ಮೈಸೂರಿನಲ್ಲಿ ಪ್ರತಾಪ್ ಸಿಂಹಗಿಂತ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ: ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಚ್ಚರಿ ಹೇಳಿಕೆ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. ಬಿಜೆಪಿಯ ಹಲವು ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್ ಕೈತಪ್ಪಿದೆ. ಅದರಲ್ಲೂ ಮುಖ್ಯವಾಗಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ನಿರಾಸೆಯಾಗಿದೆ. ಹೈಕಮಾಂಡ್ ಈ ಸಲ ಪ್ರತಾಪ್ ಸಿಂಹ ಬದಲಿಗೆ ಯದುವೀರ್ ಅವರಿಗೆ ಟಿಕೆಟ್ ನೀಡಿದೆ. ಆದ್ರೆ, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಯಾವುದೇ ನಾಯಕರು ಸೂಕ್ತ ಕಾರಣ ನೀಡುತ್ತಿಲ್ಲ. ಇನ್ನು ಈ ಬಗ್ಗೆ ಸ್ವತಃ ಕರ್ನಾಟಕ ಬಿಜೆಪಿ ಲೋಕಸಭಾ ಚುನಾವಣೆ ಉಸ್ತಾವರಿ ರಾಧಾ ಮೋಹನ್‌ದಾಸ್ ಅಗರ್ವಾಲ್ ಮಾತನಾಡಿದ್ದು, ಅದು ಈ ಕೆಳಗಿನಂತಿದೆ.
ಮೈಸೂರು, (ಮಾರ್ಚ್ 24): ಸಂಸದ ಪ್ರತಾಪ್ ಸಿಂಹ(Pratap Simha) ಅವರಿಗೆ ಟಿಕೆಟ್ ತಪ್ಪಿ ಸಾಕಷ್ಟು ದಿನಗಳಾಗಿದ್ದರೂ ಅವರಿಗೆ ಹೈಕಮಾಂಡ್ ಅವಕಾಶ ನಿರಾಕರಿಸಲು ಕಾರಣವೇನು ಎನ್ನುವುದು ನಿಗೂಢವಾಗಿದೆ. ಹೈಕಮಾಂಡ್ ಕೂಡ ಯುವ ಸಂಸದನಿಗೆ ಟಿಕೆಟ್ ನೀಡದಿರಲು ಯಾವ ಕಾರಣವನ್ನೂ ನೀಡಲಿಲ್ಲ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವ ಸಂದೇಶವನ್ನಷ್ಟೇ ರವಾನಿಸಿದೆ. ಇನ್ನು ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿರುವ ಬಗ್ಗೆ ಇಂದು (ಮಾರ್ಚ್ 24) ಮೈಸೂರಿನಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್ವಾಲ್(Radha Mohan Das Agarwal) ಮಾತನಾಡಿದ್ದು, ಪ್ರತಾಪ್‌ಸಿಂಹಗೆ ಟಿಕೆಟ್ ತಪ್ಪಿದ್ದಕ್ಕೆ ನಿರ್ದಿಷ್ಟವಾದ ಕಾರಣ ಏನೂ ಇಲ್ಲ. ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹಗಿಂತ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ ಎಂದು ಸ್ಪಷ್ಟಪಡಿಸಿದರು.
ನಮಗೆ ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹಗಿಂತಲೂ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ. ಯದುವಂಶ ಸೇವೆ ಇಡೀ ದೇಶಕ್ಕೆ ಗೊತ್ತಿದೆ. ಈಗ ಅವರು ಪ್ರಜಾಪ್ರಭುತ್ವದ ಭಾಗ ಆಗಲು ಚುನಾವಣೆಗೆ ಬಂದಿದ್ದಾರೆ. ಇವರಿಂಗಿತಲೂ ಉತ್ತಮ ಅಭ್ಯರ್ಥಿ ಬೇಕಾ. ಯದುವೀರ್ ನಮ್ಮ ಸ್ಟಾರ್ ಕ್ಯಾಂಪೇನರ್. ಅವರನ್ನು ಎಲ್ಲಾ ಕಡೆಗಳಲ್ಲಿ ಬಳಸಿಕೊಳ್ಳುತ್ತೇವೆ ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಪ್ರತಾಪ್ ಸಿಂಹಗಿಂತ ಯದುವೀರ್ ಒಳ್ಳೆಯ ಅಭ್ಯರ್ಥಿ ಎನ್ನುವ ಅರ್ಥದಲ್ಲಿ ಹೇಳಿದರು.
ಇದನ್ನೂ ಓದಿ: ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿ ಭೇಟಿ ಬಳಿಕ ಒಂದು ಮಹತ್ವದ ತೀರ್ಮಾನಕ್ಕೆ ಬಂದ ಪ್ರತಾಪ್ ಸಿಂಹ
ಪ್ರತಾಪ್ ಸಿಂಹ ಕೂಡ ನಮ್ಮ ಸ್ಟಾರ್ ಪ್ರಚಾರಕ. ಅದಕ್ಕಿಂತಲೂ ಅವರ ಬಗ್ಗೆ ಇನ್ನೇನೂ ಹೇಳಬೇಕು. ಪ್ರತಾಪ್ ಸಿಂಹಗೆ ಸ್ಟಾರ್ ಪ್ರಚಾರಕ ಸ್ಥಾನವೇ ಕೊಟ್ಟಿದ್ದೇವೆ. ಇದ್ದಕ್ಕಿಂತ ಇನ್ನೇನು ಬೇಕು ಹೇಳಿ. ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ್ದಕ್ಕೆ ನಿರ್ಧಿಷ್ಟವಾದ ಕಾರಣ ಏನು ಇಲ್ಲ ಎಂದರು.
ಇನ್ನು ರಾಜ್ಯ ಬಿಜೆಪಿಯಲ್ಲಿನ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಬಿಜೆಪಿಯಲ್ಲಿ ಯಾವುದೇ ಬಂಡಾಯ ಇಲ್ಲ. ಕೆ.ಎಸ್.ಈಶ್ವರಪ್ಪ ನಮ್ಮ ಪಕ್ಷದ ದೊಡ್ಡ ನಾಯಕ. ಈಶ್ವರಪ್ಪ ಪ್ರಚಾರ ಶುರು ಮಾಡಿದ್ದಾರೆ. ಪ್ರಚಾರ ಮಾಡಲಿ ಬಿಡಿ, ಎಲ್ಲ ಸಮಸ್ಯೆ ಬಗೆಹರಿಯುತ್ತೆ. ಸಂಸದೆ ಸುಮಲತಾ ಅವರು ನಮ್ಮ ಪಕ್ಷದ ಬೆಂಬಲಿಗರು. ಸುಮಲತಾ ನಮ್ಮ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಪ್ರತಾಪ್ ಸಿಂಹ ಬೆಂಬಲಿಗರ ಪ್ರಶ್ನೆಗೆ ಸಿಗದ ಸೂಕ್ತ ಕಾರಣ
ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಲು ಕೆಲವು ಕಾರಣಗಳಿರುತ್ತವೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಈಗಾಗಲೇ ಇಂತಹ ವಿಶ್ಲೇಷಣೆ ನಡೆದಿದೆ. ಆದರೆ, ಮೈಸೂರು-ಕೊಡಗು ಕ್ಷೇತ್ರದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಟಿಕೆಟ್ ಹಿಡಿದು ಬಂದಾಗ ಸ್ವತಃ ಸಂಸದ ಪ್ರತಾಪ್ ಸಿಂಹ ಹಾಗೂ ಅವರ ಬೆಂಬಲಿಗರು ಕಕ್ಕಾಬಿಕ್ಕಿಯಾದರು. ನನಗೆ ಟಿಕೆಟ್ ಕೈ ತಪ್ಪಲು ಏನು ಕಾರಣ ಎಂದು ಪ್ರತಾಪ್ ಸಿಂಹ ಕೇಳಿದರೂ ಇಲ್ಲಿ ತನಕ ಹೈಕಮಾಂಡ್‌ನಿಂದಾಗಲಿ, ರಾಜ್ಯದ ನಾಯಕರಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಯಾವುದೇ ಕಾರಣ ಇಲ್ಲದೆ ಒಬ್ಬ ಸಂಸದನನ್ನು ಬದಲಾಯಿಸುವುದು ಸುಲಭವಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಆತ್ಮೀಯ ಸಂಬಂಧ ಇದ್ದರೂ ಮೂರನೇ ಬಾರಿಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಅಷ್ಟೊಂದು ಬಲವಾದ ಪ್ರಭಾವ ಯಾವುದು ಎನ್ನುವ ಚರ್ಚೆ ಕ್ಷೇತ್ರದಲ್ಲಿ ನಡೆಯುತ್ತಿದೆಯಾದರೂ ಹೈಕಮಾಂಡ್ ಈ ಕುರಿತು ತುಟಿ ಬಿಚ್ಚಿಲ್ಲ. ಪ್ರತಾಪ್ ಸಿಂಹ ಕ್ಷೇತ್ರಕ್ಕೆ ಹೊಸಬರು. ಆದರೂ ಅವರಿಗೆ ಟಿಕೆಟ್ ನೀಡಿ ಎರಡು ಬಾರಿ ಗೆಲ್ಲಿಸಿದ್ದೇವೆ. ಇದೀಗ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಯುವಕರು. ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿಅಭ್ಯರ್ಥಿ ಯಾರು ಎನ್ನುವುದಕ್ಕಿಂತ ಬಿಜೆಪಿ ಅಭ್ಯರ್ಥಿ ಎನ್ನುವುದಷ್ಟೇ ಮುಖ್ಯ. ನಮ್ಮ ಮುಂದಿರುವುದು ನರೇಂದ್ರ ಮೋದಿ ಎಂದು ಬಿಜೆಪಿಯ ಪ್ರಮುಖ ನಾಯಕರ ಮಾತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ