Pramod Mutalik: ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಸೇರಿದಂತೆ ನಾಲ್ವರಿಗೆ ಸಮನ್ಸ್ ಜಾರಿ
2017ರಲ್ಲಿ ಯಾದಗಿರಿಯಲ್ಲಿ ನಡೆದಿದ್ದ ಹಿಂದೂ ಸಮಾವೇಶದಲ್ಲಿ ರಾಜಾಸಿಂಗ್ ಅವರಿಗೆ ಖಡ್ಗ ನೀಡಿ ಸತ್ಕರಿಸಲಾಗಿತ್ತು.
ಕಲಬುರ್ಗಿ: ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶ್ರೀರಾಮಸೇನೆಯ (Sri Rama Sene) ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Mutalik) ಮತ್ತು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ತೆಲಂಗಾಣದ (Telangana) ಘೋಶಾಮಹಲ್ ಕ್ಷೇತ್ರದ ಶಾಸಕ ರಾಜಾಸಿಂಗ್ ಠಾಕೂರ್ ಸೇರಿದಂತೆ ನಾಲ್ವರಿಗೆ ಸಮನ್ಸ್ ಜಾರಿಗೊಳಿಸಿದೆ. ಜೂನ್ 9ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಇವರಿಗೆ ಸೂಚಿಸಲಾಗಿದೆ. 2017ರಲ್ಲಿ ಯಾದಗಿರಿಯಲ್ಲಿ ನಡೆದಿದ್ದ ಹಿಂದೂ ಸಮಾವೇಶದಲ್ಲಿ ರಾಜಾಸಿಂಗ್ ಅವರಿಗೆ ಖಡ್ಗ ನೀಡಿ ಸತ್ಕರಿಸಲಾಗಿತ್ತು. ನಂತರದ ದಿನಗಳಲ್ಲಿ ಪ್ರಕರಣವನ್ನು ಯಾದಗಿರಿ ಜಿಲ್ಲಾ ನ್ಯಾಯಾಲಯದಿಂದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.
ಸ್ವಯಂಪ್ರೇರಿತ ದೂರು ದಾಖಲು
ಡಿಸೆಂಬರ್ 12, 2017ರಲ್ಲಿ ಕಲಬುರ್ಗಿಯಲ್ಲಿ ನಡೆದಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ತೆಲಂಗಾಣ ಶಾಸಕ ರಾಜಾಸಿಂಗ್ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅವರೊಂದಿಗೆ ಸೇರಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಇವರಿಬ್ಬರ ವಿರುದ್ಧವೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಬಿಜೆಪಿ ನಾಯಕ ವಿಜಯ್ ಪಾಟೀಲ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ‘ಅಖಂಡ ಭಾರತ ಸಾಧಿಸುವವರೆಗೆ ಹಿಂದೂ ಯುವಕರು, ಹಿಂದೂ ಯೋಧರಾಗಬೇಕು’ ಎಂದು ರಾಜಾಸಿಂಗ್ ಕೈಲಿ ಖಡ್ಗ ಝಳಪಿಸಿದ್ದರು ಎಂದು ಪೊಲೀಸಲು ಹೇಳಿದ್ದಾರೆ.
ಈ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ಡಿಸೆಂಬರ್ 17, 2017ರಂದು ಪ್ರತಿಕ್ರಿಯಿಸಿದ್ದ ಅಂದಿನ ಐಜಿಪಿ ಅಲೋಕ್ ಕುಮಾರ್, ‘ರಾಜಾಸಿಂಗ್ ಅವರು ಪ್ರಚೋದನಾಕಾರಿ ಮತ್ತು ವಿವಾದಾತ್ಮಕ ಭಾಷಣ ಮಾಡಿದ್ದಾರೆ. ಸಮಾರಂಭದಲ್ಲಿ ಸಿಂಗ್ ಅವರೊಂದಿಗೆ ಇನ್ನೂ ಇಬ್ಬರು ಖಡ್ಗ ಝಳಪಿಸಿದ್ದರು. ಕಾನೂನುಬಾಹಿರವಾಗಿ ಸಭೆ ನಡೆಸಿದ್ದು, ಸಾರ್ವಜನಿಕವಾಗಿ ಶಸ್ತ್ರಾಸ್ತ್ರ ಪ್ರದರ್ಶನ ಮತ್ತು ಸಮುದಾಯಗಳ ನಡುವೆ ವೈಷಮ್ಯ ಬಿತ್ತುವ ಪ್ರಯತ್ನಗಳನ್ನು ಗಮನಿಸಿ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Wed, 8 June 22