AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ? ಮುಂದಿನ ವಾರ ದೆಹಲಿಯಲ್ಲಿ ನಿರ್ಣಾಯಕ ಸಭೆ ಸಾಧ್ಯತೆ

Karnataka cabinet expansion: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಸಭೆಗಳಲ್ಲಿ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಮರಳಿದ ಬಳಿಕ ಮುಂದಿನ ವಾರ ಮತ್ತೊಮ್ಮೆ ಸಭೆ ನಡೆಸಿ ಸಚಿವರ ಪಟ್ಟಿಗೆ ಅಂತಿಮ ರೂಪ ನೀಡುವ ಸಾಧ್ಯತೆ ಇದೆ.

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ? ಮುಂದಿನ ವಾರ ದೆಹಲಿಯಲ್ಲಿ ನಿರ್ಣಾಯಕ ಸಭೆ ಸಾಧ್ಯತೆ
ಹೈಕಮಾಂಡ್ ನಾಯಕರ ಜತೆ ಕರ್ನಾಟಕ ಕಾಂಗ್ರೆಸ್ ನಾಯಕರುImage Credit source: @DKShivakumar
ಪ್ರಸನ್ನ ಗಾಂವ್ಕರ್​
| Edited By: |

Updated on: Jul 18, 2026 | 7:34 AM

Share

ಮುಖ್ಯಾಂಶಗಳು

  • ಸಂಪುಟ ವಿಸ್ತರಣೆ ಅಂತಿಮ ತೀರ್ಮಾನ ಇನ್ನೂ ಬಾಕಿ
  • ಮುಂದಿನ ವಾರ ದೆಹಲಿಯಲ್ಲಿ ನಿರ್ಣಾಯಕ ಸಭೆ ಸಾಧ್ಯತೆ
  • ಶೇ 60 ಹೊಸ ಮುಖಗಳಿಗೆ ಅವಕಾಶದ ಚರ್ಚೆ

ಬೆಂಗಳೂರು, ಜುಲೈ 18: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇನ್ನೂ ಅಂತಿಮ ಹಂತ ತಲುಪಿಲ್ಲ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ನಡೆದ ಸರಣಿ ಸಭೆಗಳಲ್ಲೂ ಅಂತಿಮ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ, ಮುಂದಿನ ವಾರ ಮತ್ತೊಮ್ಮೆ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸುವ ಸಾಧ್ಯತೆ ಇದೆ. ಆ ಸಭೆಯಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಅಂತಿಮ ರೂಪ ನೀಡುವ ನಿರೀಕ್ಷೆ ಮೂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಡುವೆ ದೆಹಲಿಯಲ್ಲಿ ಹಲವು ಸುತ್ತಿನ ಚರ್ಚೆಗಳು ನಡೆದಿದ್ದರೂ, ಸಚಿವರ ಅಂತಿಮ ಪಟ್ಟಿಗೆ ಒಪ್ಪಿಗೆ ದೊರೆಯಲಿಲ್ಲ. ಸಚಿವಾಕಾಂಕ್ಷಿಗಳು ತೀವ್ರ ನಿರೀಕ್ಷೆಯಲ್ಲಿದ್ದರೂ, ಅವರಿಗೆ ಇನ್ನೂ ಸ್ಪಷ್ಟ ಸಂದೇಶ ಸಿಕ್ಕಿಲ್ಲ.

ದೆಹಲಿಯ ಸಭೆಯಲ್ಲಿ ಅಂತಿಮ ನಿರ್ಧಾರ ಆಗದಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪೂರ್ಣ ಪ್ರಮಾಣದಲ್ಲಿ ಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದು ಪ್ರಮುಖ ಕಾರಣ ಎನ್ನಲಾಗಿದೆ. ವೈಯಕ್ತಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ಆಗಮಿಸಿದ್ದು, ಭಾನುವಾರ ದೆಹಲಿಗೆ ಮರಳುವ ನಿರೀಕ್ಷೆಯಿದೆ.

ಮುಂದಿನ ವಾರ ಮತ್ತೆ ದೆಹಲಿಯಲ್ಲಿ ಸಭೆ

ಖರ್ಗೆ ದೆಹಲಿಗೆ ಮರಳಿದ ಬಳಿಕ ಸೋಮವಾರ ಅಥವಾ ಮಂಗಳವಾರ ಮತ್ತೊಮ್ಮೆ ರಾಜ್ಯ ನಾಯಕರೊಂದಿಗೆ ಸಭೆ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ. ಈ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆಯ ಅಂತಿಮ ಪಟ್ಟಿಗೆ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ.

ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ?

ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಕೆಲವು ಪ್ರಮುಖ ಮಾನದಂಡಗಳನ್ನು ರಾಜ್ಯ ನಾಯಕರ ಮುಂದಿಟ್ಟಿರುವ ಮಾಹಿತಿ ಲಭ್ಯವಾಗಿದೆ. ಹೊಸದಾಗಿ ಸಚಿವರಾಗುವವರಲ್ಲಿ ಸುಮಾರು ಶೇ 60ರಷ್ಟು ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಜೊತೆಗೆ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳುವ ಬಗ್ಗೆಯೂ ಒತ್ತು ನೀಡಲಾಗಿದೆ. ಈ ಮಾನದಂಡಗಳ ಆಧಾರದ ಮೇಲೆ ರಾಜ್ಯ ನಾಯಕರು ಹೊಸ ಪಟ್ಟಿಯನ್ನು ಸಿದ್ಧಪಡಿಸಿ, ಹೈಕಮಾಂಡ್ ಅನುಮೋದನೆಗಾಗಿ ಸಲ್ಲಿಸುವ ಸಾಧ್ಯತೆ ಇದೆ.

ರಾಜಕೀಯ ಲೆಕ್ಕಾಚಾರಕ್ಕೂ ಆದ್ಯತೆ

ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ವಿಸ್ತರಣೆಯನ್ನು ಕೇವಲ ಖಾಲಿ ಸ್ಥಾನಗಳ ಭರ್ತಿಯಾಗಿ ಪರಿಗಣಿಸದೆ, ಸರ್ಕಾರದ ಕಾರ್ಯಕ್ಷಮತೆ, ಸಾಮಾಜಿಕ ಸಮೀಕರಣ ಹಾಗೂ ರಾಜಕೀಯ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಮುಂದುವರಿಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಶೇ 60ರಷ್ಟು ಹೊಸ ಮುಖಗಳಿಗೆ ಮಣೆಹಾಕಲು ಹೈಕಮಾಂಡ್​​ ನಿರ್ಧಾರ

ಒಟ್ಟಾರೆ, ಮೊದಲ ಹಂತದ ದೆಹಲಿ ಸಭೆಗಳು ಯಾವುದೇ ಸ್ಪಷ್ಟ ಫಲಿತಾಂಶ ನೀಡದಿದ್ದರೂ, ಮುಂದಿನ ವಾರ ನಡೆಯಲಿರುವ ಸಭೆಯೇ ಸಚಿವ ಸಂಪುಟ ವಿಸ್ತರಣೆಯ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us