ಶರಣಬಸಪ್ಪ ಅಪ್ಪ ಲಿಂಗೈಕ್ಯ: ಪ್ರಧಾನಿ ನರೇಂದ್ರ ಮೋದಿ ಸಂತಾಪ
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ ಡಾ. ಶರಣಬಸಪ್ಪ ಅಪ್ಪ ಅವರ ಲಿಂಗೈಕ್ಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಡಾ. ಶರಣಬಸಪ್ಪ ಅಪ್ಪ ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಸೇವೆಗಳನ್ನು ಸ್ಮರಿಸಿದ್ದಾರೆ.

ಕಲಬುರಗಿ, ಆಗಸ್ಟ್ 17: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ, ಕಲಬುರಗಿಯ (Kalaburagi) ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ ಡಾ.ಶರಣಬಸಪ್ಪ ಅಪ್ಪ (Dr. Sharanabasappa appa) ಲಿಂಗೈಕ್ಯರಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ. ಡಾ.ಶರಣಬಸಪ್ಪ ಅಪ್ಪ ಅವರನ್ನು ಕಳೆದುಕೊಂಡಿದ್ದು ಕೇವಲ ಅವರ ಕುಟುಂಬಕ್ಕೆ ಅಷ್ಟೇ ಅಲ್ಲದೆ ಅಪಾರ ಸಂಖ್ಯೆಯ ಭಕ್ತಗಣಕ್ಕೂ ಕೂಡ ನಷ್ಟ ಉಂಟಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಡಾ. ಶರಣಬಸವಪ್ಪ ಅಪ್ಪಾಜಿ ಅವರು ತಮ್ಮ ಜೀವನವನ್ನು ಶರಣಬಸವೇಶ್ವರ ಸಂಸ್ಥಾನದ 8 ನೇ ಪೀಠಾಧ್ಯಕ್ಷರಾದ ಅದರ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವಾ ಚಟುವಟಿಕೆಗಳ ವಿಸ್ತರಣೆಗೆ ಮುಡಿಪಾಗಿಟ್ಟರು. ಅವರ ಮಾರ್ಗದರ್ಶನವು ಅಸಂಖ್ಯಾತ ಜನರನ್ನು ಮುಟ್ಟಿದ್ದು, ಇದು ಭಕ್ತಿ, ಪ್ರೀತಿ ಮತ್ತು ಮಾನವೀಯ ಹಾದಿಯಲ್ಲಿ ನಡೆಯಲು ಪ್ರೇರೇಪಿಸಿದೆ ಎಂದು ಪತ್ರದಲ್ಲಿದೆ.
ನಿಜವಾದ ಆಧ್ಯಾತ್ಮಿಕತೆಯು ‘ಸೇವಾ ಪರಮೋ ಧರ್ಮ’ದಲ್ಲಿ ಅಡಗಿದೆ ಎಂದು ತೋರಿಸಿಕೊಟ್ಟರು. ಅವರು ಸಮಾಜದ ಬಡ ಮತ್ತು ಹಿಂದುಳಿದ ವರ್ಗಗದ ಜನರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಶರಣಬಸಪ್ಪ ಅಪ್ಪ ಅವರ ಅವಿಶ್ರಾಂತವಾಗಿ ಶ್ರಮಿಸಿದರು ಎಂದು ಪತ್ರದಲ್ಲಿದೆ.
ಇದನ್ನೂ ಓದಿ: ಲಿಂಗೈಕ್ಯಕ್ಕೂ ಮುನ್ನ ತಮ್ಮ ಕೊನೆ ಆಸೆ ಈಡೇರಿಸಿಕೊಂಡ ಶರಣಬಸಪ್ಪ ಅಪ್ಪ
ಡಾ. ಶರಣಬಸವಪ್ಪ ಅಪ್ಪಾಜಿ ಅವರು ಸಂಪ್ರದಾಯಗಳು ಮತ್ತು ತತ್ವಶಾಸ್ತ್ರದ ಬಗ್ಗೆ ಕೃತಿಗಳನ್ನು ಬರೆದಿದ್ದಾರೆ. ‘ದಾಸೋಹ ಸೂತ್ರಗಳು’ ಮುಂತಾದ ಅವರ ಕೃತಿಗಳು ಭವಿಷ್ಯದ ಪೀಳಿಗೆಗೆ ಯಾವಾಗಲೂ ಮಾರ್ಗದರ್ಶಕ ಬೆಳಕಾಗಿ ಉಳಿಯುತ್ತವೆ. ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯ ಸೌಂದರ್ಯವನ್ನು ಉತ್ತೇಜಿಸುವಂತಹ ವಿವಿಧ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಯನ್ನು ಜನರು ಯಾವಾಗಲೂ ಸ್ಮರಿಸುತ್ತಾರೆ. ಡಾ. ಶರಣಬಸವಪ್ಪ ಅಪ್ಪಾಜಿ ಅವರ ಜೀವನ ಮತ್ತು ಮೌಲ್ಯಗಳು ಪ್ರೇರಣಾದಾಯಕವಾಗಿರುತ್ತವೆ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಅವರು ಭೌತಿಕವಾಗಿ ನಮ್ಮ ಮಧ್ಯದಲ್ಲಿ ಇಲ್ಲದಿದ್ದರೂ, ಅವರ ಆಧ್ಯಾತ್ಮಿಕ ಉಪಸ್ಥಿತಿಯು ಸಂಸ್ಥಾನ ಮತ್ತು ಅದರಾಚೆಗಿನ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ ಎಂದು ಸಂತಾಪ ಸೂಚಿಸಿದ್ದಾರೆ.



