
ಬೆಂಗಳೂರು, (ಫೆಬ್ರವರಿ 26): ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ-2025 ( SC Internal Reservation Bill 2025) ಕೊನೆಗೂ ರಾಜ್ಯಪಾಲರು ಅಂಗೀಕರಿಸಿದ್ದಾರೆ. ಕೆಲವು ಗೊಂದಲಗಳ ಮಧ್ಯೆಯೂ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ (Thawar Chand Gehlot ), ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ ಸಹಿ ಹಾಕಿದ್ದಾರೆ. ಮೀಸಲಾತಿ ವಿಚಾರದಲ್ಲಿ ಒಳ ಪಂಗಡಗಳ ನಡುವೆ ಗೊಂದಲ ಏರ್ಪಟ್ಟಿದ್ದರಿಂದ ವಿಧೇಯಕಕ್ಕೆ ಸಹಿ ಹಾಕದೆ ಪೆಂಡಿಂಗ್ ಇಟ್ಟಿದ್ದರು. ಆದ್ರೆ, ಇಂದು (ಫೆಬ್ರವರಿ 26) ದಲಿತ ಸಮುದಾಯದ ಸಚಿವರು ರಾಜ್ಯಪಾಲರನ್ನು ಭೇಟಿ ಮಾಡಿ, ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿ ವಿಧೇಯಕಕ್ಕೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರು ಪರಿಶಿಷ್ಟ ಜಾತಿಗಳ ಮೀಸಲಾತಿ ವಿಧೇಯಕಕ್ಕೆ ಅನುಮೋದನೆ ನೀಡಿದ್ದಾರೆ.
ಕರ್ನಾಟಕ ಅನುಸೂಚಿತ ಜಾತಿಗಳ ಉಪವರ್ಗೀಕರಣ ವಿಧೇಯಕಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಅಂಕಿತ ಹಾಕಲು ನಿರಾಕರಿಸಿದ್ದು, ಹಲವು ಸ್ಪಷ್ಟನೆಗಳನ್ನು ಕೋರಿ ವಿಧೇಯಕವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಇದರಿಂದಾಗಿ ರಾಜ್ಯ ಸರ್ಕಾರದ ಒಳಮೀಸಲಾತಿ ಜಾರಿಯ ಆಶಯಕ್ಕೆ ತಾತ್ಕಾಲಿಕ ಧಕ್ಕೆ ಉಂಟಾಗಿತ್ತು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಶೇ. 6, 6 ಮತ್ತು 5ರ ಅನುಪಾತದಲ್ಲಿ ಕೋಟಾ ನಿಗದಿಪಡಿಸಲಾಗಿತ್ತು, ಆದರೆ ರಾಜ್ಯಪಾಲರು ಜನವರಿ 9 ರಂದೇ ಈ ಫೈಲ್ ವಾಪಸ್ ಕಳುಹಿಸಿದ್ದರು.
ಇದೇ ಮಾರ್ಚ್ 6ರರಂದು ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು (ಫೆಬ್ರವರಿ 26) ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಚಿವರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದಲ್ಲಿ ಬಾಕಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಹಾಗೂ ಒಳಮೀಸಲಾತಿ ಜಾರಿ ಕುರಿತು ಗಂಭೀರ ಚರ್ಚೆ ನಡೆಸಲಾಯಿತು. ಒಳಮೀಸಲಾತಿ ವಿಧೇಯಕಕ್ಕೆ ರಾಜಭವನದಲ್ಲಿ ತಡೆ ಉಂಟಾಗಿರುವ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮವಾಗಿ ಒಳಮೀಸಲಾತಿ ವಿಧೇಯಕಕ್ಕೆ ಕೂಡಲೇ ಅಂಕಿತ ಹಾಕುವಂತೆ ಕೋರಲು ರಾಜ್ಯಪಾಲರ ಬಳಿ ಸಚಿವರ ನಿಯೋಗ ತೆರಳಲು ನಿರ್ಧರಿಸಲಾಯ್ತು, ಅದರಂತೆ ಪರಿಶಿಷ್ಟ ಜಾತಿ ಸಮಯದಾಯದ ಸಚಿವರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಖಾಲಿ ಹುದ್ದೆ ನೇಮಕಾತಿಗೆ ತೊಂದರೆಯಾಗುತ್ತಿದೆ. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿರುವ ಬಗ್ಗೆಯೂ ಪ್ರಸ್ತಾಪಿಸಿ ಒಳಮೀಸಲಾತಿ ವಿಧೇಯಕಕ್ಕೆ ಸಹಿ ಹಾಕುವಂತೆ ಮಾನವಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯಪಾಲರು, ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ-2025 ಸಹಿ ಹಾಕಿದ್ದಾರೆ.
ಒಳಮೀಸಲಿಗೆ ಸಂಬಂಧಿಸಿದ ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕ-2025 ಅನ್ನು ರಾಜ್ಯಪಾಲರು ತಿರಸ್ಕರಿಸಬೇಕು ಎನ್ನುವ ಆಗ್ರಹಗಳು ಕೇಳಿಬಂದಿದ್ದವು. ಒಳಮೀಸಲಾತಿ ಬಿಟ್ಟು ಹಳೆಯ ಮೀಸಲಾತಿ ಅನ್ವಯ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಮತ್ತು ರೋಸ್ಟರ್ ಬಿಂದುವಿನಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಅದನ್ನು ಸರಿಪಡಿಸಬೇಕು. ಅಲ್ಲಿಯವರೆಗೂ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಬಾರದು ಎಂದು ಆಗ್ರಹಿಸಿ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು.
Published On - 7:24 pm, Thu, 26 February 26