ಚುನಾವಣಾ ಬಾಂಡ್‌ ಅಕ್ರಮ: ನಿರ್ಮಲಾ ಸೀತಾರಾಮನ್‌, ಕಟೀಲ್​ ವಿರುದ್ಧದ ಎಫ್‌ಐಆರ್ ರದ್ದು

ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್​ಗೆ ಬಿಗ್​ ರಿಲೀಫ್ ಸಿಕ್ಕಿದೆ. ಈ ಚುನಾವಣಾ ಬಾಂಡ್ ರಾಜ್ಯ ರಾಜಕಾರಣದಲ್ಲೂ ಸಹ ಭಾರೀ ಸದ್ದು ಮಾಡಿತ್ತು. ಈ ಸಂಬಂಧ ಬಿಜೆಪಿ ನಾಯಕರ ವಿರುದ್ಧ ದಾಖಲಾಗಿದ್ದ ದೂರನ್ನು ಕೋರ್ಟ್ ರದ್ದುಗೊಳಿಸಿದೆ.

ಚುನಾವಣಾ ಬಾಂಡ್‌ ಅಕ್ರಮ: ನಿರ್ಮಲಾ ಸೀತಾರಾಮನ್‌, ಕಟೀಲ್​ ವಿರುದ್ಧದ ಎಫ್‌ಐಆರ್ ರದ್ದು
Follow us
Ramesha M
| Updated By: ರಮೇಶ್ ಬಿ. ಜವಳಗೇರಾ

Updated on:Dec 03, 2024 | 3:24 PM

ಬೆಂಗಳೂರು, (ಡಿಸೆಂಬರ್ 03): ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್​ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದುಗೊಳಿಸಿ ಹೈಕೋರ್ಟ್​ ಆದೇಶ ಹೊರಡಿಸಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಳಿನ್ ಕುಮಾರ್ ಕಟೀಲು ಸೇರಿದಂತೆ ಮತ್ತಿತರರ ವಿರುದ್ಧದ ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಆದರ್ಶ್ ಅಯ್ಯರ್ ಎನ್ನುವರು  ಖಾಸಗಿ ದೂರು ದಾಖಲಿಸಿದ್ದರು. ಇದನ್ನು ರದ್ದುಪಡಿಸಿವಂತೆ ನಿರ್ಮಲಾ, ಕಟೀಲ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಇಂದು (ಡಿಸೆಂಬರ್ 03) ಎಫ್​ಐಆರ್​ ರದ್ದುಪಡಿಸಿ ಆದೇಶ ಹೊರಡಿಸಿದೆ.

ಜಾರಿ ನಿರ್ದೇಶನಾಲಯದ ಮೂಲಕ ದಾಳಿ ಮಾಡಿಸುವುದಾಗಿ ಬೆದರಿಕೆಯೊಡ್ಡಿ ಪ್ರತಿಷ್ಠಿತ ಕಂಪೆನಿಗಳಿಂದ ಸುಮಾರು 8 ಸಾವಿರ ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಿರುವ ಆರೋಪದಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಜಾರಿ ನಿರ್ದೇಶಾನಲಯ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಂಸದ ನಳಿನ್‌ಕುಮಾರ್‌ ಕಟೀಲ್‌ ಹಾಗೂ ಇತರೆ ಬಿಜೆಪಿ ಮುಖಂಡರ ವಿರುದ್ಧ ಆರ್‌.ಅಯ್ಯರ್‌ ಎಂಬುವರು ಮ್ಯಾಜಿಸ್ಟ್ರೇಟ್ ಕೋರ್ಟ್​​ಗೆ ಖಾಸಗಿ ದೂರು ನೀಡಿದ್ದರು. ಬಳಿಕ ಕೋರ್ಟ್​ ಸೂಚನೆ ಮೇರೆಗೆ ತಿಲಕ್‌ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಇದನ್ನೂ ಓದಿ: ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಆರೋಪ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಈ ಪ್ರಕರಣವನ್ನು ರದ್ದುಪಡಿಸುವಂತೆ ಬಿಜೆಪಿ ನಾಯಕರು ಹೈಕೋರ್ಟ್​ ಮೆಟ್ಟಿಲೇರಿದ್ದು, ಹಿರಿಯ ವಕೀಲ ಕೆ.ಜಿ.ರಾಘವನ್ ವಾದ ಮಂಡಿಸಿದ್ದರು. ಇನ್ನು ದೂರುದಾರ  ಆದರ್ಶ್ ಅಯ್ಯರ್ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು. ಈ ವಾದ ಪ್ರತಿವಾದ ಆಲಿಸಿದ್ದ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಬಲವಂತದ ಕ್ರಮಕೈಗೊಳ್ಳದಂತೆ ಇಂದಿಗೆ ಆದೇಶ ಕಾಯ್ದಿರಿಸಿತ್ತು. ಇದೀಗ ಕೋರ್ಟ್​ ಎಫ್​ಐಆರ್​ ರದ್ದುಪಡಿಸಿ ತೀರ್ಪು ನೀಡಿದೆ.

ದೂರುದಾರನ ಆರೋಪವೇನು?

ನಿರ್ಮಲಾ ಸೀತಾರಾಮನ್‌ ಹಾಗೂ ಜಾರಿ ನಿರ್ದೇನಾಲಯದ ಅಧಿಕಾರಿಗಳು 2019 ರಿಂದ 2023 ರ ನವೆಂಬರ್‌ ಅವಧಿಯಲ್ಲಿ ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಇತರೆ ಆರೋಪಿಗಳ ಜತೆ ಒಳಸಂಚು ನಡೆಸಿ ಎಂಎನ್‌ಸಿ ಹಾಗೂ ಟಿಎನ್‌ಸಿ ಕಾರ್ಪೋರೇಟ್‌ ಕಂಪೆನಿಗಳ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಹೆದರಿಸಿ ಚುನಾವಣಾ ಬಾಂಡ್‌ ಹೆಸರಿನಲ್ಲಿ 8,000 ಕೋಟಿ ರೂ.ಗಳನ್ನು ಬಲವಂತವಾಗಿ ಸುಲಿಗೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

ನಿರ್ಮಲಾ ಸೀತಾರಾಮನ್‌ ಸೂಚನೆಯಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಾರ್ಪೊರೇಟ್‌ ಕಂಪೆನಿಗಳ ಮೇಲೆ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದರು. ಈ ದಾಳಿಗಳಿಗೆ ಹೆದರಿದ ಕಂಪೆನಿಗಳ ಸಿಇಒಗಳು, ವ್ಯವಸ್ಥಾಪಕ ನಿರ್ದೇಶಕರುಗಳು ನೂರಾರು ಕೋಟಿ ರೂ.ಗಳ ಚುನಾವಣಾ ಬಾಂಡ್‌ಗಳನ್ನು ಖರೀದಿ ಮಾಡಿದ್ದರು. ಇದರಿಂದ ಬಿಜೆಪಿ ರಾಷ್ಟ್ರ ಘಟಕ ಹಾಗೂ ರಾಜ್ಯ ಘಟಕವು ಲಾಭ ಪಡೆದಿದೆ ಎಂದು ಆರೋಪಿಸಲಾಗಿತ್ತು.

Published On - 3:04 pm, Tue, 3 December 24