Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Breaking Kannada News Highlights: ನ.5 ರಂದು ಬಾಬಾ ಬುಡನ್‌ಸ್ವಾಮಿ‌ ದರ್ಗಾದಲ್ಲಿ ದತ್ತಮಾಲಾ‌ ಅಭಿಯಾನ‌

ಆಯೇಷಾ ಬಾನು
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 04, 2023 | 10:47 PM

Karnataka Breaking News Highlights: ಸಿಎಂ ಆಗಿ ನಾನೇ ಮುಂದುವರೀತಿನಿ ಎಂದು ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಯುಟರ್ನ್‌ ಹೊಡೆದಿದ್ದಾರೆ. ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದ್ರೆ ಬದ್ಧ. ನಾನು ಇದನ್ನೇ ಹೇಳಿದ್ದೇನೆ ಎಂದಿದ್ದಾರೆ. ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಗಳು ಶುರುವಾಗಿವೆ. ಇದರ ಜೊತೆಗೆ ಇಂದಿನ ರಾಜ್ಯ ಸುದ್ದಿಗಳಿಗಾಗಿ ಟಿವಿ9 ಫಾಲೋ ಮಾಡಿ.

Karnataka Breaking Kannada News Highlights: ನ.5 ರಂದು ಬಾಬಾ ಬುಡನ್‌ಸ್ವಾಮಿ‌ ದರ್ಗಾದಲ್ಲಿ ದತ್ತಮಾಲಾ‌ ಅಭಿಯಾನ‌
ನ.5 ರಂದು ಬಾಬಾ ಬುಡನ್‌ಸ್ವಾಮಿ‌ ದರ್ಗಾದಲ್ಲಿ ದತ್ತಮಾಲಾ‌ ಅಭಿಯಾನ‌

Karnataka Breaking News: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್- ಪಾಕ್ ನಡುವೆ ವಿಶ್ವಕಪ್ ಪಂದ್ಯ ನಡೆಯಲಿದೆ. ಹೀಗಾಗಿ ಬೆಂಗಳೂರು ಸಂಚಾರ ಪೊಲೀಸರು ಟ್ರಾಫಿಕ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ವಾಹನ ದಟ್ಟಣೆ ಹೆಚ್ಚಾಗುವ ಹಿನ್ನೆಲೆ ಇಂದು ಬೆಳಗ್ಗೆ 7ರಿಂದ ರಾತ್ರಿ 11ರವರೆಗೆ ಕೆಲ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಿದ್ದಾರೆ. ಇನ್ನು ಬೆಂಗಳೂರಲ್ಲಿ ನ.05ರಂದು ನಮ್ಮ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಎಂಜಿ ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗೆ ಕೆಲಕಾಲ ಮೆಟ್ರೋ ಸೇವೆ ಸ್ಥಗಿತವಾಗಲಿದೆ. ವಿವೇಕಾನಂದ-ಇಂದಿರಾನಗರದವರೆಗೆ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಬೆಳಗ್ಗೆ 9 ಗಂಟೆವರೆಗೆ ಮೆಟ್ರೋ ಓಡಾಡುವುದಿಲ್ಲ ಎಂದು ಬಿಎಂಆರ್​​ಸಿಎಲ್​​​ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಮತ್ತೊಂದೆಡೆ ಹಾಸನಾಂಬೆ ದರ್ಶನಕ್ಕೆ ಜನ ಸಾಗರವೇ ಹರಿದು ಬರುತ್ತಿದೆ. ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಮಾಡ್ತಿದ್ದಾರೆ. ಇಂದು ಬೆಳಿಗ್ಗೆ5 ಗಂಟೆಯಿಂದಲೇ ದರ್ಶನ ಆರಂಭವಾಗಿದೆ. ಇದೆಲ್ಲದರ ಜೊತೆಗೆ ಅಪರಾಧ, ರಾಜಕೀಯ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.

LIVE NEWS & UPDATES

The liveblog has ended.
  • 04 Nov 2023 10:14 PM (IST)

    Karnataka Breaking News Live: ಸಿಡಿಲು ಬಡಿದು ಮನೆಗಳಲ್ಲಿದ್ದ ಎಲೆಕ್ಟ್ರಿಕಲ್ ಉಪಕರಣಗಳಿಗೆ ಹಾನಿ

    ಹಾಸನ: ಸಿಡಿಲು ಬಡಿದು ಮನೆಗಳಲ್ಲಿದ್ದ ಎಲೆಕ್ಟ್ರಿಕಲ್ ಉಪಕರಣಗಳಿಗೆ ಹಾನಿಯಾದ ಘಟನೆ ಜಿಲ್ಲೆಯ ಆಲೂರು ಪಟ್ಟಣದಲ್ಲಿ ನಡೆದಿದೆ. ಹಲವು ಮನೆಗಳ ಟಿವಿ, ಫ್ರಿಡ್ಜ್, ಇತರೆ ಎಲೆಕ್ಟ್ರಿಕಲ್ ಉಪಕರಣಗಳಿಗೆ ಹಾನಿಯಾಗಿದ್ದು, ಪಟ್ಟಣದ ಐಟಿಐ ಕಾಲೇಜಿನ ಆವರಣದಲ್ಲಿ ತೆಂಗಿನ ಮರ ಹೊತ್ತಿಉರಿದಿದೆ. ಕೋಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ‌ ನಂದಿಸಿದ್ದಾರೆ.

  • 04 Nov 2023 09:56 PM (IST)

    Karnataka Breaking News Live: ಜೀಪ್​ನ ಟ್ರ್ಯಾಲಿ ಪಲ್ಟಿಯಾಗಿ ಓರ್ವ ಕಾರ್ಮಿಕ ಸ್ಥಳದಲ್ಲೇ ದುರ್ಮರಣ

    ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ವಾಟೆಗುಂಡಿ ಗ್ರಾಮದ ಸಮೀಪ ಜೀಪ್​ನ ಟ್ರ್ಯಾಲಿ ಪಲ್ಟಿಯಾಗಿ ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ನಾಲ್ವರು ಕಾರ್ಮಿಕರಿಗೆ ಗಂಭೀರ ಗಾಯವಾಗಿದ್ದು, ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಲಿಂಗಯ್ಯ(55)ಮೃತ ರ್ದುದೈವಿ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • 04 Nov 2023 09:20 PM (IST)

    Karnataka Breaking News Live:ಡಿಕೆ ಸಿಎಂ ಆದ್ರೆ JDS ಶಾಸಕರ ಬೆಂಬಲ; ಕುಮಾರಸ್ವಾಮಿ ಹೇಳೀಕೆಗೆ ಟಾಂಗ್​ ಕೊಟ್ಟ ಡಿಸಿಎಂ

    ಬೆಂಗಳೂರು: ಡಿಕೆ ಶಿವಕುಮಾರ್​ ಸಿಎಂ ಆದ್ರೆ JDS ಶಾಸಕರ ಬೆಂಬಲವಿದೆ ಎಂದು ಹೇಳಿಕೆ ವಿಚಾರ ‘ ಹೆಚ್‌.ಡಿ.ಕುಮಾರಸ್ವಾಮಿ ಅವರ ಪ್ರೀತಿ ಏನು ಎಂದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟಾಂಗ್​ ಕೊಟ್ಟಿದ್ದಾರೆ. ದಯವಿಟ್ಟು ನಾನು ಹೆಚ್‌.ಡಿ.ಕುಮಾರಸ್ವಾಮಿಗೆ ಮನವಿ ಮಾಡುತ್ತೇನೆ. 136 ಶಾಸಕರಿದ್ದೇವೆ, ಸಾಕಷ್ಟು ಬೆಂಬಲ ಇದೆ, ನಿಮ್ಮ ಪಕ್ಷ NDAನಲ್ಲಿದೆ. ಎನ್‌ಡಿಎನಲ್ಲಿದ್ದು, ಕಾಂಗ್ರೆಸ್ ಪಾರ್ಟಿ ಬಗ್ಗೆ ಏಕೆ ಮಾತನಾಡುತ್ತೀರಾ? ಎಂದಿದ್ದಾರೆ.

  • 04 Nov 2023 08:00 PM (IST)

    Karnataka Breaking News Live: ತಮ್ಮ ಪರ ಬ್ಯಾಟಿಂಗ್‌ ಬೀಸಿದ ಶಾಸಕರ ವಿರುದ್ಧ ಡಿಸಿಎಂ ಡಿಕೆ ಫುಲ್ ಗರಂ

    ಬೆಂಗಳೂರು: ಯಾರಾದ್ರೂ ಶಾಸಕರು ನನ್ನ ಪರ ಮಾತಾಡಿದ್ರೆ ನೋಟಿಸ್ ಜಾರಿ ಮಾಡುವೆ ಎಂದು ತಮ್ಮ ಪರ ಬ್ಯಾಟಿಂಗ್‌ ಬೀಸಿದ ಶಾಸಕರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್​ ಫುಲ್ ಗರಂ ಆಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ ಪಕ್ಷದಲ್ಲಿ ಶಿಸ್ತು ಇರಬೇಕು, ನನಗೆ ಯಾರ ಶಾಸಕರ ಬೆಂಬಲವೂ ಬೇಡ ಎಂದರು.

  • 04 Nov 2023 07:05 PM (IST)

    Karnataka Breaking News Live: ಹೊನ್ನಾಳಿ ತಾಲೂಕಿನಲ್ಲಿ ಬಿಜೆಪಿ ಮಂಡಲ ವತಿಯಿಂದ ಬರ ಅಧ್ಯಯನ

    ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಬಿಜೆಪಿ ಮಂಡಲ ವತಿಯಿಂದ ಬರ ಅಧ್ಯಯನ ನಡೆಸಲಾಯಿತು. ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬರ ವೀಕ್ಷಣೆ ಮಾಡಲಾಯಿತು. ಈ ವೇಳೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಹೊನ್ನಾಳಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಜೆ.ಕೆ.ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • 04 Nov 2023 06:24 PM (IST)

    Karnataka Breaking News Live: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

    ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಹೊನ್ನಿಗಾನಹಳ್ಳಿ ಗ್ರಾಮದ ಬಳಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ನಡೆದಿದೆ. ಮರೀಗೌಡ(75) ಕಾಡಾನೆಗೆ ಸಾವನಪ್ಪಿದ ದುರ್ಧೈವಿ. ಜಮೀನನಲ್ಲಿ‌ ಕೆಲಸ ಮಾಡುವಾಗ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದ್ದು, ಈ ದುರ್ಘಟನೆ ನಡೆದಿದೆ. ಈ ಘಟನೆ ಕೋಡಿಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

  • 04 Nov 2023 06:22 PM (IST)

    Karnataka Breaking News Live: ಅರ್ಧ ಗಂಟೆ ಸುರಿದ ಮಳೆಗೆ ಕೆರೆಯಂತಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನ ಸರ್ವೀಸ್‌ ರಸ್ತೆ

    ರಾಮನಗರ: ಅರ್ಧ ತಾಸು ಸುರಿದ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನ ಸರ್ವೀಸ್‌ ರಸ್ತೆ ಕೆರೆಯಂತಾಗಿದೆ.  ಹೌದು, ರಾಮನಗರ(Ramanagara) ಜಿಲ್ಲೆಯ ಬಿಡದಿ ಹೋಬಳಿಯ ತಾತಪ್ಪನದೊಡ್ಡಿ ಬಳಿ ಮಳೆ ನೀರು ನದಿಯಂತೆ ಹರಿಯುತ್ತಿದೆ. ಹೈವೇ ಚರಂಡಿಯಲ್ಲಿ ಸರಿಯಾಗಿ ಕೆಲಸ ಮಾಡದ‌ ಪರಿಣಾಮ ರಸ್ತೆಯಲ್ಲಿ ನೀರು ನಿಂತಿದೆ.

  • 04 Nov 2023 05:43 PM (IST)

    Karnataka Breaking News Live: ನಾಳೆ ಬಾಬಾ ಬುಡನ್‌ಸ್ವಾಮಿ‌ ದರ್ಗಾದಲ್ಲಿ ದತ್ತಮಾಲಾ‌ ಅಭಿಯಾನ‌; ಬಿಗಿ ಬಂದೋಬಸ್ತ್​

    ಚಿಕ್ಕಮಗಳೂರು: ನಾಳೆ ಬಾಬಾ ಬುಡನ್‌ಸ್ವಾಮಿ‌ ದರ್ಗಾದಲ್ಲಿ ದತ್ತಮಾಲಾ‌ ಅಭಿಯಾನ‌ ನಡೆಯಲಿದೆ. ಈ ಹಿನ್ನಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ‌ ಬಂದೋಬಸ್ತ್ ಮಾಡಲಾಗಿದೆ. ಹೌದು, ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ‌ ದರ್ಗಾ ಸೇರಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಜಿಲ್ಲೆಯ ಗಡಿಭಾಗ ಸೇರಿ 26 ಚೆಕ್‌ಪೋಸ್ಟ್, 49 ಸೆಕ್ಟರ್ ಆಫೀಸರ್ ನೇಮಿಸಲಾಗಿದೆ. ಸೂಕ್ಷ್ಮ‌, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ, ಡ್ರೋನ್‌ ಕಣ್ಗಾವಲು ಇರಿಸಿದ್ದು, ಮುನ್ನೆಚ್ಚರಿಕೆಯಿಂದ ಚಿಕ್ಕಮಗಳೂರಿನ M.G.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರಿಂದ ಪಥಸಂಚಲನ ಮಾಡಲಾಗಿದೆ.

  • 04 Nov 2023 04:46 PM (IST)

    Karnataka Breaking News Live: ಐಟಿ, ಇಡಿ, ಸಿಬಿಐ ಕೇಸ್​ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ; ಡಿಕೆಶಿ

    ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ಗೆ ನೋಟಿಸ್​ ವಿಚಾರ ‘ ಐಟಿ, ಇಡಿ, ಸಿಬಿಐ ಕೇಸ್​ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ‘ನಾನೇನು ತಪ್ಪು ಮಾಡಿಲ್ಲ, ನಾನೇನು ಭಯಪಡಲ್ಲ. ನಾನು, ನನ್ನ ಪತ್ನಿ ಅಕೌಂಟ್ ಜನರ ಮುಂದಿದೆ. ತೆರಿಗೆ ಕಟ್ಟುತ್ತೇವೆ ಎಂದರು.

  • 04 Nov 2023 04:29 PM (IST)

    Karnataka Breaking News Live: ಬರ ಪೀಡಿತ ತಾಲೂಕುಗಳ ಪಟ್ಟಿಗೆ ಮತ್ತೆ ಏಳು ತಾಲೂಕುಗಳ ಸೇರ್ಪಡೆ

    ಬೆಂಗಳೂರು: ಬರ ಪೀಡಿತ ತಾಲೂಕುಗಳ ಪಟ್ಟಿಗೆ ಮತ್ತೆ ಏಳು ತಾಲೂಕುಗಳ ಸೇರ್ಪಡೆ ಮಾಡಲಾಗಿದೆ. ಹೌದು, ಬೀದರ್ ಜಿಲ್ಲೆಯ ಔರಾದ್, ಬೀದರ್, ಚಿಟಗುಪ್ಪಾ, ಹುಮ್ನಾಬಾದ್, ಕಮಲನಗರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು, ವಿಜಯಪುರ ಜಿಲ್ಲೆಯ ತಿಕೋಟಾವನ್ನು ಕಂದಾಯ‌ ಇಲಾಖೆಯಿಂದ ಆದೇಶಿಸಲಾಗಿದೆ.

  • 04 Nov 2023 04:16 PM (IST)

    Karnataka Breaking News Live:ಬೆಂಗಳೂರಿನ ದೊಡ್ಡಗುಂಟಾದಲ್ಲಿ ದಸರಾ ಮಹೋತ್ಸವ;ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ

    ಬೆಂಗಳೂರು: ದೊಡ್ಡಗುಂಟಾದಲ್ಲಿ ದಸರಾ ಮಹೋತ್ಸವ ಹಿನ್ನೆಲೆ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೆ ಪೊಲೀಸ್ ಆಯುಕ್ತ ದಯಾನಂದ ಆದೇಶಿದ್ದಾರೆ. ನಾಳೆ(ನ.05) ಸಂಜೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಜೊತೆಗೆ ಬೆಳಗ್ಗೆ 6 ಗಂಟೆಯಿಂದ ನಾಳೆ ಸಂಜೆ 6ರವರೆಗೆ ‌ಮದ್ಯಮಾರಾಟವನ್ನು ಕೂಡ ನಿಷೇಧ ಮಾಡಲಾಗಿದೆ.

  • 04 Nov 2023 03:57 PM (IST)

    Karnataka Breaking News Live: ಮಾಜಿ ಸಿಎಂ ಬಿಎಸ್ವೈ ಮನೆಗೆ ಯದುವೀರ್ ದಂಪತಿ ಭೇಟಿ

    ಶಿವಮೊಗ್ಗ: ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ಮನೆಗೆ ಯದುವೀರ್ ದಂಪತಿ ಭೇಟಿ ನೀಡಿದ್ದಾರೆ. ವಿಎಸ್ಐಎಲ್ ಕಾರ್ಯಕ್ರಮದ ಪ್ರವಾಸದಲ್ಲಿರುವ ಯದುವೀರ್ ದಂಪತಿ, ಶಿವಮೊಗ್ಗ ನಗರದ ವಿನೋಬ ನಗರದಲ್ಲಿರುವ ಬಿಎಸ್​ವೈ ಮನೆಗೆ ಭೇಟಿ ನೀಡಿ, ಮಧ್ಯಾಹ್ನದ ಭೋಜನ ಮಾಡಲಿದ್ದಾರೆ. ಈ ವೇಳೆ ಶಾಸಕ ಬಿ.ವೈ ವಿಜಯೇಂದ್ರ ,ಸಂಸದ ಬಿ.ವೈ ರಾಘವೇಂದ್ರ ಉಪಸ್ಥಿತರಿದ್ದಾರೆ.

  • 04 Nov 2023 03:30 PM (IST)

    Karnataka Breaking News Live:ಡಿಕೆ ಶಿವಕುಮಾರ್​ ನಾಳೆ ಸಿಎಂ ಆಗೋದಾದ್ರೆ JDS ಶಾಸಕರ ಬೆಂಬಲ; ಹೆಚ್​ಡಿ ಕುಮಾರಸ್ವಾಮಿ

    ಬೆಂಗಳೂರು: ಡಿ.ಕೆ ಶಿವಕುಮಾರ್​ ನಾಳೆ ಸಿಎಂ ಆಗೋದಾದ್ರೆ JDS ಶಾಸಕರ ಬೆಂಬಲ ಕೊಡಿಸುವುದಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ಆಫರ್​ ಕೊಟ್ಟಿದ್ದಾರೆ. ಹೌದು, ಅವರೇ ಸಿಎಂ ಆಗುವುದಾದರೆ ನಮ್ಮ 19 ಜನ ಶಾಸಕರ ಬೆಂಬಲ‌ ಇದೆ ಎಂದರು.

  • 04 Nov 2023 02:54 PM (IST)

    Karnataka Breaking News Live: ಜೆಡಿಎಸ್ ಪಕ್ಷದಿಂದ 31 ಜಿಲ್ಲೆಯ ಬರ ಆಧ್ಯಯನಕ್ಕೆ 24 ತಂಡ ರಚನೆ

    ಬೆಂಗಳೂರು: ಜೆಡಿಎಸ್ ಪಕ್ಷದಿಂದ ಬರ ಅಧ್ಯಯನ ತಂಡ ರಚನೆ ಮಾಡಲಾಗಿದೆ. ಹೌದು, 31 ಜಿಲ್ಲೆಯ ಬರ ಆಧ್ಯಯನಕ್ಕೆ 24 ತಂಡ ರಚನೆ ಮಾಡಿದ್ದು, 1) ಮೈಸೂರಿಗೆ ಜಿ.ಡಿ.ದೇವೇಗೌಡ, ಸಾರಾ ಮಹೇಶ್, ಮಹದೇವ್,ಅಶ್ವಿನ್ ಕುಮಾರ್, ಮಂಜುನಾಥ್​, 2) ಮಂಡ್ಯ- ಟಿ.ಸಿ.ತಮಣ್ಣ, ಜಿಲ್ಲಾಧ್ಯಾಕ್ಷ ರಮೇಶ್ ಗೌಡ,ಡಾ.ರವೀಂದ್ರ ಶ್ರೀಕಂಠಯ್ಯ,ಸುರೇಶ್ ಗೌಡ, 3)ಹಾಸನ- ಶಾಸಕರಾದ ಎ.ಮಂಜು, ಸ್ವರೂಪ್,ಸಿ.ಎನ್.ಬಾಲಕೃಷ್ಣ 4) ಶಿವಮೊಗ್ಗ- ಶಾಸಕರಾದ‌ ಶಾರದ ಪಿ ನಾಯ್ಕ್, ಪ್ರಸನ್ನ ಕುಮಾರ್, 5) ಚಿಕ್ಕಮಗಳೂರು- ವೈ ಎಸ್ ವಿ ದತ್ತ, ಬೋಜೆಗೌಡ,ಸುಧಾಕರ್ ಶೆಟ್ಟಿ, 6)ಬೆಂಗಳೂರು- ರಮೇಶ್ ಗೌಡ, ದಾಸರಹಳ್ಳಿ ಮಂಜುನಾಥ, ಶರವಣ, ಜವರಾಯಿಗೌಡ ಸೇರಿ 31 ಜಿಲ್ಲೆಯ ಬರ ಅಧ್ಯಯನ ತಂಡ ರಚನೆ ಮಾಡಲಾಗಿದೆ.

  • 04 Nov 2023 02:27 PM (IST)

    Karnataka Breaking News Live: FDA ಪರೀಕ್ಷೆ ಅಕ್ರಮ ನಂತರ ಎಚ್ಚೆತ್ತ ಜಿಲ್ಲಾಡಳಿತ, ಪೊಲೀಸ್ ಇಲಾಖೆ

    ಕಲಬುರಗಿ: ಕೆಇಎ ನಡೆಸಿದ FDA ಪರೀಕ್ಷೆಯ ಅಕ್ರಮ ನಂತರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತಿದೆ. ಇಂದು ಕೆಪಿಎಸ್​ಸಿ ಗ್ರೂಪ್​ಗೆ ನಡೆಯುತ್ತಿರುವ ಪರೀಕ್ಷೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನು ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ. ಇನ್ನು ಒಂದು ಗಂಟೆ ಮುಂಚೆಯೇ ಪರೀಕ್ಷಾ ಕೇಂದ್ರಕ್ಕೆ ಬಂದವರನ್ನೂ ಕೂಡ ಪೊಲೀಸರು ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದಾರೆ. ಒಬ್ಬೊಬ್ಬ ಪರೀಕ್ಷಾರ್ಥಿಗಳನ್ನ 4 ಬಾರಿ ತಪಾಸಣೆ ಮಾಡಲಾಗುತ್ತಿದೆ.

  • 04 Nov 2023 01:42 PM (IST)

    Karnataka Breaking News Live: ಈ ಸರ್ಕಾರ 5 ವರ್ಷ ಪೂರೈಸಲ್ಲ, ಪತನವಾಗಲಿದೆ -ಮುರುಗೇಶ್​ ನಿರಾಣಿ

    ಕಾಂಗ್ರೆಸ್ ಪಕ್ಷದಲ್ಲಿ ಎರಡಲ್ಲ, ನಾಲ್ಕು ಬಣಗಳಿವೆ. ಕಾಂಗ್ರೆಸ್​ನವರು ಹೇಳೋದು ಒಂದು ಮಾಡೋದು ಇನ್ನೊಂದು. 4 ಡಿಸಿಎಂ ಸ್ಥಾನ ಕೇಳುತ್ತಿದ್ದಾರೆ, ಸಿಎಂ ವಿಚಾರದಲ್ಲೂ ಗೊಂದಲವಿದೆ. ಈ ಸರ್ಕಾರ 5 ವರ್ಷ ಪೂರೈಸಲ್ಲ, ಪತನವಾಗಲಿದೆ ಎಂದು ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ನಿರಾಣಿ ಮಾಜಿ ಸಚಿವ ಮುರುಗೇಶ್​ ನಿರಾಣಿ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ಜೊತೆ 50 ಜನ ಸಂಪರ್ಕದಲ್ಲಿದ್ದಾರೆ. ಈ ಸರ್ಕಾರವನ್ನು ನಾವು ಕೆಡವುದಿಲ್ಲ, ತಾನಾಗಿಯೇ ಪತನವಾಗುತ್ತೆ. ಯಾವಾಗ ಸರ್ಕಾರ ಪತನಾಗುತ್ತದೆ ಎಂದು ಕಾದು ನೋಡಿ ಎಂದರು.

  • 04 Nov 2023 01:27 PM (IST)

    Karnataka Breaking News Live: ಹಾಸನಾಂಬೆ ದೇಗುಲದ ಆವರಣದಲ್ಲಿ ಜಿಲ್ಲಾಧಿಕಾರಿಗೆ ಶಾಸಕ ಸ್ವರೂಪ್ ತರಾಟೆ

    ಹಾಸನಾಂಬೆ ಉತ್ಸವದಲ್ಲಿ ಶಾಸಕ ಸ್ವರೂಪ್ ಕಡೆಗಣಿಸಿ ಪೂಜೆೆಯಲ್ಲಿ ಡಿಸಿ ಸತ್ಯಭಾಮ ದಂಪತಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆ ದೇಗುಲದ ಆವರಣದಲ್ಲಿ ಜಿಲ್ಲಾಧಿಕಾರಿಗೆ ಶಾಸಕ ಸ್ವರೂಪ್ ತರಾಟೆಗೆ ತೆಗೆದುಕೊಂಡಿದ್ದಾರೆ.

  • 04 Nov 2023 01:04 PM (IST)

    Karnataka Breaking News Live: ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಎಂ ಸೂಚನೆ

    ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬರ ಪರಿಹಾರಕ್ಕೆ ಕೈಗೊಂಡ ಕ್ರಮ ಬಗ್ಗೆ ವರದಿ ನೀಡಲು ತಿಳಿಸಿದ್ದಾರೆ.

  • 04 Nov 2023 12:46 PM (IST)

    Karnataka Breaking News Live: ಟೇಪ್ ಕತ್ತರಿಸಲು ಡಿಕೆಶಿಗೇ ಕತ್ತರಿ ಕೊಟ್ಟ ಸಿದ್ದರಾಮಯ್ಯ

    ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ತಿಕ್ಕಾಟ ವಿಚಾರ ಸಂಬಂಧ ಖುದ್ದು ಡ್ಯಾಮೇಜ್‌ ಕಂಟ್ರೋಲ್‌ಗೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಪಕ್ಷದ ಅಧ್ಯಕ್ಷರೆಂಬ ನೆಲೆಯಲ್ಲಿ ಡಿಕೆ ಕೈಯಲ್ಲಿ ಸಭಾಂಗಣ ಉದ್ಘಾಟನೆ ಮಾಡಿಸಿದ್ದಾರೆ.

  • 04 Nov 2023 11:59 AM (IST)

    Karnataka Breaking News Live: ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ, ನನ್ನ ಪ್ರಯತ್ನ ಫಲಿಸಿಲ್ಲ -ಶ್ರೀರಾಮುಲು

    ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ. ಆದರೆ ನನ್ನ ಪ್ರಯತ್ನ ಫಲಿಸಿಲ್ಲ ಎಂದು ಗದಗ ನಗರದಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ನಾನು ಪ್ರಯತ್ನ ಮಾಡಿದ್ದೆ, ಆದ್ರೆ ಆಗಲ್ಲ ಅಂತಾ ಗೊತ್ತಾಯ್ತು. ಚುನಾವಣೆಯಲ್ಲಿ ಸೋತಿದ್ದೀನಿ, ಅದಕ್ಕೆ ಪಕ್ಷದ ಕೆಲಸ ಮಾಡ್ತೇನೆ.  ಖಾಲಿ ಇದ್ದೇನಲ್ಲಾ, ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದರು.

  • 04 Nov 2023 11:02 AM (IST)

    Karnataka Breaking News Live: ಬೆಂಗಳೂರಿನಲ್ಲಿ ನೈಜೀರಿಯಾ ಮೂಲದ ಡ್ರಗ್​ ಪೆಡ್ಲರ್​ ಬಂಧನ

    ಬೆಂಗಳೂರಿನಲ್ಲಿ ನೈಜೀರಿಯಾ ಮೂಲದ ಡ್ರಗ್​ ಪೆಡ್ಲರ್​ ಪೀಟರ್ ಐಕಿಡಿ ಬಿಲನ್ವೋ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿ ಪರಿಚಿತರಿಗೆ, ವಿದ್ಯಾರ್ಥಿಗಳಿಗೆ ಡ್ರಗ್ಸ್​​​ ಮಾರುತ್ತಿದ್ದ. ಬಂಧಿತನಿಂದ 5.15 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್ ಮಾತ್ರೆ ವಶಕ್ಕೆ ಪಡೆಯಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 04 Nov 2023 10:51 AM (IST)

    Karnataka Breaking News Live: ವೈದ್ಯರ ನಿರ್ಲಕ್ಷ್ಯಕ್ಕೆ ವಿಶೇಷಚೇತನ ಮಗು ಸಾವು

    ಮೈಸೂರು ಜಿಲ್ಲೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ವಿಶೇಷಚೇತನ ಮಗು ಮೃತಪಟ್ಟಿರುವ ಆರೋಪ ಕೇಳಿ ಬಂದಿದ್ದು ಮೈಸೂರಿನ ಚೆಲುವಾಂಬ ಆಸ್ಪತ್ರೆ ವಿರುದ್ಧ ಎಫ್​ಐಆರ್ ದಾಖಲಾಗಿದೆ. ವಿಪರ್ಯಾಸವೆಂದರೆ ಖುದ್ದು ನ್ಯಾಯಾಧೀಶರೇ ಬಂದು ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಿ ಎಂದರೂ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ವಿಶೇಷಚೇತನ ಮಗುವಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆ ಮಗು ಪ್ರಾಣ ಬಿಟ್ಟಿದೆ ಎಂದು ಪೋಷಕರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆಸ್ಪತ್ರೆ ವೈದ್ಯರ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

  • 04 Nov 2023 09:47 AM (IST)

    Karnataka Breaking News Live: ನಟ ದರ್ಶನ್​ಗೆ ನೋಟಿಸ್​ ನೀಡಲು ಆರ್​.ಆರ್.ನಗರ ಪೊಲೀಸರ ಸಿದ್ಧತೆ

    ನಟ ದರ್ಶನ್ ಮನೆ ನಾಯಿ ಮಹಿಳೆಗೆ ಕಚ್ಚಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್​ಗೆ ನೋಟಿಸ್​ ನೀಡಲು ಆರ್​.ಆರ್.ನಗರ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಪೊಲೀಸರು ದರ್ಶನ್ ಅವರ ಮನೆಯಲ್ಲಿನ ವ್ಯಕ್ತಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ.  ನಟ ದರ್ಶನ್  ಪ್ರಕರಣದ ಎರಡನೇ ಆರೋಪಿಯಾಗಿರುವ ಹಿನ್ನೆಲೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಿದ್ದಾರೆ.

  • 04 Nov 2023 09:38 AM (IST)

    Karnataka Breaking News Live: ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಪ್ರವಾಸಿತಾಣಗಳಿಗೆ ನಿರ್ಬಂಧ

    ಶ್ರೀರಾಮಸೇನೆ ಕಾರ್ಯಕರ್ತರಿಂದ ದತ್ತಮಾಲಾ ಅಭಿಯಾನ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಮೂರು ದಿನ ಚಂದ್ರದ್ರೋಣ ಪರ್ವತದ ಪ್ರವಾಸಿತಾಣಗಳಿಗೆ ನಿಷೇಧ ವಿಧಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

  • 04 Nov 2023 09:18 AM (IST)

    Karnataka Breaking News Live: ಸಿಎಂ ಕಾವೇರಿ ನಿವಾಸದಲ್ಲಿ ಸಚಿವರಿಗೆ ಉಪಾಹಾರಕೂಟ ಆಯೋಜನೆ

    ಸಿಎಂ ಕಾವೇರಿ ನಿವಾಸದಲ್ಲಿ ಇಂದು ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಬ್ರೇಕ್​ಫಾಸ್ಟ್ ಮೀಟಿಂಗ್ ಆಯೋಜಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಬ್ರೇಕ್​ಫಾಸ್ಟ್​​​ ಮಾಡಲಿದ್ದಾರೆ. ಪ್ರಸಕ್ತ ರಾಜಕೀಯ ಬೆಳವಣಿಗೆ, ಲೋಕಸಭಾ ಚುನಾವಣೆ ಬಗ್ಗೆ ಉಪಾಹಾರ ಕೂಟದಲ್ಲಿ ಚರ್ಚಿಸಲಿದ್ದಾರೆ. ಮೊದಲ ಹಂತದಲ್ಲಿ 15 ಸಚಿವರಿಗೆ ಆಹ್ವಾನ ನೀಡಲಾಗಿದೆ.

  • 04 Nov 2023 08:50 AM (IST)

    Karnataka Breaking News Live: ಹುಲಿ ಸೆರೆಗೆ ಆನೆಗಳ ಮೂಲಕ ಅರಣ್ಯ ಸಿಬ್ಬಂದಿಯಿಂದ ಕಾರ್ಯಾಚರಣೆ

    ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ‌ ಬಂಡೀಪುರ ಅರಣ್ಯದ ಹೆಡಿಯಾಲ ವಲಯ ವ್ಯಾಪ್ತಿಯಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಸಂಬಂಧ ಆನೆಗಳ ಮೂಲಕ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಬಂಡೀಪುರ, ರಾಂಪುರ ಆನೆ ಕ್ಯಾಂಪ್​ನಿಂದ ಆನೆಗಳನ್ನು ತಂದು ಕಾರ್ಯಾಚರಣೆ ನಡೆಸಲಾಗುತ್ತಿದೆ.

  • 04 Nov 2023 08:46 AM (IST)

    Karnataka Breaking News Live: ಅವಧಿ ಮೀರಿದ ಇಂಜಕ್ಷನ್ ನೀಡಿದ್ದ ಸಂಜೀವಿನಿ ಆಸ್ಪತ್ರೆ ವಿರುದ್ಧ FIR

    ಅವಧಿ ಮೀರಿದ ಇಂಜಕ್ಷನ್ ನೀಡಿದ್ದ ಸಂಜೀವಿನಿ ಆಸ್ಪತ್ರೆ ವಿರುದ್ಧ FIR

  • 04 Nov 2023 08:38 AM (IST)

    Karnataka Breaking News Live: ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿ ಮೈದುನ ಪರಾರಿ

    ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಸ್ವಂತ ಅಣ್ಣನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿ ಮೈದುನ ಪರಾರಿಯಾದ ಘಟನೆ ನಡೆದಿದೆ. ಗೀತಾ ಮರಿಗೌಡ(32), ಮಕ್ಕಳಾದ ಅಕುಲ್(10), ಅಂಕಿತಾ(7) ಕೊಲೆಯಾದವರು. ಮೂವರನ್ನು ಕೊಲೆ ಮಾಡಿ ಮೈದುನ ಕುಮಾರಗೌಡ್(35) ಪರಾರಿಯಾಗಿದ್ದಾನೆ. ಮೃತ ಗೀತಾ ಗಂಡ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಥಳಕ್ಕೆ ಹಾನಗಲ್ ಠಾಣೆ ಸಿಪಿಐ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 04 Nov 2023 08:04 AM (IST)

    Karnataka Breaking News Live: ಬೆಂಗಳೂರಿನಲ್ಲಿ ಕ್ರಿಕೆಟ್​ ಪಂದ್ಯಕ್ಕಾಗಿ ಪಾರ್ಕಿಂಗ್​​​​ಗೆ ಬದಲಿ ವ್ಯವಸ್ಥೆ

    ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್- ಪಾಕ್ ನಡುವೆ ವಿಶ್ವಕಪ್ ಪಂದ್ಯ ನಡೆಯಲಿದೆ.. ಹೀಗಾಗಿ ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಬದಲಿ ವ್ಯವಸ್ಥೆ ಮಾಡಲಿದೆ. ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಸೆಂಟ್‌ ಮಾರ್ಕ್ಸ್‌ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ಕಬ್ಬನ್‌ ರಸ್ತೆ, ನೃಪತುಂಗರಸ್ತೆ ಸೇರಿ ಹಲವು ಕಡೆ ವಾಹನಗಳ ನಿಲುಗಡೆಗೆ ನಿಷೇಧ ವಿಧಿಸಲಾಗಿದೆ. ವಾಹನ ನಿಲುಗಡೆಗೆ ಕಿಂಗ್‌ ರಸ್ತೆ, ಯುಬಿ ಸಿಟಿ ಪಾರ್ಕಿಂಗ್ ಸ್ಥಳ, ಶಿವಾಜಿನಗರ, BMTC ಬಸ್‌ ನಿಲ್ದಾಣದ 1ನೇ ಮಹಡಿಯಲ್ಲಿ ಅವಕಾಶ ನೀಡಲಾಗಿದೆ.

  • 04 Nov 2023 08:02 AM (IST)

    Karnataka Breaking News Live: ಕೊಪ್ಪಳ‌ ಜಿಲ್ಲಾ ಆಸ್ಪತ್ರೆಯಲ್ಲಿ ಜಿರಳೆ ಕಾಟ

    ಕೊಪ್ಪಳ‌ದ ಜಿಲ್ಲಾ ಆಸ್ಪತ್ರೆಯಲ್ಲಿ ಜಿರಳೆ ಕಾಟ ಮಿತಿಮೀರಿದೆ. ಮಕ್ಕಳ ವಾರ್ಡ್ ನಲ್ಲಿ ಜಿರಳೆ ಹಾವಳಿ ಹೆಚ್ಚಾಗಿದ್ದು ಮಕ್ಕಳ ರೋಗ ಗುಣಮುಖವಾಗೋ ಬದಲು ಹೆಚ್ಚಾಗೋ ಆತಂಕ ಉಂಟಾಗಿದೆ. ಬೆಡ್, ಬಟ್ಟೆ, ಆಹಾರದಲ್ಲಿ ಜಿರಳೆಗಳು ಓಡಾಡುತ್ತಿವೆ. ಜಿರಳೆ ಕಾಟದಿಂದ ಮಕ್ಕಳು ಮತ್ತು ಪಾಲಕರು ಕಂಗಾಲಾಗಿದ್ದಾರೆ.

Published On - Nov 04,2023 8:00 AM

Follow us
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ