ಬೆಂಗಳೂರು, ಫೆಬ್ರವರಿ 27: ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಉತ್ಪಾದನೆ ಹೆಚ್ಚು ಒತ್ತು ನೀಡುವುದು. ಇದರ ಭಾಗವಾಗಿ ಖಾಸಗಿ ಬಂಡವಾಳವನ್ನು ಆಕರ್ಷಿಸಲು 300 ಕಿಲೋ ವ್ಯಾಟ್ ಸಾಮರ್ಥ್ಯದ ಗ್ರೀನ್ ಹೈಡೋಜನ್ ಸ್ಥಾವರವನ್ನು (Green Hydrogen Plant) ಪ್ರಾಯೋಗಿಕವಾಗಿ ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL)ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು 2023-24ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿದ್ದರು. ಅದರಂತೆ ಇದೀಗ ಕೆಆರ್‌ಇಡಿಎಲ್ ರಾಜ್ಯದಲ್ಲಿ 300 ಕಿಲೋ ವ್ಯಾಟ್ ಗ್ರೀನ್ ಹೈಡ್ರೋಜನ್ ಸ್ಥಾವರವನ್ನು ಸ್ಥಾಪಿಸಲು ನಿರ್ಧರಿಸಿದೆ.
ಇಂಧನ ಸಚಿವಾಲಯದ (MNRE) ನಿಧಿಯನ್ನು ಬಳಸಿಕೊಂಡು 10 ರೂ. ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಪ್ರಾಯೋಗಿಕ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗುವುದು. ಪಾವಗಡ ಮತ್ತು ಕಲಬುರಗಿಯನ್ನು ಯೋಜನೆಗೆ ಸ್ಥಳ ಗುರುತಿಸಲಾಗಿದೆ. ಜೊತೆಗೆ ನೀರು, ನೀರಿನ ಸಂಸ್ಕರಣಾ ಘಟಕ, ಎಲೆಕ್ಟ್ರೋಲೈಸರ್ ಯಂತ್ರ ಮತ್ತು ಟ್ಯಾಂಕರ್, ಸ್ಥಾವರಕ್ಕೆ ಸೌರ ಅಥವಾ ಗಾಳಿಯಂತಹ ಹಸಿರು ಶಕ್ತಿಯ ಮೂಲವೂ ಬೇಕಾಗುತ್ತದೆ ಎಂದು ಕೆಆರ್‌ಇಡಿಎಲ್‌ನ ಅಧಿಕಾರಿಗಳು ಹೇಳಿದ್ದಾರೆ.
ಗ್ರೀನ್ ಹೈಡ್ರೋಜನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವುದಿಲ್ಲ. ಮತ್ತು ಅದಕ್ಕೆ ನೋಡಲ್ ಏಜೆನ್ಸಿಯಾಗಿ, ನಾವು ಆ ಪ್ರಯೋಜನಗಳನ್ನು ಪ್ರದರ್ಶಿಸಬೇಕು. ಆರಂಭದಲ್ಲಿ, ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳಿಂದ ಗ್ರೀನ್ ಹೈಡ್ರೋಜನ್ ಖರೀದಿಸಲು ಬಯಸುವ ಗ್ರಾಹಕರೊಂದಿಗೆ ನಾವು ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಕೆಆರ್‌ಇಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ತಿಳಿಸಿದರು.
ಪ್ರಸ್ತುತ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಮತ್ತು ಮಂಡಳಿಯ ಅನುಮೋದನೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿರುವ ಕಾರಣ ಯೋಜನೆಯು ಆರು ತಿಂಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಗ್ರೀನ್ ಹೈಡ್ರೋಜನ್‌ಗೆ ಬೇಡಿಕೆ ಹೆಚ್ಚಾಗಿದೆ ಎಂದರು.
ಮುಂದಿನ 7 ವರ್ಷಗಳಲ್ಲಿ ಇಂಧನ ವಲಯಕ್ಕೆ ಹೆಚ್ಚಿನ ಬಂಡವಾಳವನ್ನು ಆಕರ್ಷಿಸುವ ಮೂಲಕ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯವನ್ನು 32,000 ಮೆಗಾವ್ಯಾಟ್ ನಿಂದ 60,000 ಮೆಗಾವ್ಯಾಟ್ ಗಳಿಗೆ ಹೆಚ್ಚಿಸಲಾಗುವುದು. ರಾಜ್ಯವು ಉತ್ಪಾದಿಸುತ್ತಿರುವ ವಿದ್ಯುತ್ತಿನ ಶೇ.63 ರಷ್ಟು ಇಂಧನವು ನವೀಕರಿಸಬಹುದಾದ ಇಂಧನದಿಂದ ಆಗಿರುತ್ತದೆ. ಸರ್ಕಾರದ ಸಕಾರಾತ್ಮಕ ನೀತಿಗಳಿಂದ ಈ ವಲಯದಲ್ಲಿ ಸಾವಿರಾರು ಕೋಟಿ ರೂ. ಖಾಸಗಿ ಹೂಡಿಕೆಯನ್ನು ಮಾಡಲಾಗುತ್ತಿದೆ. ಈ ನೀತಿಗಳನ್ನು ಇನ್ನಷ್ಟು ಹೂಡಿಕೆದಾರರ ಸ್ನೇಹಿಯನ್ನಾಗಿ ಮಾಡಲು ಕ್ರಮವಹಿಸಲಾಗುವುದು.
ಕೆಆರ್ಇಡಿಎಲ್ನಿಂದ ಪ್ರತೀ ಎಸ್ಕಾಂ ವ್ಯಾಪ್ತಿಯ ಆಯ್ದ ಒಂದು ಹಿಂದುಳಿದ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಮೈಕ್ರೋಗ್ರಿಡ್ ವ್ಯವಸ್ಥೆಯ (Microgrid) ಮೂಲಕ ಬ್ಯಾಟರಿ ಶೇಖರಣೆಯನ್ನು ಹೊಂದಿದ 500 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಘಟಕದ ಸ್ಥಾಪನೆಯ ಮೂಲಕ ಗ್ರಾಮಗಳನ್ನು ಸ್ವಾವಲಂಬಿ ಗ್ರಾಮಗಳನ್ನಾಗಿ ಮಾಡಲು ಉದ್ದೇಶಿಸಿದೆ.
ನವೀಕರಿಸಬಹುದಾದ ಇಂಧನವನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿ ಬೇಡಿಕೆ ಹೆಚ್ಚಿರುವ ಕೇಂದ್ರಗಳು ಮತ್ತು ಗ್ರೀನ್ ಹೈಡೋಜನ್ ಹಬ್ಗಳಿಗೆ ರವಾನಿಸಲು 765 ಕಿಲೋ ವ್ಯಾಟ್ನ ಉತ್ಪಾದಿಸಿ ಬೇಡಿಕೆ ಅಲ್ಟ್ರಾ ಹೈ ವೋಲ್ಟೆಜ್ ಟ್ರಾನ್ಸ್‌ಮಿಷನ್ ಮಾರ್ಗಗಳನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು.
ಕೃಷಿ ಪಂಪ್‌ಸೆಟ್ ಫೀಡರ್ ಸೌರೀಕರಣ ಯೋಜನೆ ಹಂತ-I ಅಡಿಯಲ್ಲಿ 1,320 ಮೆಗಾ ವ್ಯಾಟ್ ವಿಕೇಂದ್ರೀಕೃತ ಉತ್ಪಾದನೆಗೆ ಕ್ರಮವಹಿಸಲಾಗಿದೆ. ಇದರಿಂದ 3.37 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಇದಲ್ಲದೆ, ಹಂತ-II ಅಡಿಯಲ್ಲಿ 1,192 ಮೆಗಾ ವ್ಯಾಟ್ ಸೌರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ 4.30 ಲಕ್ಷ ಐ.ಪಿ ಸೆಟ್‌ಗಳನ್ನು ಸೌರೀಕರಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಘೋಷಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ