಲಗಳು ಅನೇಕರಲ್ಲಿ ಇದೆ. ಅನೇಕರು ಮಾನಸಿಕವಾಗಿ ಕರೊನಾ ಸೋಂಕಿನಿಂದಾಗಿ ಕುಗ್ಗಿ ಹೋಗಿದ್ದಾರೆ. ಅಂತವರಿಗೆ ಹೊಸ ಚೈತನ್ಯ ತುಂಬುವ ಕೆಲಸವನ್ನು ಕಲಬುರಗಿ ಜಿಲ್ಲಾಡಳಿತ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕಲಬುರಗಿ ನಗರದ ಜಿಡಿಎ ಕಲ್ಯಾಣ ಮಂಟಪದಲ್ಲಿ, ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಯೋಗ ತರಬೇತಿಯನ್ನು ನೀಡಲಾಗುತ್ತಿದೆ.

ಕೊರೊನಾ ಸೋಂಕು ದೃಢವಾಗಿದೆ ಎನ್ನುವ ಸುದ್ದಿ ತಿಳಿದೆ ಅನೇಕರು ಸತ್ತಿದ್ದಾರೆ. ಇನ್ನು ಅನೇಕರು ಗಾಬರಿಯಲ್ಲಿಯೇ ಆಸ್ಪತ್ರೆ ಸೇರಿದ್ದಾರೆ. ಸೋಂಕಿನಿಂದ ಗುಣಮುಖರಾದರು ಕೂಡಾ ಮನಸ್ಸಿನಲ್ಲಿ ಆತಂಕ ಮಾತ್ರ ಕಾಡುತ್ತಿದೆ. ಮತ್ತೇನಾದರು ಕಾಯಿಲೆ ಬರಬಹುದು ಎಂದು ಚಿಂತೆ ಹುಟ್ಟಿಕೊಂಡಿದೆ. ಇನ್ನು ಕೆಲವರು ಆಸ್ಪತ್ರೆಯಲ್ಲಿದ್ದು ಸಾವುಗಳನ್ನು ನೋಡಿ ಮಾನಸಿಕವಾಗಿ ಜರ್ಜಿರಿತರಾಗಿದ್ದಾರೆ. ಹೀಗಾಗಿ ಸೋಂಕಿನಿಂದ ಗುಣಮುಖರಾದವರಿಗೆ ಇದೀಗ ಮಾನಸಿಕ ಹಾಗೂ ದೈಹಿಕ ಆತ್ಮಸ್ಥೈರ್ಯ ತುಂಬುವ ವಿಭಿನ್ನ ಕೆಲಸಕ್ಕೆ ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ.

ಅದುವೇ ಕೊವಿಡ್ ಪುನರ್ ಚೇತನ ಅಭಿಯಾನ. ಹೌದು ಜಿಲ್ಲೆಯಲ್ಲಿ ಸೋಂಕಿನಿದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಅವರು ಮನೆಗೆ ಹೋಗುವ ಮುನ್ನವೇ, ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಕಲಬುರಗಿ ಜಿಲ್ಲಾಡಳಿತದ ಆರ್ಟ್ ಆಫ್ ಲಿವಿಂಗ್ ಸಹೋಯಗದಲ್ಲಿ ಮಾಡುತ್ತಿದೆ. ನಗರದ ಜಿಡಿಎ ಕಲ್ಯಾಣ ಮಂಟಪದಲ್ಲಿ ಇದಕ್ಕಾಗಿ ವ್ಯವಸ್ಥೆಯನ್ನು ಮಾಡಿದ್ದು, ಇದರ ನೋಡಲ್ ಅಧಿಕಾರಿಯಾಗಿರುವ ರಮೇಶ್ ಸಂಗಾ ಅವರು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ.

ಪ್ರತಿ ದಿನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗುತ್ತಿರುವವರ ಮಾಹಿತಿಯನ್ನು ಇಲ್ಲಿ ಪಡೆಯಲಾಗುತ್ತದೆ. ಮಾಹಿತಿ ಪಡೆಯುವ ಸಿಬ್ಬಂದಿ, ಆಸ್ಪತ್ರೆಗೆ ತಮ್ಮದೇ ವಾಹನವನ್ನು ತೆಗೆದುಕೊಂಡು ಹೋಗಿ, ಡಿಸ್ಚಾರ್ಜ್ ಆದ ಸೋಂಕಿತರನ್ನು ಕರೆದುಕೊಂಡು ಬರುತ್ತಾರೆ. ಕೊವಿಡ್ ಪುನರ್ ಚೇತನ ನಡೆಯುವ ಸ್ಥಳಕ್ಕೆ ಬಂದವರಿಗೆ ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಎರಡು ಗಂಟೆವರಗೆ, ಸುಮಾರು ಎರಡು ಗಂಟೆ ಕಾಲ ಯೋಗದ ವಿವಿಧ ಆಸನಗಳನ್ನು ಹೇಳಿ ಕೊಡಲಾಗುತ್ತದೆ ಎಂದು ಕೊವಿಡ್ ಪುನರ್ ಚೇತನ ಅಭಿಯಾನದ ನೋಡಲ್ ಅಧಿಕಾರಿ ರಮೇಶ್ ಸಂಗಾ ತಿಳಿಸಿದ್ದಾರೆ.

ಉಸಿರಾಟಕ್ಕೆ ಸಂಬಂಧಿಸಿದ ಆಸನಗಳನ್ನು ಮಾಡಿಸಲಾಗುತ್ತದೆ. ನಂತರ ಯಾವ ರೀತಿ ಮನೆಯಲ್ಲಿರಬೇಕು. ಮನೆಯಲ್ಲಿ ಯಾವ ರೀತಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಹಾರದ ಪದ್ಧತಿ ಏನಿರಬೇಕು. ಮಾನಸಿಕವಾಗಿ ಕುಗ್ಗದೇ ಹೇಗೆ ಆತ್ಮಸ್ಥೈರ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮಾನಸಿಕವಾಗಿ ಕುಗ್ಗಿದವರಿಗೆ ಹೊಸ ಹುರುಪು ತುಂಬುವ ಕೆಲಸವನ್ನು ಮಾಡಲಾಗುತ್ತದೆ. ನಂತರ ಜಿಲ್ಲಾಡಳಿತದ ವತಿಯಿಂದಲೇ ರೆಸ್ಪಿರೇಟರ್ ಮಷಿನ್, ಡ್ರೈ ಪ್ರೂಟ್ಸ್, ಹಣ್ಣುಗಳನ್ನು ನೀಡಿ ಕಳುಹಿಸಲಾಗುತ್ತದೆ. ಇದರಿಂದ ಸೋಂಕಿನಿಂದ ಗುಣಮುಖರಾದವರಿಗೆ ಹೊಸ ಚೈತನ್ಯ ಮೂಡುತ್ತಿದೆ. ಎರಡು ದಿನದ ಹಿಂದೆ ಕಲಬುರಗಿ ಜಿಲ್ಲೆಯಲ್ಲಿ ಇಂತಹದೊಂದು ವಿನೂತನ ಪ್ರಯೋಗ ಪ್ರಾರಂಭವಾಗಿದ್ದು, ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದೆ ಮತ್ತು ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗಿದೆ ಎಂದು ಕೊವಿಡ್ ಪುನರ್ ಚೇತನ ಅಭಿಯಾನದ ನೋಡಲ್ ಅಧಿಕಾರಿ ರಮೇಶ್ ಸಂಗಾ ಹೇಳಿದ್ದಾರೆ.

ಸೋಂಕಿನಿಂದ ಗುಣಮುಖರಾದವರಿಗೆ ಜೀವ ಚೈತನ್ಯ ತುಂಬುವ ಕೆಲಸವಾಗಬೇಕಿದೆ. ಆ ಕೆಲಸವನ್ನು ಕಲಬುರಗಿ ಜಿಲ್ಲಾಡಳಿತ ಪ್ರಾರಂಭಿಸಿದ್ದು, ಇದು ಉಳಿದ ಜಿಲ್ಲೆಗಳಿಗೆ ಕೂಡಾ ಮಾದರಿಯಾಗಿದೆ. ಈ ರೀತಿಯ ಕಾರ್ಯಕ್ರಮದಿಂದ ಹೆಚ್ಚಿನ ಸೋಂಕಿತರಲ್ಲಿ ಮತ್ತು ಸೋಂಕಿನಿಂದ ಗುಣಮುಖರಾದವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದಂತಾಗುತ್ತದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಟೆಲಿ ಮೆಡಿಸಿನ್ ಸೇವೆ; ಮೈಸೂರು ಜಿಲ್ಲಾಡಳಿತದಿಂದ ವಿನೂತನ ಪ್ರಯೋಗ