ಹೊಸ ವರ್ಷಕ್ಕೆ ಶುಭಸುದ್ದಿ: ಪುರಿ ಜಗನ್ನಾಥ, ದ್ವಾರಕಾ, ದಕ್ಷಿಣದ ಕ್ಷೇತ್ರಗಳ ಯಾತ್ರೆಗೆ ಸಹಾಯಧನ ಘೋಷಣೆ, ಇಲ್ಲಿದೆ ವಿವರ
ತೀರ್ಥಯಾತ್ರೆ, ದೇಗುಲ ದರ್ಶನಕ್ಕೆ ತೆರಳುವ ಕರ್ನಾಟಕದ ಭಕ್ತರಿಗೆ ಕಾಂಗ್ರೆಸ್ ಸರ್ಕಾರ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಿದೆ. ಸಬ್ಸಿಡಿ ಮೂಲಕ ಪುರಿ ಜಗನ್ನಾಥ, ದ್ವಾರಕಾ, ದಕ್ಷಿಣದ ಕ್ಷೇತ್ರಗಳ ಯಾತ್ರೆ ಆಯೋಜಿಸಿದೆ. ಯಾತ್ರೆ ಆರಂಭ ಯಾವಾಗ? ಎಷ್ಟು ಸಬ್ಸಿಡಿ ಸಿಗುತ್ತದೆ? ಯಾತ್ರಿಗಳಿಗೆ ಏನೆಲ್ಲ ಸೌಲಭ್ಯಗಳಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು, ಡಿಸೆಂಬರ್ 19: ಕರ್ನಾಟಕದ ಭಕ್ತರಿಗೆ, ತೀರ್ಥಯಾತ್ರಿಕರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸ ವರ್ಷ ಗಿಫ್ಟ್ ನೀಡಿದೆ. ಇದೇ ಮೊದಲ ಬಾರಿಗೆ ಮೂರು ಟೂರ್ ಪ್ಯಾಕೇಜ್ಗಳಿಗೆ ಸಬ್ಸಿಡಿ ಘೋಷಣೆ ಮಾಡಲಾಗಿದೆ. ಪುರಿ ಜಗನ್ನಾಥ, ದ್ವಾರಕಾ ಹಾಗೂ ದಕ್ಷಿಣದ ಕ್ಷೇತ್ರಗಳಿಗೆ ತೆರಳುವವರಿಗೆ ಸಹಾಯಧನ ಘೋಷಣೆ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.
ದಕ್ಷಿಣದ ತೀರ್ಥಯಾತ್ರಾ ಸ್ಥಳಗಳು ಯಾವುವೆಲ್ಲ?
ರಾಮೇಶ್ವರ, ಕನ್ಯಕುಮಾರಿ, ಮಧುರೈ, ತಿರುವನಂತಪುರಂಗೆ ಆರು ದಿನಗಳ ತೀರ್ಥಯಾತ್ರೆ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಒಟ್ಟು 25,000 ರೂ. ವೆಚ್ಚವಾಗುತ್ತದೆ. ಈ ಪೈಕಿ ಸರ್ಕಾರದಿಂದ 10,000 ರೂ. ಸಬ್ಸಿಡಿ ದೊರೆಯಲಿದೆ. 5,000 ರೂ. ಸಹಾಯಧನ ಸೇರಿ 15000 ರೂ. ಭರಿಸಲಾಗುತ್ತದೆ. ಯಾತ್ರಾರ್ಥಿಗಳು 10,000 ರೂ. ಮಾತ್ರ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದ್ವಾರಕಾ ಯಾತ್ರೆ, ಪುರಿ ಜಗನ್ನಾಥ ದರ್ಶನ ಪ್ಯಾಕೇಜ್ ವಿವರ
ದ್ವಾರಕಾ ನಾಗೇಶ್ವರ-ಸೋಮನಾಥ್-ತ್ರಯಂಬಕೇಶ್ವರ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್ ಇರಲಿದೆ. ಪುರಿ- ಕೊನಾರ್ಕ್, ಗಂಗಾಸಾಗರ್, ಕೊಲ್ಕತ್ತಾ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್ ಒಟ್ಟು ಮೊತ್ತ 32,500 ರೂ. ಆಗಿದೆ. ಈ ಪೈಕಿ 17,500 ರೂ. ಸರ್ಕಾರದಿಂದ ಭರಿಸಲಾಗುತ್ತದೆ. ಉಳಿದ 15,000 ರೂ. ಮಾತ್ರ ಯಾತ್ರಿಕರು ಪಾವತಿಸಬೇಕು.
ಏನೇನು ವಿಶೇಷ ಸೌಲಭ್ಯಗಳಿವೆ?
ಪ್ರಯಾಣಿಸುವಾಗ ಟ್ರೈನ್ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಆಹಾರವನ್ನು ನೀಡಲಾಗುತ್ತದೆ. ಈ ಪ್ಯಾಕೇಜ್ನಲ್ಲಿ 3ಟೈರ್ ಎಸಿ ರೈಲಿನಲ್ಲಿ ಪ್ರಯಾಣಿಸಬಹುದು. ಊಟ, ವಸತಿ, ಸ್ಥಳೀಯ ಸಾರಿಗೆ ಹಾಗೂ ದರ್ಶನ ವ್ಯವಸ್ಥೆ ಇರುತ್ತದೆ. ಯಾತ್ರಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ ಇರುತ್ತದೆ. ರೈಲಿನಲ್ಲಿ ವೈದ್ಯರು, ನರ್ಸ್ಗಳ ವ್ಯವಸ್ಥೆ ಮಾಡಲಾಗಿದೆ.
ಯಾತ್ರೆಯ ರೂಟ್ ಮ್ಯಾಪ್ ಹೇಗಿರಲಿದೆ?
ದಕ್ಷಿಣ ಯಾತ್ರಿಗಳು ಹತ್ತುವ ಹಾಗೂ ಇಳಿಯುವ ಸ್ಥಳಗಳು; ಬೆಂಗಳೂರು ಸರ್ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ಣಾಣ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಆಗಿವೆ.
ಯಾತ್ರೆಯ ದಿನಾಂಕ
ಯಾತ್ರೆ ಹೊರಡುವ ದಿನಾಂಕ: 25-1-2025 ಆಗಿದ್ದು ವಾಪಸ್ ಬರುವ ದಿನಾಂಕ 30-1-2025 ಆಗಿದೆ.
ಪುರಿ ಜಗನ್ನಾಥ ದರ್ಶನ ಹಾಗೂ ದ್ವಾರಕಾ ಯಾತ್ರಿಗಳು ಹತ್ತುವ ಮತ್ತು ಇಳಿಯುವ ಸ್ಥಳಗಳು; ಬೆಂಗಳೂರು ಸರ್ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಬೆಳಗಾವಿ.
ಇದನ್ನೂ ಓದಿ: ಸಿಬ್ಬಂದಿ ಸುರಕ್ಷತೆಗಾಗಿ ಹೊಸ ಹೆಜ್ಜೆ ಇಟ್ಟ ಬೆಂಗಳೂರಿನ ಜಯದೇವ ಆಸ್ಪತ್ರೆ..!
ದ್ವಾರಕಾ ಯಾತ್ರೆ ಹೊರಡುವ ದಿನಾಂಕ 06-1-2025 ಆಗಿದ್ದು, ಹಿಂತಿರುಗುವ ದಿನಾಂಕ 13-1-2025 ಆಗಿದೆ. ಪುರಿಜಗನ್ನಾಥ ದರ್ಶನಕ್ಕೆ ಹೊರಡುವ ದಿನಾಂಕ ದಿನಾಂಕ: 3-2-2025 ಆಗಿದ್ದು, ವಾಪಸಾಗುವ ದಿನಾಂಕ 10-02-2025 ಆಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ