ಕಲಬುರಗಿಯಲ್ಲಿ ಬಿಜೆಪಿಗೆ ಸಹಿಷ್ಣುತೆಯ ಪಾಠ ಬೋಧಿಸಿದ ಸಿದ್ದರಾಮಯ್ಯ
ಹಿಂದೂವಾಗಿ, ಹಿಂದೂ ಧರ್ಮಕ್ಕೆ ಗೌರವ ಕೊಡು, ಆದರೆ ಇನ್ನೊಂದು ಧರ್ಮವನ್ನು ದ್ವೇಷಿಸೋದೆಕೆ ? ಇನ್ನೊಂದು ಧರ್ಮದ ಬಗ್ಗೆ ಸಹಿಷ್ಣುತೆ ಇರಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹಿಷ್ಣುತೆಯ ಪಾಠ ಮಾಡಿದ್ದಾರೆ.
ಕಲಬುರಗಿ: ಹಿಂದೂವಾಗಿ, ಹಿಂದೂ (Hindu) ಧರ್ಮಕ್ಕೆ ಗೌರವ ಕೊಡು, ಆದರೆ ಇನ್ನೊಂದು ಧರ್ಮವನ್ನು ದ್ವೇಷಿಸೋದೆಕೆ. ನಮ್ಮ ಧರ್ಮದ ಬಗ್ಗೆ ಗೌರವ ಇರಲಿ. ಇನ್ನೊಂದು ಧರ್ಮದ ಬಗ್ಗೆ ಸಹಿಷ್ಣುತೆ ಇರಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸಹಿಷ್ಣುತೆಯ ಪಾಠ ಮಾಡಿದ್ದಾರೆ. ಆದರೆ ಸಹಿಷ್ಣುತೆಗೆ ಹುಳಿ ಹಿಂಡುವ, ಬೆಂಕಿ ಹಚ್ಚುವ ಕೆಲಸವನ್ನು ಆ ಕೆಲವರು ಆರಂಭಿಸಿದ್ದಾರೆ. ಇದಕ್ಕೆ ಯಾರು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಸಮೂಹಿಕ ವಿವಾಹದಲ್ಲಿ ಬಾಗಿಯಾಗಿ ಮಾತನಾಡಿದ ಅವರು ನಮಗೆ ಖಾಯಿಲೆ ಬಂದರೇ ವೈದ್ಯರ ಬಳಿ ಹೋಗುತ್ತೇವೆ. ನನಗೆ ಕುರುಬರ ರಕ್ತವೇ ನೀಡಿ, ಬೇರೆ ಜಾತಿಯವರ ರಕ್ತ ಕೊಡಬೇಡಿ ಅಂತ ಹೇಳುತ್ತೇವಾ? ಯಾವುದಾದರು ರಕ್ತ ಕೊಡು, ಮೊದಲು ನನ್ನ ಖಾಯಿಲೆ ವಾಸಿಯಾಗಲಿ ಅಂತ ಹೇಳುತ್ತೇವೆ ಎಂದರು.
ಧರ್ಮಕ್ಕಾಗಿ ನಾವಿಲ್ಲಾ, ನಮಗಾಗಿ ಧರ್ಮ ಇರೋದು
ಎಲ್ಲರ ಮೈಯಲ್ಲಿ ಹರೆಯುವದು ಒಂದೇ ರಕ್ತ. ನಾನು ಹಿಂದೂ, ಕುರುಬರ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿದ್ದನಾ ? ನಮ್ಮ ಅಪ್ಪ ಕುರುಬ, ಹೀಗಾಗಿ ಕುರುಬರ ಜಾತಿಯಲ್ಲಿ ಹುಟ್ಟಿದ್ದೇನೆ. ಧರ್ಮಕ್ಕಾಗಿ ನಾವಿಲ್ಲಾ, ನಮಗಾಗಿ ಧರ್ಮ ಇರೋದು. ನಾವೆಲ್ಲಾ ಸರ್ವಧರ್ಮದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಇದ್ದೇವೆ. ಸಮಾಜಿಕ, ಮತ್ತು ಆರ್ಥಿಕ ಅಸಮಾನತೆ ಇರೋ ಸಮಾಜ ನಮ್ಮದು ಎಂದು ಹೇಳಿದರು.
ಇದನ್ನೂ ಓದಿ: ಯಂಕ, ನಾಣಿ, ಸೀನ ನಾನೇ ಸಿಎಂ ಅಂತಾ ಹೇಳುತ್ತಿದ್ದಾರೆ: ಪರೋಕ್ಷವಾಗಿ ಟಾಂಗ್ ಕೊಟ್ಟ ಯಡಿಯೂರಪ್ಪ
ಚಾಪೆ ಇದ್ದಷ್ಟೇ ಕಾಲು ಚಾಚಬೇಕು
ಬಡವರು, ಶ್ರೀಮಂತರ ಮದುವೆ ನೋಡಿ ತಾವು ಅನುಸರಿಸಬಾರದು. ಚಾಪೆ ಇದ್ದಷ್ಟೇ ಕಾಲು ಚಾಚಬೇಕು. ಸಾಲ ಮಾಡಿಕೊಂಡು ಮದುವೆ ಮಾಡಿ ಸಾಲಗಾರ ಆಗಬಾರದು. ಸರಳವಾಗಿ ಮದುವೆ ಮಾಡಿದರೆ ಮರ್ಯಾದೆ ಹೋಗಲ್ಲ ಎಂದು ಕಿವಿಮಾತುಗಳನ್ನಾಡಿದರು.
ಸಂವಿಧಾನದ ಪರವಾಗಿ ಮಾತನಾಡಿದರೇ ಸಿದ್ರಾಮುಲ್ಲಾ ಖಾನ್ ಅಂತಾರೆ
ಹಿಂದು ಧರ್ಮದಲ್ಲಿ ಜಾಸ್ತಿ ಜನ ಇರಬಾರದು. ನಾನು ಸಂವಿಧಾನದ ಪರವಾಗಿ ಮಾತನಾಡಿದರೇ ಸಿದ್ರಾಮುಲ್ಲಾ ಖಾನ್ ಅಂತಿದ್ದಾರೆ. ನಮ್ಮ ಅಪ್ಪ ಅಮ್ಮ ಸಿದ್ದರಾಮಯ್ಯ ಅಂತ ಹೆಸರಿಟ್ಟಿದ್ದಾರೆ. ಆತ ಯಾರು ನನಗೆ ಸಿದ್ದರಾಮುಲ್ಲಾಖಾನ್ ಅಂತ ಕರೆಯೋಕೆ? ಎಂದು ಸಿ.ಟಿ ರವಿ ವಿರುದ್ಧ ವಾಗ್ದಾಳಿ ಮಾಡಿದರು.
ಜನಸೇವೆ ಮಾಡಲಾಗದಿದ್ದರೆ ರಾಜಕೀಯದಲ್ಲಿ ಇರಬಾರದು
ಜನಸೇವೆ ಮಾಡಲಾಗದಿದ್ದರೆ ರಾಜಕೀಯದಲ್ಲಿ ಇರಬಾರದು. ರಾಜಕಾರಣದಲ್ಲಿ ಇದ್ದ ಮೇಲೆ ನಾವು ಜನಸೇವೆ ಮಾಡಬೇಕು. ಇಲ್ಲದಿದ್ದರೆ ಜಾಗ ಖಾಲಿ ಮಾಡಬೇಕು. ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿಕಟ್ಟುವ ಕೆಲಸ ಮಾಡಬಾರದು. ರಾಜಕಾರಣದಲ್ಲಿ ಅವಕಾಶ ಸಿಕ್ಕಾಗ ಸದ್ಬಳಕೆ ಮಾಡಿಕೊಳ್ಳಬೇಕು. ನಾನು ಹಣೆಬರಹದ ಮೇಲೆ ನಂಬಿಕೆ ಇಟ್ಟುಕೊಂಡಿಲ್ಲ. ರಾಜಕೀಯದಲ್ಲಿ ಬೆಳೆಯಬೇಕಿದ್ದರೆ ಜನಾಶೀರ್ವಾದ ಇರಲೇಬೇಕು ಎಂದು ಹೇಳಿದ್ದಾರೆ.
ರಾಜ್ಯ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು
ರಾಜ್ಯ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ರಾಜ್ಯ ಅಭಿವೃದ್ಧಿ ಆಗುವುದಿಲ್ಲ. ಅಭಿವೃದ್ಧಿಯಲ್ಲಿ ಕರ್ನಾಟಕ 10 ವರ್ಷ ಹಿಂದಕ್ಕೆ ಹೋಗಲಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್ ಭಾವಚಿತ್ರ ವಿಚಾರವಾಗಿ ಮಾತನಾಡಿದ ಅವರು ನನಗೂ ಅದರ ಬಗ್ಗೆ ಯಾರೋ ಹೇಳಿದರು. ನಾಳೆ ಅದನ್ನು ನೋಡಿ ಮಾತುನಾಡುತ್ತೇನೆ ಎಂದು ನುಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ