
ಬೆಂಗಳೂರು, (ನವೆಂಬರ್ 20) : ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗ್ಡೆ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಇನ್ನು ಇದೇ ಪ್ರಕರಣ ಸಂಬಂಧ ಇನ್ನುಳಿದ ಮೂವರು ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ. ವಿವಾದಾತ್ಮಕ ಹೇಳಿಕೆ ನೀಡುವಂತೆ ಪ್ರತಾಪ್ ಸಿಂಹ ಅವರಿಗೆ ಆಯೋಜಕರು ಪ್ರಚೋದನೆ ನೀಡಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠ, ‘ದೂರಿನಲ್ಲಿರುವ ಅಂಶಗಳು ಮತ್ತು ಪ್ರತಾಪ ಸಿಂಹ ಅವರ ಭಾಷಣದ ನಿರ್ದಿಷ್ಟ ಅಂಶಗಳನ್ನು ಗಮನಿಸಿದರೆ, ಗಲಭೆಯನ್ನು ಪ್ರಚೋದಿಸುವ ಮತ್ತು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರತಕ್ಕಂತಹದ್ದು. ಆರೋಪಗಳ ಕುರಿತು ಅವರ ವಿರುದ್ಧ ತನಿಖೆ ನಡೆಸುವ ಅಗತ್ಯವನ್ನು ಪ್ರಕರಣ ಸೂಚಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.
ಇನ್ನು ಪ್ರತಾಪ್ ಸಿಂಹ ಅವರ ಹೇಳಿಕೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಪ್ರಕರಣದ ಇತರ ಆರೋಪಿಗಳಾದ ಕರಣ್ ಸಿ ಸುಬೇದಾರ್, ಶಿವಕುಮಾರ್ ಮತ್ತು ಗುರುರಾಜ ವಿರುದ್ಧದ ವಿಚಾರಣೆಯನ್ನು ನ್ಯಾಯಪೀಠ ಇದೇ ವೇಳೆ ರದ್ದುಪಡಿಸಿದೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ 2024ರ ಸೆಪ್ಟೆಂಬರ್ 21ರಂದು ಗಣೇಶ ವಿಸರ್ಜನೆಯ ದಿನ ನಡೆದ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಮುಖ್ಯ ಅತಿಥಿಯಾಗಿ ಮಾತನಾಡಿ, ಹಿಂದೂ ಧಾರ್ಮಿಕ ಮೆರವಣಿಗೆಗಳ ಮೇಲೆ ಏಕೆ ಕಲ್ಲುಗಳನ್ನು ತೂರಲಾಗುತ್ತದೆ. ಈದ್ ಮಿಲಾದ್ ಮೆರವಣಿಗೆಗಳ ಸಂದರ್ಭದಲ್ಲಿ ಹಿಂದೂಗಳು ಕಲ್ಲು ತೂರಿರುವ ಒಂದಾದರೂ ನಿದರ್ಶನವನ್ನು ತೋರಿಸಿ. ದೇಶದ ಜನಸಂಖ್ಯೆಯಲ್ಲಿ ಶೇಕಡಾ 80ರಷ್ಟು ಹಿಂದೂಗಳೇ ಇದ್ದಾರೆ. ಒಂದು ವೇಳೆ ಅವರೂ ಕೈಗೆ ಕಲ್ಲುಗಳನ್ನು ಎತ್ತಿಕೊಂಡರೆ ಏನಾಗಬಹುದು ಎಂದು ಹೇಳಿದ್ದರು. ಹೀಗಾಗಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಹೇಳಿಕೆ ನೀಡಿದ ಆರೋಪ ಮೇಲೆ ಭಾರತೀಯ ನ್ಯಾಯ ಸಂಹಿತಾ-2023ರ ಕಲಂ 299 ಮತ್ತು 192ರ ಅಡಿಯಲ್ಲಿ ಪ್ರತಾಪ್ ಸಿಂಹ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.