ಜನ ಬಯಸಿದರೆ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವೆ – PSI ಅಕ್ರಮ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಘೋಷಣೆ, ಕ್ಷೇತ್ರವೂ ಪ್ರಕಟ!
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಪ್ರಮುಖ ಆರೋಪಿಯಾಗಿರುವ ರುದ್ರಗೌಡ ಪಾಟೀಲ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ(PSI Recruitment Scam) ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರುದ್ರಗೌಡ ಪಾಟೀಲ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ನಿನ್ನೆ(ಜ.20) ಸಿಐಡಿ ಅಧಿಕಾರಿಗಳು ಆರೋಪಿ ರುದ್ರಗೌಡ ಪಾಟೀಲ್ ಬಂಧಿಸಲು ಬಂದಿದ್ದರು. ಈ ವೇಳೆ ಅಧಿಕಾರಿಗಳನ್ನು ತಳ್ಳಿ ರುದ್ರಗೌಡ ಪರಾರಿಯಾಗಿದ್ದರು. ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ.
ಬಿಡುಗಡೆಯಾದ ವಿಡಿಯೋದಲ್ಲೇನಿದೆ?
ನಿನ್ನೆ ಪರಾರಿಯಾದ ಬಳಿಕ ರುದ್ರಗೌಡ ಪಾಟೀಲ್ ಬಗ್ಗೆ ಅನೇಕ ಮಾತುಗಳು ಕೇಳಿ ಬಂದಿದ್ದವು. ಈ ಬೆನ್ನಲ್ಲೆ ಇಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಜನ ಭಯಸಿದ್ರೆ ಅಫಜಲಪುರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೇ ಸ್ಪರ್ದೆ ಮಾಡ್ತೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲಾ, ಇಲ್ಲೇ ಇದ್ದೇನೆ. ಇಡಿ ಅಧಿಕಾರಿಗಳು ಬಂದಾಗ ಅವರ ವಿಚಾರಣೆ ಎದುರಿಸಿದ್ದೇನೆ. ಇಡಿ ಅಧಿಕಾರಿಗಳು ಬಂದು ಹೋದ ಮೇಲೆ ನಾನು ಹೊರಗೆ ಹೋಗಿದ್ದೆ.
ಆಗ ಸಿಐಡಿ ಅಧಿಕಾರಿಗಳು ಮನೆಗೆ ಬಂದಿದ್ದಾರೆ. ನಾನು ಸಿಐಡಿ ಅಧಿಕಾರಿಗಳನ್ನು ತಳ್ಳಿ ಓಡಿ ಹೋಗಿದ್ದೇನೆ ಅನ್ನೋದು ಸುಳ್ಳು. ಸಿಐಡಿ ವಿರುದ್ಧ ನಡೆದುಕೊಳ್ಳಲು ಯಾರಿಂದಲು ಸಾಧ್ಯವಿಲ್ಲಾ. ನಾನು ಈ ನೆಲದ ಕಾನೂನಿಗೆ ಗೌರವ ನೀಡುವ ಮನುಷ್ಯ. ರಾಜಕೀಯ ಕುತಂತ್ರದಿಂದ ನನ್ನನ್ನು ಸಿಲುಕಿಸಿದ್ದಾರೆ. ಪಿಎಸ್ಐ ಪ್ರಕರಣದಲ್ಲಿ ನನ್ನನ್ನು ಮತ್ತು ನನ್ನ ಸಹೋದರನನ್ನು ಸಿಲುಕಿಸಿದ್ದಾರೆ. ಸಮಾಜ ಸೇವೆ, ಚುನಾವಣೆಗೆ ಬರಬಹುದು ಅನ್ನೋ ಭಯದಿಂದ ಸಿಲುಕಿಸಿದ್ದಾರೆ. ಕೆಲ ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಮಾತು ಕೇಳಿದ್ದಾರೆ. ಅವರ ಮಾತು ಕೇಳಿ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಸುಳ್ಳು ಆರೋಪಕ್ಕೆ ನಾನು ಬೆದರೋದಿಲ್ಲಾ. ಅಫಜಲಪುರ ಜನರ ಸೇವೆಗಾಗಿ ನಾನು ಸದಾ ಸಿದ್ದ. ನನ್ನ ಅಭಿಮಾನಿಗಳು ಯಾರು ಭಯ ಪಡಬಾರದು. ಜಾಮೀನಿನ ಮೇಲೆ ಬಂದ ಮೇಲೆ ಸಿಐಡಿ ತನಿಖೆಗೆ ಸಹಕರಿಸುತ್ತಿಲ್ಲಾ ಅಂತ ಹೇಳ್ತಿದ್ದಾರೆ. ಆದ್ರೆ ಇದೆಲ್ಲವು ಸುಳ್ಳು. ರಾಜಕೀಯ ಕುತಂತ್ರದಿಂದ ಸಿಲುಕಿಸಿದ್ರೋ ಅವರಿಗೆ ಹೇಳ್ತೇನೆ. ಇಂತಹ ಇನ್ನು ಹತ್ತು ಸುಳ್ಳು ಕೇಸ್ ಹಾಕಿದ್ರು ನಾನು ಹೆದರಲ್ಲಾ. ನನ್ನ ಸಾಮಾಜಿಕ ಸೇವೆಯನ್ನು ನಿಲ್ಲಿಸೋದಿಲ್ಲಾ ಎಂದು ಹೇಳುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಕೆಲ ದಿನಗಳ ಹಿಂದೆ ರುದ್ರಗೌಡ ಪಾಟೀಲ್ ಸೇರಿದಂತೆ ಐವರ ಮನೆ ಮೇಲೆ ದಾಳಿ ನಡೆಸಿ ತಡರಾತ್ರಿವರೆಗೆ ಇಡಿ ಅಧಿಕಾರಿಗಳ ತಂಡ ಶೋಧ ನಡೆಸಿತ್ತು. ಬಳಿಕ ಆರೋಪಿ ರುದ್ರಗೌಡ ಪಾಟೀಲ್ ಮನೆಗೆ ಸಿಐಡಿ ಅಧಿಕಾರಿಗಳ ತಂಡ ಆಗಮಿಸಿದ್ದಾಗ ಅಧಿಕಾರಿಯನ್ನು ತಳ್ಳಿ ರುದ್ರಗೌಡ ಪರಾರಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಬಿಡುಗಡೆಯಾದ ವಿಡಿಯೋದಲ್ಲಿ ರುದ್ರಗೌಡ ನಾನು ಯಾರನ್ನೂ ತಳ್ಳಿ ಪರಾರಿಯಾಗಿಲ್ಲ ಎಂದು ಹೇಳಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:55 am, Sat, 21 January 23