ಕಲಬುರಗಿ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ: ಮದ್ಯ ತರಲು, ಹಣ ನೀಡಲು ಕಿರುಕುಳ ಆರೋಪ

ಕಲಬುರಗಿ ಅಂಬೇಡ್ಕರ್ ವಸತಿ ನಿಲಯದಲ್ಲಿ ಡಿಪ್ಲೊಮಾ ವಿದ್ಯಾರ್ಥಿ ಸುಮಿತ್ ಮೇಲೆ ಸಹವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮದ್ಯ ತಂದುಕೊಡುವಂತೆ, 30 ಸಾವಿರ ರೂಪಾಯಿ ನೀಡುವಂತೆ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕಲಬುರಗಿ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ: ಮದ್ಯ ತರಲು, ಹಣ ನೀಡಲು ಕಿರುಕುಳ ಆರೋಪ
ಕಲಬುರಗಿ ಅಂಬೇಡ್ಕರ್ ವಸತಿ ನಿಲಯದ ಕೊಠಡಿಯಲ್ಲಿ ಕಂಡುಬಂದ ದೃಶ್ಯ
Edited By:

Updated on: Nov 03, 2026 | 7:25 AM

ಮುಖ್ಯಾಂಶಗಳು

  • ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ
  • ಮದ್ಯ, ಹಣಕ್ಕಾಗಿ ಕಿರುಕುಳ ನೀಡಿದ ಆರೋಪ
  • ಐವರು ಆರೋಪಿಗಳಿಗಾಗಿ ಪೊಲೀಸರಿಂದ ತೀವ್ರ ಶೋಧ

ಕಲಬುರಗಿ, ನವೆಂಬರ್ 3: ಹಾಸ್ಟೆಲ್‌ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ಸಹವಿದ್ಯಾರ್ಥಿಗಳೇ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದೆ. ಮದ್ಯ ತಂದುಕೊಡುವಂತೆ ಹಾಗೂ 30 ಸಾವಿರ ರೂಪಾಯಿ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಹಣ ನೀಡಲು ನಿರಾಕರಿಸಿದಾಗ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿ ಆರೋಪಿಸಿದ್ದಾನೆ. ಕಲಬುರಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ.

ಹಾಸ್ಟೆಲ್‌ನ ಕೊಠಡಿಗಳಲ್ಲಿ ಮದ್ಯದ ಬಾಟಲಿಗಳು, ಗುಟ್ಕಾ ಹಾಗೂ ಸಿಗರೇಟ್ ಪ್ಯಾಕೆಟ್‌ಗಳು ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ಹಲ್ಲೆಗೊಳಗಾದ ವಿದ್ಯಾರ್ಥಿಯ ಮೈಮೇಲೆ ಗಾಯದ ಗುರುತುಗಳೂ ಇವೆ.

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಚಿತ್ತಾಪುರದ ಸುಮಿತ್ ಎಂದು ಗುರುತಿಸಲಾಗಿದೆ. ಕಲಬುರಗಿಯ ಅಂಬೇಡ್ಕರ್ ವಸತಿ ನಿಲಯದಲ್ಲಿ ಉಳಿದುಕೊಂಡು ಹೆಚ್‌ಕೆಎಸ್ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ. ಅಕ್ಟೋಬರ್ 29ರಂದು ಹಾಸ್ಟೆಲ್‌ಗೆ ಬಂದಿದ್ದ ಸುಮಿತ್‌ಗೆ ಮೊದಲ ದಿನದಿಂದಲೇ ಕೆಲವರು ಕಿರುಕುಳ ನೀಡಲು ಆರಂಭಿಸಿದ್ದರು ಎಂಬ ಆರೋಪವಿದೆ.

ಸುಮಿತ್ ಕೊಠಡಿಯಲ್ಲಿದ್ದಾಗ ರೋಷನ್, ಶರಣು, ಲಕ್ಷ್ಮಣ್, ರಾಜಕುಮಾರ ಸೇರಿದಂತೆ ಕೆಲವರು ಮದ್ಯದ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಮದ್ಯ ತಂದುಕೊಡುವಂತೆ ಹಾಗೂ 30 ಸಾವಿರ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡಲು ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಸುಮಿತ್ ಆರೋಪಿಸಿದ್ದಾನೆ.

ಮಗನ ಸ್ಥಿತಿ ಕಂಡು ತಾಯಿ ಕಣ್ಣೀರು

ಹಾಸ್ಟೆಲ್‌ನಲ್ಲಿ ತನ್ನ ಮೇಲೆ ಹಲ್ಲೆ ನಡೆದಿರುವ ವಿಚಾರವನ್ನು ಸುಮಿತ್ ತಾಯಿಗೆ ಕರೆ ಮಾಡಿ ತಿಳಿಸಿದ್ದಾನೆ. ಬಳಿಕ ಹಾಸ್ಟೆಲ್‌ಗೆ ಬಂದ ತಾಯಿ, ಮಗನ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. ಈ ವೇಳೆ ವಾರ್ಡನ್ ಕೂಡ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರೋಷನ್, ಶರಣು, ಲಕ್ಷ್ಮಣ್, ರಾಜಕುಮಾರ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳ ಜೊತೆಗೆ ವಾರ್ಡನ್ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸುಮಿತ್ ತಾಯಿ ಸುಭದ್ರಮ್ಮ ಆಗ್ರಹಿಸಿದ್ದಾರೆ.

ಆರೋಪಿಗಳಿಗಾಗಿ ಪೊಲೀಸರ ಶೋಧ

ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ಗೆ ಬಂದ ವಿದ್ಯಾರ್ಥಿಯ ಮೇಲೆ ಕಿರುಕುಳ ನೀಡಿ ಹಲ್ಲೆ ನಡೆಸಿರುವ ಆರೋಪ ಆತಂಕ ಮೂಡಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹಲ್ಲೆಯ ಹಿಂದೆ ಬೇರೆ ಕಾರಣ ಇದೆಯೇ ಎಂಬ ಬಗ್ಗೆ ಹಾಗೂ ಘಟನೆಯ ಸಂಪೂರ್ಣ ವಿವರಗಳ ಕುರಿತು ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Loading...
Unable to load recommendations.
Follow Us