ಕಾಂಗ್ರೆಸ್​ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ: ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್​ಗೆ ಬಣಗಳ ಸಿದ್ಧತೆ

ಕರ್ನಾಟಕ ಕಾಂಗ್ರೆಸ್​​ನಲ್ಲಿ ಅಧಿಕಾರ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬರುವ ಎಲ್ಲ ರೀತಿಯ ಸುಳಿವು ದೊರೆತಿದ್ದು, ಈ ಬಾರಿ ತುಸು ತೀವ್ರವಾಗಿಯೇ ಸಂಘರ್ಷ ಏರ್ಪಡುವ ಸುಳಿವು ದೊರೆತಿದೆ. ಒಂದು ಬಣ ವಿದೇಶ ಪ್ರವಾಸದ ಪ್ಲ್ಯಾನ್ ಮಾಡುತ್ತಿದ್ದರೆ, ಮತ್ತೊಂದು ಬಣ ರೆಸಾರ್ಟ್ ರಾಜಕಾರಣದ ಮೂಲಕ ಬಲ ಪ್ರದರ್ಶನ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಂಗ್ರೆಸ್​ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ: ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್​ಗೆ ಬಣಗಳ ಸಿದ್ಧತೆ
ಕಾಂಗ್ರೆಸ್​ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ!
Image Credit source: tv9
Edited By:

Updated on: Feb 11, 2026 | 9:50 AM

ಬೆಂಗಳೂರು, ಫೆಬ್ರವರಿ 11: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಕುರ್ಚಿ ಕದನ ತಾರಕಕ್ಕೇರುವ ಸುಳಿವುಗಳು ಗೋಚರಿಸುತ್ತಿವೆ. ಟೂರ್ ಪಾಲಿಟಿಕ್ಸ್ ಹಾಗೂ ರೆಸಾರ್ಟ್ ಪಾಲಿಟಿಕ್ಸ್ ಜತೆಗೆ ಆಂತರಿಕ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಗೋಚರಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಶಾಸಕರ ವಿದೇಶ ಪ್ರವಾಸ ಯೋಜನೆ ಇನ್ನೂ ಜೀವಂತವಾಗಿದ್ದು, ಇದು ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ದಾರಿ ಮಾಡಿಕೊಡಲಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 35 ಶಾಸಕರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸಕ್ಕೆ ಸಿದ್ಧತೆ ನಡೆಸಿರುವುದು ಗಮನ ಸೆಳೆದಿದೆ.

ಫೆಬ್ರವರಿ 16ರಿಂದ ಮಾರ್ಚ್ 3ರವರೆಗೆ ಪ್ರವಾಸಕ್ಕೆ ಪ್ಲ್ಯಾನ್ ಮಾಡಲಾಗಿದ್ದು, ಇದರ ಹಿಂದೆ ರಾಜಕೀಯ ಉದ್ದೇಶವಿದೆಯೇ ಎಂಬ ಅನುಮಾನಗಳು ಬಲವಾಗಿವೆ. ವಿದೇಶಿ ಪ್ರವಾಸದ ಮೂಲಕ ಶಾಸಕರ ವಿಶ್ವಾಸವನ್ನು ಗಟ್ಟಿಗೊಳಿಸಿಕೊಳ್ಳುವ ಲೆಕ್ಕಾಚಾರ ನಡೆದಿದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.

ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್

ಟೂರ್ ಪಾಲಿಟಿಕ್ಸ್​ಗೆ ಕೌಂಟರ್ ಆಗಿ ಕೆಲ ಶಾಸಕರು ರೆಸಾರ್ಟ್ ರಾಜಕೀಯದತ್ತ ಮುಖ ಮಾಡುವ ಸಾಧ್ಯತೆಯೂ ಇದೆ. ಪ್ರಭಾವಿ ನಾಯಕರ ಬೆಂಬಲಿತ ಶಾಸಕರು ಶೀಘ್ರದಲ್ಲೇ ಪ್ರತ್ಯೇಕ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ರೆಸಾರ್ಟ್‌ನಲ್ಲಿ ಸಭೆ ನಡೆಸುವ ಮೂಲಕ ಮತ್ತೊಂದು ಶಕ್ತಿ ಪ್ರದರ್ಶನ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ ಎಂಬ ಸುಳಿವು ದೊರೆತಿದೆ.

ಡಿಕೆಶಿ ದೆಹಲಿಯಿಂದ ವಾಪಸಾದ ಬೆನ್ನಲ್ಲೇ ಗರಿಗೆದರಲಿದೆ ರಾಜಕೀಯ ಚಟುವಟಿಕೆ

ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಿಂದ ವಾಪಸ್ ಬಂದ ಬಳಿಕ ಈ ರಾಜಕೀಯ ಬೆಳವಣಿಗೆಗಳು ಇನ್ನಷ್ಟು ಚುರುಕು ಪಡೆಯುವ ಸಾಧ್ಯತೆ ಇದೆ. ಬೆಂಬಲಿಗ ಶಾಸಕರು ಸಭೆ ಸೇರಿ ಮುಂದಿನ ರಾಜಕೀಯ ತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್ ಕುರ್ಚಿ ಕಾಳಗ ದೆಹಲಿಗೆ ಶಿಫ್ಟ್: ದೆಹಲಿ ತಲುಪುತ್ತಿದ್ದಂತೆಯೇ ಡಿಕೆಶಿ ನಂಬರ್ ಗೇಮ್!

ಫಾರಿನ್ ಟ್ರಿಪ್ ಮೂಲಕ ಒಂದು ಸಂದೇಶ ನೀಡಲು ಹಾಗೂ ರೆಸಾರ್ಟ್ ಪಾಲಿಟಿಕ್ಸ್ ಮೂಲಕ ಮತ್ತೊಂದು ಸಂದೇಶ ರವಾನಿಸಲು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಚಟುವಟಿಕೆಗಳು ಜೋರಾಗಿವೆ. ಇದೇ ವೇಳೆ, ವಿದೇಶಿ ಪ್ರವಾಸದ ಮಾಹಿತಿಯನ್ನು ‘ಕೈ’ ನಾಯಕರು ಬಹುತೇಕ ಗುಟ್ಟಾಗಿಯೇ ಇಟ್ಟಿರುವುದು ಕುತೂಹಲವನ್ನು ಹೆಚ್ಚಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ