Cyber Command Centre: ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್​ಗೆ​ ಕರ್ನಾಟಕ ಚಾಲನೆ

India's first Cyber Command Centre: ಸೈಬರ್ ಅಪರಾಧ ಕೃತ್ಯಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತೊಮ್ಮೆ ಪ್ರಮುಖ ಹೆಜ್ಜೆ ಇಟ್ಟಿದೆ. ದೇಶದ ಪ್ರಪ್ರಥಮ ಸೈಬರ್ ತನಿಖಾ ಘಟಕಕ್ಕೆ ಸರ್ಕಾರ ಚಾಲನೆ ನೀಡಿದೆ. ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ಬಗ್ಗೆ ಮಾಹಿತಿ ಇಲ್ಲಿದೆ.

Cyber Command Centre: ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್​ಗೆ​ ಕರ್ನಾಟಕ ಚಾಲನೆ
ಸಾಂದರ್ಭಿಕ ಚಿತ್ರ

Updated on: Apr 10, 2025 | 1:07 PM

ಬೆಂಗಳೂರು, ಏಪ್ರಿಲ್ 10: ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ (Cyber Command Centre), ತನಿಖಾ ಘಟಕಕ್ಕೆ ಕರ್ನಾಟಕ ಸರ್ಕಾರ (Karnataka Govt) ಚಾಲನೆ ನೀಡಿದೆ. ಇದರೊಂದಿಗೆ ದೇಶದಲ್ಲಿಯೇ ಮೊತ್ತ ಮೊದಲ ಸೈಬರ್ ಕಮಾಂಡ್ ಸೆಂಟರ್ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಕೃತ್ಯಗಳ (Cyber Crime) ವಿರುದ್ಧ ಈ ತನಿಖಾ ಘಟಕ ಕಾರ್ಯಾಚರಣೆ ನಡೆಸಲಿದೆ. ಘಟಕದ ಡಿಐಜಿಯಾಗಿ ಭೂಷಣ್ ಬೊರಸೆ ಅವರನ್ನು ನೇಮಕ ಮಾಡಲಾಗಿದೆ. ಐಜಿಪಿ, ಎಸ್ಪಿ ಸೇರಿದಂತೆ ಇತರ ಸಿಬ್ಬಂದಿಯನ್ನು ಹಂತ ಹಂತವಾಗಿ ನೇಮಕ ಮಾಡಲು ಸರ್ಕಾರ ಉದ್ದೇಶಿಸಿದೆ.

ಸೈಬರ್ ಕಮಾಂಡ್ ಹೊಣೆಗಾರಿಕೆಯನ್ನು ಪೊಲೀಸ್ ಮಹಾನಿರ್ದೇಶಕರ ಶ್ರೇಣಿಯ ಐಪಿಎಸ್ ಅಧಿಕಾರಿಗೆ ವಹಿಸಲಾಗುತ್ತದೆ. ಪ್ರಣಾವ್ ಮೊಹಾಂತಿ ಅವರಿಗೆ ಹೊಣೆಗಾರಿಕೆಯನ್ನು ನೀಡಲಾಗುತ್ತಿದ್ದು, ಈ ವಿಚಾರವಾಗಿ ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.

ಸೈಬರ್ ಕಮಾಂಡ್ ಸೆಂಟರ್ ಕೆಲಸವೇನು?

ಸೈಬರ್ ಭದ್ರತೆ, ಸೈಬರ್ ಅಪರಾಧ, ರಾನ್ಸಮ್‌ವೇರ್, ಹಿಂಬಾಲಿಸುವುದು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಆನ್‌ಲೈನ್ ಅಪರಾಧಗಳು, ಸೆಕ್ಸ್‌ಟಾರ್ಷನ್, ಡಿಜಿಟಲ್ ಅರೆಸ್ಟ್ ಸೇರಿದಂತೆ ಸೈಬರ್ ವಂಚನೆಗಳು, ಡೀಪ್‌ಫೇಕ್‌ಗಳು, ಐಡೆಂಟಿಟಿ ತೆಫ್ಟ್, ಹ್ಯಾಕಿಂಗ್, ಡೇಟಾ ಉಲ್ಲಂಘನೆ, ತಪ್ಪು ಮಾಹಿತಿ ಇತ್ಯಾದಿಗಳ ವಿರುದ್ಧ ಸೈಬರ್ ಕಮಾಂಡ್ ಸೆಂಟರ್ ಕಾರ್ಯಾಚರಣೆ ನಡೆಸಲಿದೆ. ಈ ಮೊದಲು ಸೈಬರ್ ಕ್ರೈಂ ಮತ್ತು ನಾಕ್ರೊಟಿಕ್ಸ್ ವಿಭಾಗವು ಸೈಬರ್ ಅಪರಾಧ ಪ್ರಕರಣಗಳ ತನಿಖೆ ನಡೆಸುತ್ತಿತ್ತು.

ಇದನ್ನೂ ಓದಿ
ಶಾಲಾ ಶುಲ್ಕವಾಯ್ತು, ಇದೀಗ ಶಾಲಾ ವಾಹನ ಶುಲ್ಕ ಏರಿಕೆ ಸರದಿ: ಪೋಷಕರು ಪರದಾಟ
ಉಡುಪಿ ಕೃಷ್ಣ ಮಠ ರಥ ಬೀದಿಯಲ್ಲಿ ವೆಡ್ಡಿಂಗ್ ಫೋಟೊಶೂಟ್ ನಿಷೇಧ
ರೈಲ್ವೆ ಗೇಟ್​ ಬೋರ್ಡ್​ಗೆ ಮಸಿ ಬಳಿದ ಕನ್ನಡ ಪರ ಹೋರಾಟಗಾರರು, ವಿಡಿಯೋ ವೈರಲ್
ವಾಹನ ಪಾರ್ಕ್ ಮಾಡಿ ಮೆಟ್ರೋದಲ್ಲಿ ಸಂಚರಿಸುವವರಿಗೆ ಸಿಗಲಿದೆ ಡಿಸ್ಕೌಂಟ್

ದೇಶದ ಮೊದಲ ಸೈಬರ್ ಪೊಲೀಸ್ ಠಾಣೆ ಆರಂಭಿಸಿದ್ದ ಕರ್ನಾಟಕ

2001 ರಲ್ಲಿ ಭಾರತದ ಮೊದಲ ಸೈಬರ್ ಅಪರಾಧ ಪೊಲೀಸ್ ಠಾಣೆಯನ್ನು ಸ್ಥಾಪಿಸಿದ ಮೊದಲ ರಾಜ್ಯವಾಗಿಯೂ ಕರ್ನಾಟಕ ಗುರುತಿಸಿಕೊಂಡಿತ್ತು. ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ನಿಭಾಯಿಸಲು ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಇದನ್ನು ಪ್ರಾರಂಭಿಸಲಾಗಿತ್ತು. ಆ ನಂತರ 2017 ರ ಮಾರ್ಚ್​​ನಲ್ಲಿ ಬೆಂಗಳೂರಿನಲ್ಲಿ ಪ್ರತ್ಯೇಕ ಸೈಬರ್ ಅಪರಾಧ ಪೊಲೀಸ್ ಠಾಣೆ ಸ್ಥಾಪನೆಯಾಗಿತ್ತು.

ರಾಜ್ಯದಲ್ಲಿ ಸೈಬರ್ ಅಪರಾಧ ಕೃತ್ಯಗಳು ಗಣನೀಯವಾಗಿ ಹೆಚ್ಚಾಗುತ್ತಿರುವ ಕಾರಣ ತನಿಖೆಗೆ ಪ್ರತ್ಯೇಕ ಘಟಕ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಸರ್ಕಾರ ಸಮ್ಮತಿ ಸೂಚಿಸಿದ್ದು, ಈಗ ಸೈಬರ್ ಕಮಾಂಡ್ ಸೆಂಟರ್ ಗೆ ಚಾಲನೆ ನೀಡಿದೆ.

ಇದನ್ನೂ ಓದಿ: OTP ಹೇಳಿ ನಿಮ್ಮ ಖಾತೆಯಿಂದ ಹಣ ಖಾಲಿಯಾದರೆ, ಇದು ಬ್ಯಾಂಕ್ ತಪ್ಪಲ್ಲ: ಹಣವನ್ನು ಹಿಂಪಡೆಯೋದು ಹೇಗೆ?

ಒಟ್ಟು 72 ಕೋಟಿ ರೂಪಾಯಿಯ ಅನುದಾನ ನೀಡುವಂತೆ ಪೊಲೀಸ್ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈಗ ಮೊದಲ ಹಂತದಲ್ಲಿ 5 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಸರಕಾರ ಸಮ್ಮತಿಸಿದೆ ಎನ್ನಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Thu, 10 April 25