ಬೆಂಗಳೂರು, (ನವೆಂಬರ್ 04): ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಈಗಾಗಲೇ ರಾಜ್ಯ ಸರ್ಕಾರ ಮೂರ್ನಾಲ್ಕು ಬಾರಿ ಬಾರಿ ಗಡುವು ವಿಸ್ತರಣೆ ಮಾಡಿದೆ. ಬರೋಬ್ಬರಿ 4 ಬಾರಿ ಸಮಯ ವಿಸ್ತರಿಸಿದರೂ ಸಹ ವಾಹನ ಮಾಲೀಕರು ತಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿದೆ. ಹೌದು..ಈ ತಿಂಗಳು ಕೊನೆ ಅಂದರೆ ನವೆಂಬರ್ 30ರವರೆಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಮಯ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಈಗಾಗಲೇ ಅವಧಿ ಮುಗಿದಿದ್ದರೂ ಸಹ ರಾಜ್ಯ ಸರ್ಕಾರ ವಾಹನ ಮಾಲೀಕರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಲೇ ಬಂದಿದೆ. ಬರೋಬ್ಬರಿ ನಾಲ್ಕು ಬಾರಿ ಗಡುವು ವಿಸ್ತರಿಸಿದೆ. ಆದರೂ ಸಹ 1.90 ಕೋಟಿ ಹಳೆ ವಾಹನಗಳ ಪೈಕಿ 55 ಲಕ್ಷ ವಾಹನಗಳಿಗೆ ಮಾತ್ರ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಇನ್ನೂ ಬಾಕಿ ವಾಹನಗಳ ಮಾಲೀಕರು ಅಳವಡಿಕೆ ಮಾಡಿಕೊಂಡಿಲ್ಲ. ಹೀಗಾಗಿ ರಾಜ್ಯ ಸಾರಿಗೆ ಇಲಾಖೆ ಇದೀಗ ಮತ್ತೊಂದು ಅವಕಾಶ ಮಾಡಿಕೊಟ್ಟಿದೆ.
ಒಂದು ವೇಳೆ ನವೆಂಬರ್ 30ರೊಳಗೆ ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳದಿದ್ದರೆ ಡಿಸೆಂಬರ್ 1ರಿಂದ ದಂಡ ವಿಧಿಸಲು ಸಾರಿಗೆ ಇಲಾಖೆ ತೀರ್ಮಾನಿಸಿದೆ. ಹೀಗಾಗಿ 2019ಕ್ಕೂ ಮೊದಲು ನೋಂದಣಿಯಾದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬೇಕಿದೆ.
ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಗರಿಷ್ಠ ಭದ್ರತೆಯ ನಂಬರ್ ಪ್ಲೇಟ್ಗಳನ್ನು ಅಳವಡಿಸಬೇಕಿದೆ. ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಎಂದರ್ಥ. ಕರ್ನಾಟಕದ ವಾಹಗಳಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಹೆಚ್ಎಸ್ಆರ್ಪಿ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್ಸಿ, ವಿಮೆ ಹಾಗೂ ಇನ್ನಿತರ ಕೆಲಸಗಳನ್ನು ಮಾಡಲಾಗುವುದಿಲ್ಲ. ಸಾರಿಗೆ ಇಲಾಖೆ ಹೊರಡಿಸಿರುವ ಈ ಸೂಚನೆಯಿಂದ ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಾಯಕವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Mon, 4 November 24