Gruha Lakshmi Scheme: ಮುಂದಿನ ತಿಂಗಳಿನಿಂದ ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮಿ ಹಣ
Gruha Lakshmi Money for Transgenders; ಈವರೆಗೆ ಮಹಿಳೆಯರಿಗೆ ಮಾತ್ರ ದೊರೆಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಮುಂದೆ ತೃತೀಯ ಲಿಂಗಿಗಳಿಗೂ ದೊರೆಯಲಿದೆ. ಈ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮುಂದಿನ ತಿಂಗಳಿನಿಂದ ಹಣ ದೊರೆಯಲಿದ್ದು, ಈ ತಿಂಗಳ ಅಂತ್ಯದ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯ ಹೇಗೆ? ಏನು ದಾಖಲೆಗಳು ಬೇಕು ಎಂಬ ಮಾಹಿತಿಯೂ ಸೇರಿದಂತೆ ಪೂರ್ಣ ವಿವರ ಇಲ್ಲಿದೆ.
ಬೆಂಗಳೂರು, ಜೂನ್ 12: ಇಷ್ಟು ದಿನ ಮಹಿಳೆಯರಿಗೆ ಮಾತ್ರ ಮೀಸಲಾಗಿದ್ದ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಇನ್ನು ಮುಂದೆ ತೃತೀಯ ಲಿಂಗಿಗಳಿಗೂ ಸಿಗಲಿದೆ. ಜಿಲ್ಲಾಧಿಕಾರಿಗಳು ವಿತರಣೆ ಮಾಡಿರುವ ಐಡಿ ಕಾರ್ಡ್ ನೀಡಿ ಗೃಹಲಕ್ಷ್ಮಿ ಹಣಕ್ಕೆ ಅರ್ಜಿ ಸಲ್ಲಿಸಬಹುದು. ತೃತೀಯ ಲಿಂಗಿಗಳಿಗೆ ಹಣ ನೀಡಲು ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆದೇಶ ಆಗಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ತಿಂಗಳ ಕೊನೆಯ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಜಿಲ್ಲಾಧಿಕಾರಿಗಳಿಂದ ವಿತರಿಲ್ಪಟ್ಟ ಗುರುತಿನ ಚೀಟಿ ಇದ್ದರೆ ತೃತೀಯ ಲಿಂಗಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ತಿಂಗಳ ಒಳಗಡೆ ಅರ್ಜಿ ಸಲ್ಲಿಕೆಯಾದ್ರೆ ಮುಂದಿನ ತಿಂಗಳೇ ತೃತೀಯ ಲಿಂಗಿಗಳ ಅಕೌಂಟ್ಗೆ ಎರಡು ಸಾವಿರ ರೂಪಾಯಿ ಹಣ ಬರಲಿದೆ.
ರಾಜ್ಯದಲ್ಲಿ 40,000 ಹೆಚ್ಚು ತೃತೀಯ ಲಿಂಗಿಗಳಿದ್ದು ಅವರ ಅಭಿವೃದ್ಧಿಗೆ ಅಥವಾ ಜೀವನೋಪಾಯಕ್ಕೆ ಗೃಹಲಕ್ಷ್ಮಿ ಹಣ ಸಹಕಾರಿಯಾಗಲಿದೆ. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಸೈಬರ್ ಸೆಂಟರ್ಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈಗಾಗಲೇ 1.24 ಕೋಟಿ ಮಂದಿ ಗೃಹಲಕ್ಷ್ಮಿ ಯೋಜನೆಗೆ ನೊಂದಾಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 1.25 ಕೋಟಿ ಮಂದಿ 2 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದು 1.5 ಲಕ್ಷ ಮಂದಿ ಜಿಎಸ್ಟಿ ಮತ್ತು ಆದಾಯ ತೆರಿಗೆ ಪಾವತಿ ದಾರರಾಗಿದ್ದು ಅವರಿಗೆ ಹಣ ಸಂದಾಯ ಸ್ಥಗಿತ ಮಾಡಲಾಗಿದೆ. ಜೊತೆಗೆ ಮೇ ತಿಂಗಳವರೆಗೂ ಹಣ ಸಂದಾಯ ಆಗಿದ್ದು ಜೂನ್ ತಿಂಗಳ ಹಣ ವರ್ವಗಾವಣೆಯಾಗಬೇಕಿದೆ.
ಇದನ್ನೂ ಓದಿ: ಸಂಚಾರ ನಿಲ್ಲಿಸಿದ ಇಂದಿರಾ ಮೊಬೈಲ್ ಕ್ಯಾಂಟೀನ್ಗಳು; ಗ್ಯಾರಂಟಿ ಗಮನದಲ್ಲಿ ಸಿಎಂ ಕನಸಿನ ಯೋಜನೆಗೆ ನಿರ್ಲಕ್ಷ್ಯ
ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮಿ ಹಣ ನೀಡುವ ಬಗ್ಗೆ ತೃತೀಯ ಲಿಂಗಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಜನ ಮಂಗಳಮುಖಿಯರು ಕಷ್ಟದಲ್ಲಿದ್ದಾರೆ. ಅಂತಹವರಿಗೆ ಈ ಹಣ ಸಾಕಷ್ಟು ಅನುಕೂಲವಾಗಲಿದೆ. ಐದು ಸ್ಕೀಮ್ ಪೈಕಿ ಶಕ್ತಿ ಯೋಜನೆ ನಮ್ಮ ಕೈ ಸೇರಿತ್ತು. ಆದ್ರೆ ಗೃಹಲಕ್ಷ್ಮಿ ಹಣ ಸಿಕ್ಕಿರಲಿಲ್ಲ. ಇದೀಗ ಎಲ್ಲ ಮಹಿಳೆಯರಂತೆ ನಮಗೂ ಈ ಹಣ ಸಿಗಲಿದೆ ಎಂದು ಸರ್ಕಾರಕ್ಕೆ ದನ್ಯವಾದ ತಿಳಿಸಿದ್ದಾರೆ. ಫಲಾನುಭವಿಗಳಾದ ಚಿರತ ಕೊಂಕಲ್, ಐಶ್ವರ್ಯ ಎಂಬವರು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:58 am, Wed, 12 June 24