ಕೊರೊನಾ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣ ಪಡೆದ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನೋಟಿಸ್; ದಾಖಲೆ ಸಿಕ್ಕರೆ ಕ್ರಮ ಕೈಗೊಳ್ಳುವ ಎಚ್ಚರಿಕೆ
ಒಂದುವೇಳೆ ವರದಿಯಲ್ಲಿ ಹಣ ವಸೂಲಿ ಮಾಡಿರುವ ಬಗ್ಗೆ ದಾಖಲಾತಿ ಸಿಕ್ಕರೆ ಆಸ್ಪತ್ರೆ ವಿರುದ್ದ ಕೆಪಿಎಂಇ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ವರಿಕೆ ನೀಡಿದೆ.
ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆಗೆ ಲಕ್ಷ ಲಕ್ಷ ರೂಪಾಯಿ ಹಣ ವಸೂಲಿ ಮಾಡುತ್ತಾ ಜನರ ಅಸಹಾಯಕತೆಯನ್ನೇ ಬಂಡವಾಳವಾಗಿಸಿಕೊಂಡಿದ್ದ ಕೆಲ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ನಗರದ ಐದು ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ನೋಟಿಸ್ ಕಳುಹಿಸಲಾಗಿದ್ದು, ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ನಗರದಲ್ಲಿರುವ ಸೇಂಟ್ ಜಾನ್ಸ್ ಆಸ್ಪತ್ರೆ, ಸ್ಪರ್ಶ್ ಆಸ್ಪತ್ರೆ, ಆತ್ರೇಯ ಆಸ್ಪತ್ರೆ, ಅಶ್ವಿನ್ ಆಸ್ಪತ್ರೆ, ಕೆಕೆ ಆಸ್ಪತ್ರೆಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ. ಕೊರೊನ ಸೋಂಕಿತರ ಚಿಕಿತ್ಸೆಗೆ ಸರ್ಕಾರ ಹಣ ನಿಗದಿ ಮಾಡಿತ್ತಾದರೂ ಕೆಲ ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ವಸೂಲಿ ಮಾಡಿರುವುದು ಪತ್ತೆಯಾಗಿದೆ. ಇದೀಗ ನೋಟಿಸ್ ನೀಡುವ ಮೂಲಕ ಬೆಡ್ ಚಾರ್ಜ್, ಐಸಿಯು ಚಾರ್ಜ್ ಸೇರಿದಂತೆ ಚಿಕಿತ್ಸೆಯ ವಿಚಾರವಾಗಿ ದರ ಪರಿಷ್ಕರಣೆ ನಂತರವೂ ನಿಗದಿಗಿಂತ ಹೆಚ್ಚಿನ ಹಣ ಪಡೆದಿರುವುವವರಿಗೆ ಬಿಸಿ ಮುಟ್ಟಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಕೊರೊನ ಸೋಂಕಿತರ ಚಿಕಿತ್ಸೆಗೆ ಪಡೆದಿರುವ ವೆಚ್ಚದ ಬಗ್ಗೆ ಮಾಹಿತಿ ಕೇಳಿರುವ ಆರೋಗ್ಯ ಇಲಾಖೆ, ಎರಡು ದಿನಗಳ ಒಳಗೆ ದಾಖಲಾದ ರೋಗಿಗಳು ಎಷ್ಟು? ವಿಧಿಸಿರುವ ವೆಚ್ಚ ಎಷ್ಟು? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ಒಂದುವೇಳೆ ವರದಿಯಲ್ಲಿ ಹಣ ವಸೂಲಿ ಮಾಡಿರುವ ಬಗ್ಗೆ ದಾಖಲಾತಿ ಸಿಕ್ಕರೆ ಆಸ್ಪತ್ರೆ ವಿರುದ್ದ ಕೆಪಿಎಂಇ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ವರಿಕೆ ನೀಡಿದೆ.
ಆದರೆ, ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಪಾರದರ್ಶಕವಾಗಿ ವರದಿ ಸಲ್ಲಿಕೆ ಮಾಡುತ್ತವಾ? ಆರೋಗ್ಯ ಇಲಾಖೆ ಮುತುವರ್ಜಿ ವಹಿಸಿ ತನಿಖೆ ನಡೆಸುತ್ತದಾ? ಅಥವಾ ವರದಿಯಲ್ಲಿ ಹಣ ವಸೂಲಿ ಮಾಡಿರುವ ಬಗ್ಗೆ ದಾಖಲಾತಿ ಸಿಕ್ಕಿಲ್ಲ ಎಂದು ಪ್ರಕರಣವನ್ನು ಜಾಣತನದಿಂದ ಅಂತ್ಯಗೊಳಿಸಿ ಕೋಲು ಮುರಿಯಬಾರದು, ಹಾವು ಸಾಯಬಾರದು ಎಂಬ ಧೋರಣೆ ಅನುಸರಿಸಲಾಗುತ್ತದಾ? ಎನ್ನುವುದನ್ನು ಕಾದು ನೋಡಬೇಕಿದೆ.
ಖಾಸಗಿ ಆಸ್ಪತ್ರೆಗಳ ಶೇಕಡಾ 30ರಷ್ಟು ಬೆಡ್ ವಾಪಸ್ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಿಂದ ಶೇ.50ರಷ್ಟು ಬೆಡ್ ಪಡೆದಿದ್ದ ಬಿಬಿಎಂಪಿ ಅವುಗಳಲ್ಲಿ ಶೇ.30ರಷ್ಟು ಬೆಡ್‌ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಹಿಂದಿರುಗಿಸಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಬೆಡ್ ಹಿಂದಿರುಗಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳ ಶೇಕಡಾ 30ರಷ್ಟು ಬೆಡ್ ವಾಪಸ್ ಆಗಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಪ್ರಸ್ತುತ ಪಾಸಿಟಿವಿಟಿ ಪ್ರಮಾಣ ಶೇ.3.82ಕ್ಕೆ ಕುಸಿದಿದೆ. ನಿನ್ನೆಯ ವರದಿಯಲ್ಲೂ ಪಾಸಿಟಿವಿಟಿ ಪ್ರಮಾಣ ಶೇ3.82ರಷ್ಟು ದಾಖಲಾಗಿದ್ದು, ಪರಿಸ್ಥಿತಿ ಹತೋಟಿಗೆ ಬರುತ್ತಿರುವಂತೆ ಕಾಣುತ್ತಿದೆ. ಆದರೆ, ಮುಖ್ಯಮಂತ್ರಿಗಳು ಜೂನ್ 14ರಿಂದ ನಿಯಮ ಸಡಿಲಿಸುವ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ, ಜನ ದೈಹಿಕ ಅಂತರ ಮರೆತು ಪಾರ್ಕ್ಗಳಲ್ಲಿ ವಾಯುವಿಹಾರ ಮಾಡಲು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕ್ಗೆ ವಾಕಿಂಗ್ ಬಂದಿರುವ ಜನ, ಪಾರ್ಕ್ ಓಪನ್ ಇಲ್ಲದಿದ್ದರೂ ಗುಂಪುಗೂಡುತ್ತಿದ್ದಾರೆ. ಇತ್ತ ಬೆಂಗಳೂರಿನ ಶಿವಾಜಿನಗರದಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ವಹಿವಾಟು ಜೋರಾಗುತ್ತಿದೆ. ಶಿವಾಜಿನಗರದಲ್ಲಿ ಹಲವು ಅಂಗಡಿ ಮುಂಗಟ್ಟು ತೆರೆಯುತ್ತಿದ್ದು, ವ್ಯಾಪಾರಸ್ಥರು ಮಾಸ್ಕ್ ಧರಿಸದೆ ವ್ಯಾಪಾರದಲ್ಲಿ ತೊಡಗಿದ್ದಾರೆ. ಜತೆಗೆ, ವಾಹನ ಸವಾರರ ಬೇಕಾಬಿಟ್ಟಿ ಓಡಾಟವೂ ಕಂಡು ಬರುತ್ತಿದೆ. ಒಂದುವೇಳೆ ಅನ್ಲಾಕ್ ನಂತರ ನಿರ್ಲಕ್ಷ್ಯ ಮುಂದುವರೆದರೆ ಮತ್ತೆ ಪರಿಸ್ಥಿತಿ ಬಿಗಡಾಯಿಸಬಹುದೆಂದು ತಜ್ಞರು ಈ ಹಿಂದೆ ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಹಣಕಾಸು ವಂಚನೆ: ಕೊರೊನಾ ನಡುವೆಯೇ ಭಾರತದಲ್ಲಿ ಕೇವಲ 2 ತಿಂಗಳಲ್ಲಿ 150 ಕೋಟಿ ದೋಚಿದ್ದ ಚೀನಾ ವಂಚಕರು ಅರೆಸ್ಟ್
ಹೆಚ್ಚು ಹಣ ವಸೂಲಿ ಮಾಡಿದ ಆರೋಪ; ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ನೋಟಿಸ್
Published On - 7:42 am, Fri, 11 June 21