
ಬೆಂಗಳೂರು, ಆಗಸ್ಟ್ 01: ಹಾಸನ ಜಿಲ್ಲೆಯಲ್ಲಿ ಬರಗಾಲದ ಭೀತಿಯ ನಡುವೆಯೂ ಕಳೆದ ಒಂದೂವರೆ ತಿಂಗಳಿನಿಂದ ಸುರಿದ ಸಾಧಾರಣ ಮಳೆಗೆ ಗೊರೂರಿನ ಹೇಮಾವತಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಕಳೆದ ಒಂದೂವರೆ ತಿಂಗಳಲ್ಲಿ ಬರೋಬ್ಬರಿ 11 ಟಿಎಂಸಿ (TMC) ನೀರು ಜಲಾಶಯವನ್ನು ಸೇರಿದ್ದು, ಜೂನ್ ಆರಂಭದಲ್ಲಿದ್ದ ನೀರಿನ ಮಟ್ಟಕ್ಕೆ ಹೋಲಿಸಿದರೆ ಪ್ರಸ್ತುತ ಜಲಾಶಯದ ನೀರು 19 ಅಡಿಗಳಷ್ಟು ಏರಿಕೆಯಾಗಿದೆ.
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ.
ಕಳೆದ 24 ಗಂಟೆಗಳಲ್ಲಿ ಕಬಿನಿ ಜಲಾಶಯ ವ್ಯಾಪ್ತಿಯಲ್ಲಿ 60 ಮಿ.ಮೀ. ಮಳೆ ದಾಖಲಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿರುವ ಕೃಷ್ಣಾ ನದಿಗೆ ನಿರ್ಮಿಸಲಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯ ಭರ್ತಿ ಹಂತ ತಲುಪಿದೆ.
ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗಾಜನೂರಿನ ತುಂಗಾ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಡ್ಯಾಂನ 22 ಕ್ರಸ್ಟ್ ಗೇಟ್‌ಗಳನ್ನು ತೆಗೆದು 55,000 ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಬಿಡಲಾಗಿದೆ. ಕೃಷಿ ಚಟುವಟಿಕೆಗೆ ಮಳೆ ಕೊರತೆಯಿಂದ ಆತಂಕದಲ್ಲಿದ್ದ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ ಹಾಗೂ ಗದಗ ಜಿಲ್ಲೆಯ ರೈತರಿಗೆ ಜಲಾಶಯ ಭರ್ತಿಯಾಗಿರುವುದು ಬೃಹತ್ ನೆಮ್ಮದಿ ತಂದಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ಜಲಾಶಯಕ್ಕೆ 11,686 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಜಲಾಶಯದ ನೀರಿನ ಮಟ್ಟ 2,890 ಅಡಿಯಿಂದ 2,909 ಅಡಿಗೆ ಏರಿಕೆಯಾಗಿದೆ. ಒಟ್ಟು 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 25.986 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಶೇ 65 ರಷ್ಟು ಭರ್ತಿಯಾಗಿದೆ. ಕಾವೇರಿ ಜಲವಿವಾದದ ನಡುವೆಯೂ ಗೊರೂರು ಜಲಾಶಯಕ್ಕೆ ನೀರು ಸಮೃದ್ಧವಾಗಿ ಹರಿದುಬರುತ್ತಿರುವುದು ಹಾಸನದ ಜನತೆ ಹಾಗೂ ರೈತರಲ್ಲಿ ಸಂತಸ ತಂದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Sat, 1 August 26