ಸೂಪರ್ ಎಲ್‌ನಿನೋ ಎಫೆಕ್ಟ್: ಕರ್ನಾಟಕದಲ್ಲಿ ಮಳೆ ಕೊರತೆ ತೀವ್ರ, ಬರಗಾಲದ ಛಾಯೆ
Karnataka Rain Deficit: ಕರ್ನಾಟಕದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಾಗಿದ್ದು, ಜಲಾಶಯಗಳ ನೀರಿನ ಮಟ್ಟ ಕುಸಿಯುತ್ತಿದೆ. ನದಿಗಳು ಬತ್ತುತ್ತಿದ್ದು, ಬೆಳೆಗಳು ಒಣಗಲಾರಂಭಿಸಿವೆ. ಸೂಪರ್ ಎಲ್‌ನಿನೋ ಪರಿಣಾಮದಿಂದ ಈ ವರ್ಷ ರಾಜ್ಯದಲ್ಲಿ ಬರಗಾಲ ಆವರಿಸುವ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈ ನಡುವೆ ಸೂಪರ್ ಎಲ್‌ನಿನೋ ಪರಿಣಾಮದ ಬಗ್ಗೆ ತಜ್ಞರು ಹಾಗೂ ಸರ್ಕಾರ ಎಚ್ಚರಿಕೆ ನೀಡಿವೆ.

ಮುಖ್ಯಾಂಶಗಳು
- ಮುಂಗಾರು ಮಳೆಯಲ್ಲಿ ಶೇ 42-43ರಷ್ಟು ಕೊರತೆ
- ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತ
- ಸೂಪರ್ ಎಲ್‌ನಿನೋದಿಂದ ಬರಗಾಲದ ಆತಂಕ
ಬೆಂಗಳೂರು, ಜೂನ್ 27: ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ (Monsoon Rain) ಕೈಕೊಟ್ಟಿದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ದೇಶದಾದ್ಯಂತ ಸರಾಸರಿಗಿಂತ ಶೇ 42ರಿಂದ 43ರಷ್ಟು ಮಳೆ ಕೊರತೆ ದಾಖಲಾಗಿದೆ. ಇದರ ಪರಿಣಾಮವಾಗಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹೊಡೆತ ಬಿದ್ದಿದ್ದು, ಜಲಾಶಯಗಳು, ನದಿಗಳು ಹಾಗೂ ಭೂಗರ್ಭಜಲದ ಮಟ್ಟವೂ ಕುಸಿಯುತ್ತಿದೆ. ಕರ್ನಾಟಕದ ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ಹಂತ ತಲುಪಿವೆ.
ಸೂಪರ್ ಎಲ್‌ನಿನೋ ಎಂದರೇನು?
ಪೆಸಿಫಿಕ್ ಸಾಗರದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವ ನೈಸರ್ಗಿಕ ಪ್ರಕ್ರಿಯೆಯನ್ನು ಎಲ್‌ನಿನೋ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆ ತೀವ್ರ ಸ್ವರೂಪ ಪಡೆದಾಗ ಅದನ್ನು ‘ಸೂಪರ್ ಎಲ್‌ನಿನೋ’ ಎಂದು ಗುರುತಿಸಲಾಗುತ್ತದೆ. ಇದರ ಪರಿಣಾಮವಾಗಿ, ಉಷ್ಣಾಂಶವುಳ್ಳ ನೀರಿನ ಹರಿವು ಏಷ್ಯಾದ ಭಾಗದತ್ತ ಹೆಚ್ಚಾಗಿ, ಭಾರತದ ಉಪಖಂಡದ ಮೇಲೆ ಒಣ ಹವಾಮಾನ ನಿರ್ಮಾಣವಾಗುತ್ತದೆ. ಪರಿಣಾಮವಾಗಿ ನೈಋತ್ಯ ಮುಂಗಾರು ಮಾರುತಗಳು ದುರ್ಬಲಗೊಂಡು, ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ.
ಭಾರತ ಮಾತ್ರವಲ್ಲ, ಹಲವು ದೇಶಗಳಿಗೆ ಬರಗಾಲ ಭೀತಿ
ಈ ಹವಾಮಾನ ವೈಪರೀತ್ಯದಿಂದ ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಬರಗಾಲ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. 1950ರ ಬಳಿಕ ಕೆಲವೇ ಬಾರಿ ಇಂತಹ ತೀವ್ರ ಎಲ್‌ನಿನೋ ದಾಖಲಾಗಿದ್ದು, 2026ರಲ್ಲಿ ಮತ್ತೊಮ್ಮೆ ಸೂಪರ್ ಎಲ್‌ನಿನೋ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಇದರ ಪರಿಣಾಮ 2027ರವರೆಗೂ ಮುಂದುವರಿಯುವ ಸಾಧ್ಯತೆ ಇವೆ.
ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
ಸದ್ಯ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಡಿಸಿಎಂ ಹಾಗೂ ಕಂದಾಯ ಸಚಿವರೂ ಆಗಿರುವ ಡಾ. ಜಿ. ಪರಮೇಶ್ವರ್ ಇತ್ತೀಚೆಗೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಂಭವನೀಯ ಬರ ಪರಿಸ್ಥಿತಿಯನ್ನು ಎದುರಿಸಲು ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು ಪೂರೈಕೆ, ಕೃಷಿ ಚಟುವಟಿಕೆಗಳ ನಿರ್ವಹಣೆ ಹಾಗೂ ನೀರಿನ ಸಂರಕ್ಷಣೆಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದ್ದಾರೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿಯೂ ನೀರಿನ ಮಟ್ಟ ಆತಂಕಕಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕಲ್ಯಾಣ ಕರ್ನಾಟಕದ ಪ್ರಮುಖ ಜಲಾಶಯವಾದ ತುಂಗಭದ್ರಾ ಅಣೆಕಟ್ಟಿನಲ್ಲಿ ಈ ವೇಳೆಗೆ ಅರ್ಧದಷ್ಟು ನೀರು ಸಂಗ್ರಹವಾಗಬೇಕಾಗಿದ್ದರೂ, 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರು ಮಾತ್ರ ಉಳಿದಿದೆ.
ಇದನ್ನೂ ಓದಿ: ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಜೀವನಾಡಿಯಾಗಿರುವ ಭೀಮಾ ನದಿಯೂ ಬಹುತೇಕ ಬರಿದಾಗಿದೆ. ಮತ್ತೊಂದೆಡೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಅಡಿಕೆ, ಕಾಫಿ ಹಾಗೂ ಮೆಣಸು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜುಲೈ ತಿಂಗಳಲ್ಲಾದರೂ ಉತ್ತಮ ಮಳೆಯಾದರೆ ಮಾತ್ರ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಇಲ್ಲವಾದರೆ ಈ ವರ್ಷ ತೀವ್ರ ಬರಗಾಲ ಆವರಿಸುವ ಆತಂಕ ಮತ್ತಷ್ಟು ಹೆಚ್ಚಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




