AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ವಿರುದ್ಧ ಕಾನೂನು ಪ್ರಕಾರ ಕೇಂದ್ರದಿಂದ ಕ್ರಮ: ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯಗೆ ಪ್ರಲ್ಹಾದ್ ಜೋಶಿ ತಿರುಗೇಟು

ಪ್ರಜ್ವಲ್ ಪ್ರಕರಣ ಸಂಬಂಧ ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ವಿದೇಶಕ್ಕೆ ಹೋದವರನ್ನು ಕರೆತರಲು ಪ್ರಕ್ರಿಯೆಗಳಿವೆ. ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ಕೇಂದ್ರ ತಯಾರಿದೆ. ಪತ್ರ ಬರೆದ ತಕ್ಷಣ ಪಾಸ್​​ಪೋರ್ಟ್​ ರದ್ದಾಗಬೇಕು ಎಂದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜ್ವಲ್ ವಿರುದ್ಧ ಕಾನೂನು ಪ್ರಕಾರ ಕೇಂದ್ರದಿಂದ ಕ್ರಮ: ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯಗೆ ಪ್ರಲ್ಹಾದ್ ಜೋಶಿ ತಿರುಗೇಟು
ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯಗೆ ಪ್ರಲ್ಹಾದ್ ಜೋಶಿ ತಿರುಗೇಟು
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: May 23, 2024 | 10:50 AM

Share

ಕಲಬುರಗಿ, ಮೇ 23: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಪತ್ರ ಬರೆದ ಬಗ್ಗೆ ಕಲಬುರಗಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ಪಾಸ್​ಪೋರ್ಟ್ ರದ್ದತಿಗೆ ಅದರದ್ದೇ ಆದ ಪ್ರಕ್ರಿಯೆಗಳು ಇವೆ. ರಾಜತಾಂತ್ರಿಕ ಪಾಸ್​​ಪೋರ್ಟ್​​ ರದ್ದತಿಗೆ ಕೋರ್ಟ್​​​ನಲ್ಲಿ ಅರ್ಜಿ ಹಾಕಲಾಗಿದೆ ಎಂದು ಜೋಶಿ ಹೇಳಿದರು.

ಕೇಂದ್ರ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿದೆ. ಆದರೆ, ನನ್ನ ಪ್ರಶ್ನೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಪರಮೇಶ್ವರ್ ಈವರೆಗೆ ಉತ್ತರಿಸಿಲ್ಲ. ಪ್ರಜ್ವಲ್ ಪೆನ್​ಡ್ರೈವ್ ಹೊರಬಂದಿದ್ದು ಏಪ್ರಿಲ್ 21ರಂದು. ಆದರೆ, ಪ್ರಜ್ವಲ್ ವಿದೇಶಕ್ಕೆ ಹೋಗಿದ್ದು ಏಪ್ರಿಲ್ 27ರಂದು. ಹಾಗಾದರೆ ಅಲ್ಲಿಯವರೆಗೆ ಇವರೇನು ಕತ್ತೆ ಕಾಯುತ್ತಿದ್ದಾರಾ ಎಂದು ಜೋಶಿ ಮತ್ತೊಮ್ಮೆ ಪ್ರಶ್ನಿಸಿದರು.

ವಿದೇಶಕ್ಕೆ ಹೋದವರನ್ನು ಕರೆತರಲು ಪ್ರಕ್ರಿಯೆಗಳಿವೆ. ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ಕೇಂದ್ರ ತಯಾರಿದೆ. ಪತ್ರ ಬರೆದ ತಕ್ಷಣ ಪಾಸ್​​ಪೋರ್ಟ್​ ರದ್ದಾಗಬೇಕು ಎಂದರೆ ಹೇಗೆ? ಇದೀಗ ಪ್ರಕರಣವನ್ನು ಬಿಜೆಪಿ ಮೇಲೆ ಹಾಕುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಚುನಾವಣೆ ಮುಗಿಯುವವರೆಗೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಜೋಶಿ ಆರೋಪಿಸಿದರು.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಗಂಭೀರ ಪ್ರಕರಣ. ಪ್ರಜ್ವಲ್ ವಿಚಾರಣೆ ಎದುರಿಸಬೇಕು. ಅವರು ತಪ್ಪು ಮಾಡಿದ್ದೇ ಆಗಿದ್ದರೆ ಕಠಿಣ ಕ್ರಮ ಆಗಲೇಬೇಕು. ಇದರಲ್ಲಿ ಯಾವುದೇ ಅನುಕಂಪ ಇಲ್ಲವೇ ಇಲ್ಲ ಎಂದೂ ಜೋಶಿ ಹೇಳಿದರು.

ಪ್ರಜ್ವಲ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ತನಿಖೆಗಿಂತ ಹೆಚ್ಚು ರಾಜಕಾರಣ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಪ್ರಧಾನಿ ಮೋದಿಗೆ ಮತ್ತೊಮ್ಮೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಿದರೆ ಅವರು ವಾಪಸ್ ಬರಲೇಬೇಕಾಗುತ್ತದೆ. ಹೀಗಾಗಿ ಆ ಕ್ರಮ ಕೈಗೊಳ್ಳಬೇಕು. ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ