
ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ (Siddaramaiah) 2026-27ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget) ಅನ್ನು ಮಾರ್ಚ್ 6 ರ ಬೆಳಗ್ಗೆ 10.15 ಗಂಟೆಗೇ ವಿಧಾನಸಭೆಯಲ್ಲಿ ಮಂಡಿಸುತ್ತಿರುವುದೇಕೆ ಎಂಬ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ. ಈ ವಿಚಾರವಾಗಿ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅಚ್ಚರಿಯ ಕಾರಣವೊಂದನ್ನು ಉಲ್ಲೇಖಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯವಾಗಿ ಬಜೆಟ್ ಮಂಡನೆ 10 ಗಂಟೆ ಅಥವಾ 11 ಗಂಟೆಗೆ ಮಾಡುವುದು ಸಾಮಾನ್ಯ. ಆದರೆ ಈ ಬಾರಿ 10.15ಕ್ಕೆ ಬಜೆಟ್ ಮಂಡನೆ ನಿಗದಿಯಾಗಿದೆ. ಇದಕ್ಕೆ ಕಾರಣವೇನು ಎಂಬ ಕುತೂಹಲ ರಾಜಕೀಯ ವಲಯದಲ್ಲೂ ಮೂಡಿದೆ.
ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ಶುಕ್ರವಾರ ಬೆಳಗ್ಗೆ 10.15 ಗಂಟೆಗೆ ವಿಧಾನಸಭೆಯಲ್ಲಿ ಈ ವರ್ಷದ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. 10.00 ಗಂಟೆ ಅಲ್ಲ, 10.30 ಗಂಟೆ ಅಲ್ಲ, 11.00 ಗಂಟೆ ಅಲ್ಲ. ಏಕೆ 10.15 ಗಂಟೆಗೆ ಎಂದು ಕುತೂಹಲದಿಂದ ವಿಚಾರಿಸಿದಾಗ ಗೊತ್ತಾಗಿದ್ದು ಈ ವಿಚಾರ. ಏಕೆಂದರೆ ಶುಕ್ರವಾರ, ಬೆಳಗ್ಗೆ 10. 30 ಗಂಟೆಯಿಂದ ರಾಹುಕಾಲ! ಬೆಳಗ್ಗೆ 7.30 ಗಂಟೆ ಯಿಂದ 9 ಗಂಟೆಯವರೆಗೂ ಗುಳಿಕಾಲ. #ಮೂಢನಂಬಿಕೆ ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಸುರೇಶ್ ಕುಮಾರ್ ಪೋಸ್ಟ್ ಮಾಡಿದ್ದಾರೆ.
ರಾಹುಕಾಲ ಆರಂಭಕ್ಕೂ ಮೊದಲು ಬಜೆಟ್ ಮಂಡನೆ ಆರಂಭಿಸಬೇಕೆಂಬ ಕಾರಣಕ್ಕೆ 10.15 ಗಂಟೆಯನ್ನು ಆಯ್ಕೆ ಮಾಡಿರಬಹುದೇ ಎಂಬ ಅನುಮಾನವನ್ನು ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ.
ಸುರೇಶ್ ಕುಮಾರ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರು ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು ಇದರಲ್ಲಿ ರಾಜಕೀಯ ಟೀಕೆ ಅಡಗಿದೆ ಎಂದು ಹೇಳಿದ್ದಾರೆ.
ಆದರೆ ಸರ್ಕಾರ ಈ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ. ಸಾಮಾನ್ಯವಾಗಿ ವಿಧಾನಸಭೆಯ ಕಾರ್ಯಚಟುವಟಿಕೆಗಳ ವೇಳಾಪಟ್ಟಿ, ವಿಧಾನಮಂಡಲದ ಪ್ರಕ್ರಿಯೆಗಳು ಹಾಗೂ ಆಡಳಿತಾತ್ಮಕ ಕಾರಣಗಳ ಆಧಾರದ ಮೇಲೆ ಸಮಯ ನಿಗದಿಯಾಗುವುದು ರೂಢಿಯಾಗಿದೆ.
ಒಟ್ಟಿನಲ್ಲಿ, 10.15 ಗಂಟೆಯ ಸಮಯದ ಹಿಂದೆ ನಿಜವಾಗಿಯೂ ಜ್ಯೋತಿಷ್ಯ ಕಾರಣವಿದೆಯೇ ಅಥವಾ ಇದು ಕೇವಲ ರಾಜಕೀಯ ವ್ಯಂಗ್ಯವೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
Published On - 10:30 am, Fri, 6 March 26